ಕನ್ನಡ ಚಾನಲ್ಲಷ್ಟೇ ನೋಡ್ತೀರಾ? 300 ರು. ನೀಡಿ!

By Web DeskFirst Published Dec 25, 2018, 10:28 AM IST
Highlights

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ವಾಹಿನಿಗಳ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಗ್ರಾಹಕರಿಗೆ ನೀಡಿ ಡಿ.29ರಿಂದ ನೂತನ ನೀತಿ ಜಾರಿಗೊಳಿಸುತ್ತಿದೆ.  ಕನ್ನಡ ಚಾನಲ್‌ಗಳನ್ನು ಮಾತ್ರವೇ ವೀಕ್ಷಣೆ ಮಾಡುತ್ತೇವೆ ಎಂದರೆ ಮಾಸಿಕವಾಗಿ ಕನಿಷ್ಠ 300 ರು. ಪಾವತಿ ಮಾಡಲೇಬೇಕಾಗುತ್ತದೆ.

ಬೆಂಗಳೂರು :  ಟೀವಿ ವೀಕ್ಷಕರು ಇನ್ನುಮುಂದೆ ಹೆಚ್ಚು ಹಣ ಕೊಟ್ಟು ಬೇರೆ ಭಾಷೆಯ ವಾಹಿನಿಗಳನ್ನು ನೋಡುವುದಿಲ್ಲ, ಕನ್ನಡ ಚಾನಲ್‌ಗಳನ್ನು ಮಾತ್ರ ವೀಕ್ಷಣೆ ಮಾಡುತ್ತೇವೆ ಎಂದಾದರೂ ಮಾಸಿಕವಾಗಿ ಕನಿಷ್ಠ 300 ರು. ಪಾವತಿಸಬೇಕಾಗಲಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ವಾಹಿನಿಗಳ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಗ್ರಾಹಕರಿಗೆ ನೀಡಿ ಡಿ.29ರಿಂದ ನೂತನ ನೀತಿ ಜಾರಿಗೊಳಿಸುತ್ತಿದೆ. ಇದರಿಂದ ಕನ್ನಡ ವಾಹಿನಿಗಳ ವೀಕ್ಷಕರು ನಾವು ಬೇರೆ ಯಾವುದೇ ಭಾಷೆಯ ಹಾಗೂ ಕ್ರೀಡೆ ಸೇರಿದಂತೆ ಇನ್ನಿತರ ವಾಹಿನಿಗಳನ್ನು ವೀಕ್ಷಣೆ ಮಾಡುವುದಿಲ್ಲ. ಈಗ ವೀಕ್ಷಣೆ ಮಾಡುತ್ತಿರುವ ಕನ್ನಡ ಚಾನಲ್‌ಗಳನ್ನು ಮಾತ್ರವೇ ವೀಕ್ಷಣೆ ಮಾಡುತ್ತೇವೆ ಎಂದು ಹೇಳಿದರೂ ಮಾಸಿಕವಾಗಿ ಕನಿಷ್ಠ 300 ರು. ಪಾವತಿ ಮಾಡಲೇಬೇಕಾಗುತ್ತದೆ.

