ಆಧಾರ್ ಸಂಖ್ಯೆ ಹಾಕಿ ಸವಾಲು: ಟ್ರಾಯ್ ಮುಖ್ಯಸ್ಥರ ಖಾಸಗಿ ದಾಖಲೆ ಕನ್ನ?

By Web DeskFirst Published Jul 30, 2018, 11:00 AM IST
Highlights

ಆಧಾರ್ ಸಂಖ್ಯೆ ಹಾಕಿ ಸವಾಲೊಡ್ಡಿದ ಟ್ರಾಯ್ ಮುಖ್ಯಸ್ಥರ ಖಾಸಗಿ ದಾಖಲೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಅನೇಕರು ಮಾಹಿತಿಯನ್ನು ಪ್ರಕಟ ಮಾಡಿದ್ದಾರೆ. 

ನವದೆಹಲಿ: 12 ಅಂಕೆಗಳ ವಿಶಿಷ್ಟ ಗುರುತಿನ ಸಂಖ್ಯೆ ಆಧಾರ್ ಅತ್ಯಂತ ಸುರಕ್ಷಿತ, ಅದನ್ನು ಭೇದಿಸಲು ಆಗದು ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಖ್ಯಸ್ಥ ಆರ್.ಎಸ್. ಶರ್ಮಾ ಅವರು ತಮ್ಮ ಆಧಾರ್ ಸಂಖ್ಯೆ ಬಹಿರಂಗಪಡಿಸಿ ಒಡ್ಡಿದ್ದ ಚಾಲೆಂಜ್ ಭಾರಿ ಸಂಚಲನಕ್ಕೆ ಕಾರಣವಾಗಿದೆ. 

ಟ್ವೀಟರ್‌ನಲ್ಲಿ ಶರ್ಮಾ ಅವರು ಆಧಾರ್  ಸಂಖ್ಯೆಯನ್ನು ಪ್ರಕಟಪಡಿಸುತ್ತಿದ್ದಂತೆ, ಅವರ ಪಾನ್ ಸಂಖ್ಯೆ, ವಿಳಾಸ ಹಾಗೂ ಮೊಬೈಲ್ ನಂಬರ್‌ಗಳನ್ನು ಪ್ರಕಟಿಸಿ ಕೆಲವರು ಆಧಾರ್ ಭೇದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಇದನ್ನು ಶರ್ಮಾ ಹಾಗೂ ಆಧಾರ್ ಪ್ರಾಧಿಕಾರ ತಳ್ಳಿ ಹಾಕಿವೆ. 

ಟ್ವೀಟರ್‌ನಲ್ಲಿ ಆಧಾರ್ ಕುರಿತು ನಡೆಯುತ್ತಿದ್ದ ಚರ್ಚೆ ವೇಳೆ, ನಾನು ಆಧಾರ್ ಬಹಿರಂಗಪಡಿಸುತ್ತೇನೆ, ಹ್ಯಾಕ್ ಮಾಡಿ ತೋರಿಸಿ, ನನಗೆ ತೊಂದರೆ ಉಂಟು ಮಾಡಿ ಎಂದು ಶರ್ಮಾ ಅವರು ಸವಾಲು ಹಾಕಿದ್ದರು. ಈಲಿಯಟ್ ಅಲ್ಡರ್‌ಸನ್ ಎಂಬ ಉಪನಾಮ ಹೊಂದಿರುವ ಫ್ರಾನ್ಸ್‌ನ ಸೈಬರ್ ಭದ್ರತಾ ತಜ್ಞನೊಬ್ಬ, ಆಧಾರ್ ಜತೆ ಜೋಡಣೆಯಾಗಿರುವ ಶರ್ಮಾ ಅವರ ವಿಳಾಸ, ಫೋನ್ ನಂಬರ್, ಮತ್ತೊಂದು ದೂರವಾಣಿ ಸಂಖ್ಯೆ, ಪಾನ್ ಕಾರ್ಡ್ ವಿವರಗಳನ್ನು ಪ್ರಕಟಿಸಿದರು. ಅಲ್ಲದೆ ಶರ್ಮಾ ಅವರ ಬ್ಯಾಂಕ್ ಖಾತೆ ಆಧಾರ್ ಜತೆ ಲಿಂಕ್ ಆಗಿಲ್ಲ ಎಂದು ಹೇಳಿದರು. ಆನಂತರ ಸಾಕಷ್ಟು ಮಂದಿ ಶರ್ಮಾ ಅವರ ಹಲವು ವಿವರಗಳನ್ನು ಟ್ವೀಟ್ ಮಾಡಿದರು. ಕೆಲವರು ಶರ್ಮಾ ಅವರ ಮತದಾರರ ಗುರುತಿನ ಚೀಟಿ, ವಾಟ್ಸ್‌ಆ್ಯಪ್ ಪ್ರೊಫೈಲ್ ಪಿಕ್ಚರ್ ಎನ್ನಲಾದ ಚಿತ್ರವನ್ನೂ ಪ್ರಕಟಿಸಿದರು. ಈ ಬಗ್ಗೆ ಭಾರಿ ಚರ್ಚೆಯೇ ನಡೆಯಿತು.

ಈ ಕುರಿತು ಪ್ರತಿಕ್ರಿಯೆ ನೀಡಿದ ಶರ್ಮಾ ಅವರು, ನನ್ನ ಎಲ್ಲ ಬ್ಯಾಂಕ್ ಖಾತೆಗಳು ಆಧಾರ್ ಜತೆ ಲಿಂಕ್ ಆಗಿವೆ. ಆಧಾರ್ ಭೇದಿಸಿದ್ದೇವೆ ಎಂದು ಹಳೆಯ ವಿಳಾಸವನ್ನು ಪ್ರಕಟಿಸಲಾಗಿದೆ. ನನ್ನ ಹೊಸ ವಿಳಾಸ ಇದಾಗಿದೆ. ಮತದಾರರ ಗುರುತಿನ ಚೀಟಿ ವಿವರ ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ ಲಭ್ಯವಿರುತ್ತದೆ ಎಂದು ಪ್ರತ್ಯುತ್ತರ ನೀಡಿದರು. 

ಈ ವೇಳೆ ಸ್ಪಷ್ಟನೆ ನೀಡಿದ ಆಧಾರ್ ಪ್ರಾಧಿಕಾರ, ಆಧಾರ್ ಮಾಹಿತಿಗಳು ಅಭೇದ್ಯವಾಗಿವೆ. ಶರ್ಮಾ ಅವರ ಕುರಿತಂತೆ ಟ್ವೀಟರ್‌ನಲ್ಲಿ ಪ್ರಕಟವಾಗುತ್ತಿರುವ ಮಾಹಿತಿಗಳು ಬೇರೆ ಕಡೆಯಿಂದ ಪಡೆದಿದ್ದಾಗಿರಬಹುದು. ಆಧಾರ್ ಅನ್ನು ಭೇದಿಸಲು ಆಗಿಲ್ಲ ಎಂದು ಹೇಳಿದೆ.

click me!