
ಬೆಂಗಳೂರು[ಆ.28]: ಯೋಗ ಹಾಗೂ ಯೋಗ್ಯತೆ ಇರುವವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದಿದ್ದ ಬಿಜೆಪಿ ಇದೀಗ ಕ್ರಿಮಿನಲ್ ಹಿನ್ನೆಲೆ ಇದ್ದರೆ ಮಾತ್ರ ಸಚಿವರಾಗಲು ಪಕ್ಷದಲ್ಲಿ ಅವಕಾಶ ದೊರೆಯುತ್ತದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ. ಉಗ್ರಪ್ಪ ಲೇವಡಿ ಮಾಡಿದ್ದಾರೆ.
ತಮ್ಮ ಈ ಹೇಳಿಕೆಗೆ ಚುನಾವಣಾ ಆಯೋಗದಿಂದ ಪಡೆದುಕೊಂಡ ಸಚಿವರ ಅಫಿಡವಿಟ್‌ಗಳನ್ನು ಒದಗಿಸಿರುವ ಅವರು, ಯಡಿಯೂರಪ್ಪ ಅವರ ಸಂಪುಟದ 18 ಸಚಿವರ ಪೈಕಿ 10 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇವೆ ಎಂದು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಾಗುವುದಕ್ಕೆ ಯೋಗ ಮತ್ತು ಯೋಗ್ಯತೆ ಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದರು. ಚುನಾವಣಾ ಆಯೋಗಕ್ಕೆ ಬಿಜೆಪಿಯವರು ಸಲ್ಲಿಸಿದ್ದ ಅಫಿಡವಿಟ್ ತೆಗೆದುಕೊಂಡಿದ್ದು, 18ರಲ್ಲಿ ಹತ್ತು ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಇದೇ ಅವರ ಯೋಗ ಮತ್ತು ಯೋಗ್ಯತೆ ಎನ್ನಿಸುತ್ತದೆ ಎಂದು ಟೀಕಿಸಿದರು.
ಕರ್ನಾಟಕ ರಾಜಕೀಯಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯಲ್ಲಿ ‘ನಮಸ್ತೆ ಸದಾ ವತ್ಸಲೆ’ ಎನ್ನುವವರಿಗೆ ಯೋಗ್ಯತೆ ಇಲ್ಲ. ಕ್ರಿಮಿನಲ್ ಕೇಸು ಇರುವವರಿಗೆ ಮಾತ್ರ ಯೋಗ್ಯತೆ ಇದೆ ಎನ್ನುವುದು ಈಗಿನ ಸಚಿವ ಸಂಪುಟ ನೋಡಿದಾಗ ಗೊತ್ತಾಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಯಾರು ಚೂರಿ ಹಾಕಿದ್ದರೋ ಅವರಿಗೆ ಮಾತ್ರ ಸಚಿವರಾಗಲು ಯೋಗ್ಯತೆ ಇದೆ ಅನ್ನಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಿ.ಟಿ.ರವಿ, ಶ್ರೀರಾಮುಲು, ಅಶೋಕ್ ಅವರೆಲ್ಲ ತಾವೇ ಪಕ್ಷ ಕಟ್ಟಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದರು. ಆದರೆ, ಇವರೆಲ್ಲ ಕೇವಲ ಮಂತ್ರಿಗಳಾಗುವುದಕ್ಕೆ ಮಾತ್ರ ಯೋಗ್ಯತೆ ಇರುವವರು. ನಿಮಗೆಲ್ಲ ಯೋಗ್ಯತೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ನಾಯಕರು ಕಪಾಳಮೋಕ್ಷ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಾಗಿ ಈಗ ಸಚಿವರಾಗಿರುವ ಬಿಜೆಪಿ ನಾಯಕರಿಗೆ ಸ್ವಾಭಿಮಾನ ಇದ್ದರೆ ಕೂಡಲೇ ರಾಜೀನಾಮೆ ಕೊಟ್ಟು ಸಚಿವ ಸಂಪುಟದಿಂದ ಹೊರ ಬರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರೇ ನಿಮಗೆ ಕಪಾಳ ಮೋಕ್ಷ ಮಾಡಲಿದ್ದಾರೆ ಎಂದ ಅವರು, ರಾಜ್ಯದಲ್ಲಿ ಸರ್ಕಾರ ಇದೆಯೇ ಇಲ್ಲವೇ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ. ಅಧಿಕಾರಕ್ಕಾಗಿ ಕಿತ್ತಾಡಿಕೊಳ್ಳುವಂತ ಪರಿಸ್ಥಿತಿ ಇದ್ದು, ರಾಜ್ಯ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.