ಕನ್ನಡದ 15 ವಾಹಿನಿ ಶುಲ್ಕ ವ್ಯಾಪ್ತಿಗೆ:  ಸುದ್ದಿವಾಹಿನಿಗಳು ಮತ್ತು ಮನರಂಜನೆ ವಾಹಿನಿಗಳು ಸೇರಿದಂತೆ ಕನ್ನಡದಲ್ಲಿ ಸುಮಾರು 65ಕ್ಕೂ ಹೆಚ್ಚು ವಾಹಿನಿಗಳಿವೆ. ಅದರಲ್ಲಿ ಒಂದೆರಡು ಸುದ್ದಿ ವಾಹಿನಿಗಳು ಮಾತ್ರ ಶುಲ್ಕ ವ್ಯಾಪ್ತಿಗೆ ಒಳಪಟ್ಟಿವೆ. ಉಳಿದಂತೆ ಎಲ್ಲವೂ ಉಚಿತವಾಗಿ ಪ್ರಸಾರವಾಗಲಿವೆ. ಇನ್ನು ಈಗಾಗಲೇ ಜನಪ್ರಿಯಗೊಂಡಿರುವ ಹಾಗೂ ಉತ್ತಮ ವೀಕ್ಷಕರ ಸಂಖ್ಯೆ ಹೊಂದಿರುವ ಸುಮಾರು 15 ಮನರಂಜನೆ ವಾಹಿನಿಗಳನ್ನು ಡಿ.29ರಿಂದ ಶುಲ್ಕ ಪಾವತಿ ಮಾಡಿಯೇ ವೀಕ್ಷಣೆ ಮಾಡಬೇಕಾಗುತ್ತದೆ.

15 ವಾಹಿನಿಗೆ 300 ರು. :  ರಾಜ್ಯದ ಜನಪ್ರಿಯ ಸುಮಾರು 15 ಮನರಂಜನೆ ವಾಹಿನಿಗಳು 10 ಪೈಸೆಯಿಂದ 19 ರುಪಾಯಿವರೆಗೆ ಮಾಸಿಕ ಶುಲ್ಕ ನಿಗದಿಪಡಿಸಿಕೊಂಡಿವೆ. 15 ಕನ್ನಡ ವಾಹಿನಿಗಳನ್ನೂ ನೋಡಬೇಕಾದರೆ ಸುಮಾರು 150 ರು.ಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕು. ಇನ್ನು ತಿಂಗಳ ಸೇವಾ ಶುಲ್ಕದ ರೂಪದಲ್ಲಿ ಪ್ರತಿ ಟೀವಿ ಸೆಟ್‌ ಟಾಪ್‌ ಬಾಕ್ಸ್‌ಗೆ 130 ರು. ಮತ್ತು ತೆರಿಗೆ ಶೇ.18ರಷ್ಟುಸೇರಿ ಒಟ್ಟಾರೆ 300 ರುಪಾಯಿಗಳನ್ನು ಮಾಸಿಕವಾಗಿ ಟೀವಿ ಪ್ರಿಯರು ಪಾವತಿಸಬೇಕಾಗುತ್ತದೆ.

ಕನ್ನಡಿಗರು ಕೇವಲ ಕನ್ನಡ ಭಾಷೆಯ ವಾಹಿನಿಗಳನ್ನು ಮಾತ್ರ ವೀಕ್ಷಣೆ ಮಾಡುವುದಿಲ್ಲ. ಹಿಂದಿ, ಇಂಗ್ಲಿಷ್‌, ತಮಿಳು, ತೆಲಗು, ಮಲೆಯಾಳಂ, ಕ್ರೀಡಾ ವಾಹಿನಿಗಳು ಸೇರಿದಂತೆ ಹಲವು ಚಾನಲ್‌ ವೀಕ್ಷಣೆ ಮಾಡುತ್ತಾರೆ. ಆ ಎಲ್ಲವನ್ನೂ ನಾವು ಕೇವಲ 300 ರುಪಾಯಿಗೆ ನೀಡುತ್ತಿದ್ದೇವೆ. ಆದರೆ ಇನ್ನು ಮುಂದೆ ಕನ್ನಡದ 15 ಚಾನಲ್‌ಗಳಿಗೇ ಗ್ರಾಹಕರು 300 ರು.ಗಿಂತ ಹೆಚ್ಚಿನ ಹಣ ಪಾವತಿಸುವ ಸ್ಥಿತಿ ಬರುತ್ತದೆ.

- ಪ್ಯಾಟ್ರಿಕ್‌ ರಾಜು, ಕರ್ನಾಟಕ ರಾಜ್ಯ ಕೇಬಲ್‌ ಟೀವಿ ಆಪರೇಟರ್‌ ಅಸೋಸಿಯೇಷನ್‌

click me!