
ನವದೆಹಲಿ (ಜ.21): ಬಿಜೆಪಿ ಹಾಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ತಲೆದಂಡ ಪಡೆಯಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸಜ್ಜಾಗುತ್ತಿದೆ.
ತೊಗಾಡಿಯಾ, ವಿಎಚ್‌ಪಿ ಅಂತ ರಾಷ್ಟ್ರೀಯ ಅಧ್ಯಕ್ಷ ರಾಘವ ರೆಡ್ಡಿ ಹಾಗೂ ಭಾರತೀಯ ಮಜದೂರ್ ಸಂಘದ ಪ್ರಧಾನ ಕಾರ್ಯದರ್ಶಿ ವೀರಜೇಶ್ ಉಪಾಧ್ಯಾಯ ಅವರು ತಮ್ಮದೇ ಆದ ಅಜೆಂಡಾ ಮುಂದಿಟ್ಟುಕೊಂಡು ಸರ್ಕಾರಕ್ಕೆ ಮುಜುಗರ ಸೃಷ್ಟಿಸುತ್ತಿದ್ದಾರೆ ಎಂಬ ಆಕ್ರೋಶ ಆರ್'ಎಸ್'ಎಸ್'ಗಿದೆ ಈ ಎರಡೂ ಸಂಘಟನೆಗಳಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು ಇದ್ದರೂ, ಸಂಘದ ಸಿದ್ಧಾಂತ ಪಸರಿಸಲು ಅವರನ್ನು ಬಳಸಿಕೊಂಡಿಲ್ಲ ಎಂಬ ಅಸಮಾಧಾನವೂ ಇದೆ. ಈ ಹಿನ್ನೆಲೆಯಲ್ಲಿ ವಿಎಚ್‌ಪಿಯಲ್ಲಿ ಮೊದಲು ಬದಲಾವಣೆ ತರಲು ಆರ್‌ಎಸ್'ಎಸ್ ಉದ್ದೇಶಿಸಿದೆ. ತೊಗಾಡಿಯಾ ಹಾಗೂ ರೆಡ್ಡಿ ಅವರಿಗೆ ಹುದ್ದೆಯಿಂದ ಕೆಳಗಿಳಿಯಲು ಆರಂಭದಲ್ಲಿ ಸೂಚನೆ ನೀಡಲಾಗುತ್ತದೆ. ಇಲ್ಲದೇ ಹೋದರೆ ಫೆಬ್ರವರಿ ಅಂತ್ಯದಲ್ಲಿ ವಿಎಚ್‌ಪಿ ಕಾರ್ಯಕಾರಿ ಸಮಿತಿ ಸಭೆ ಕರೆದು, ಚುನಾವಣೆ ನಡೆಸುವ ಮೂಲಕ ಹಾಲಿ ಪದಾಧಿಕಾರಿಗಳನ್ನು ಬದಲಿಸಲಾಗುತ್ತದೆ.
ಸಂಘ ಪರಿವಾರದ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯಾಗಿರುವ ‘ಪ್ರತಿನಿಧಿ ಸಭೆ’ ಮಾರ್ಚ್‌ನಲ್ಲಿ ನಿಗದಿಯಾಗಿದೆ. ಅದಕ್ಕೂ ಮುಂಚೆ ವಿಎಚ್‌ಪಿಗೆ ಹೊಸ ಅಧ್ಯಕ್ಷರು ಬರಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಸರ್ಕಾರದ ಜತೆ ಮುಂಚೂಣಿ ಸಂಘಟನೆಗಳು ಸಂಘರ್ಷಕ್ಕೆ ಇಳಿಯಬಾರದು. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು. ಇಲ್ಲದೇ ಹೋದರೆ ೨೦೧೯ರ ಲೋಕಸಭೆ ಚುನಾವಣೆಗೂ ಮುನ್ನ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂಬ ವಾದ ಆರೆಸ್ಸೆಸ್‌ನದ್ದಾಗಿದೆ. ತಮ್ಮನ್ನು ಬಿಜೆಪಿ ಆಳ್ವಿಕೆಯ ರಾಜಸ್ಥಾನ ಪೊಲೀಸರು ಎನ್‌ಕೌಂಟರ್ ನಡೆಸಲು ಯತ್ನಿಸುತ್ತಿದ್ದಾರೆ ಎಂದಿದ್ದರು ತೊಗಾಡಿಯಾ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.