
ಬೆಂಗಳೂರು(ಮೇ.24): ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿ ಬಿದ್ದಿರುವ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಈಗ ತಂತ್ರ ಹೂಡಲು ಚಿಂತಿಸಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿನ ಬೋಗಸ್ ಬಿಪಿಎಲ್ ಕಾರ್ಡ್ಗಳ ಹಂಚಿಕೆಯಲ್ಲಿನ ಅಕ್ರಮಗಳ ಕುರಿತು ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ್ದ ವರದಿ ಆಧರಿಸಿ ಕ್ರಮ ಕೈಗೊಳ್ಳಲಿದೆ ಎಂದು ಸರ್ಕಾರದ ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.
ಕಳೆದ 6 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಈ ವರದಿ ಸಲ್ಲಿಕೆಯಾಗಿತ್ತು. ಅಂದಿನಿಂದಲೂ ಈ ವರದಿಯತ್ತ ಯಾವ ಸರ್ಕಾರವೂ ಕ್ರಮಕ್ಕೆ ಮುಂದಾಗಿರಲಿಲ್ಲ. ಹೀಗಾಗಿ 6 ವರ್ಷಗಳಿಂದಲೂ ವರದಿಗೆ ಮೆತ್ತಿಕೊಂಡಿದ್ದ ಧೂಳನ್ನು ಒರೆಸಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ. ಅಲ್ಲದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಹಾರ, ನಾಗರೀಕ ಸರಬರಾಜು ಇಲಾಖೆಯ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಮತ್ತು ಡಿ.ಎನ್. ಜೀವರಾಜ್ ಅವರನ್ನು ಮುಜುಗರಕ್ಕೀಡು ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯ ಭಾಗವಾಗಿರುವ ಬಿಪಿಎಲ್ ಕಾರ್ಡ್ಗಳ ಹಂಚಿಕೆ ಮತ್ತು ಫಲಾನುಭವಿಗಳ ಆಯ್ಕೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಅದರಲ್ಲೂ ಬೋಗಸ್ ಕಾರ್ಡ್ಗಳಿಂದ ಸರ್ಕಾರಕ್ಕೆ ತಿಂಗಳಿಗೆ ನೂರಾರು ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಹೇಳಲಾಗಿತ್ತು. ಈ ಅಕ್ರಮಗಳ ವಾಸನೆಯ ಜಾಡು ಹಿಡಿದಿದ್ದ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಈ ಹಗರಣದ ಹುತ್ತಕ್ಕೆ ಕೈ ಹಾಕಿದ್ದರು. ಈ ಹಗರಣವನ್ನು ತನಿಖೆ ನಡೆಸಲು ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಡಾ.ಆರ್.ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದಲ್ಲಿ 2016ರಲ್ಲಿ ತನಿಖಾ ತಂಡವನ್ನು 2010ರಲ್ಲಿ ನೇಮಿಸಿದ್ದರು. ಈ ತಂಡ ನೀಡಿದ್ದ ವರದಿ ಆಧರಿಸಿ ಸಂತೋಷ್ ಹೆಗ್ಡೆ ಅವರು ಜುಲೈ 26,2011ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದರು. ವರದಿ ಸಲ್ಲಿಕೆಯಾದ ವರ್ಷದಲ್ಲಿ ಶೋಭಾ ಕರಂದ್ಲಾಜೆ ಅವರು ಆಹಾರ, ನಾಗರೀಕ ಸರಬರಾಜು ಇಲಾಖೆಯ ಸಚಿವರಾಗಿದ್ದರು ಎಂದು ತಿಳಿದು ಬಂದಿದೆ.
1738 ಕೋಟಿ ರೂ. ನಷ್ಟವಾಗಿತ್ತು
ಬೋಗಸ್ ಕಾರ್ಡ್ಗಳಿಂದ ಸರ್ಕಾರಕ್ಕೆ 1,738 ಕೋಟಿ ರೂಪಾಯಿ ನಷ್ಟ ಸಂಭವಿಸಿತ್ತು. ಅಲ್ಲದೆ, ಒಟ್ಟು ಹಂಚಿಕೆ ನಷ್ಟದ ರೂಪದಲ್ಲಿ 54 ಕೋಟಿ 4 ಲಕ್ಷ ರೂ., ಒಟ್ಟು ಸಬ್ಸಿಡಿಯಲ್ಲಿ 5 ಕೋಟಿ 8 ಲಕ್ಷ ರೂ., ಸಾರಿಗೆಯಲ್ಲಿ 3 ಕೋಟಿ 5 ಲಕ್ಷ ರೂ.ಸೇರಿ ಒಟ್ಟು ಪ್ರತಿ ತಿಂಗಳು 144 ಕೋಟಿ 48 ಲಕ್ಷ ರೂ.ನಷ್ಟ ಸಂಭವಿಸಿತ್ತು ಎಂಬ ವಿವರಗಳು ತನಿಖಾ ವರದಿಯಲ್ಲಿವೆ ಎಂದು ಗೊತ್ತಾಗಿದೆ.
ಒಟ್ಟು ಕುಟುಂಬಗಳ ಸಂಖ್ಯೆ 120 ಲಕ್ಷ ಇದ್ದಲ್ಲಿ ಪಡಿತರ ಚೀಟಿಗಳನ್ನು ಹೊಂದಿದ್ದವರ ಸಂಖ್ಯೆ 159 ಲಲಕ್ಷ 29 ಸಾವಿರವಾಗಿತ್ತು. ಹೆಚ್ಚುವರಿಯಾಗಿದ್ದ 39 ಲಕ್ಷ 23 ಸಾವಿರ ಸಂಖ್ಯೆಯಲ್ಲಿ ಪಡಿತರ ಚೀಟಿಗಳು ಹಂಚಿಕೆ ಆಗಿದ್ದವು. 39 ಲಕ್ಷ ಸಂಖ್ಯೆಯಲ್ಲಿನ ಪಡಿತರ ಚೀಟಿಗಳ ಹೆಸರಿನಲ್ಲಿ ಹಂಚಿಕೆಯಾಗಿದ್ದ ಪಡಿತರ ಧಾನ್ಯಗಳು ಎಲ್ಲಿಗೆ ಹೋಗುತ್ತಿತ್ತು ಎಂಬುದನ್ನು ತನಿಖಾ ತಂಡ ಪತ್ತೆ ಹಚ್ಚಿತ್ತು ಎನ್ನಲಾಗಿದೆ.
ನಿಯಮಗಳ ಪ್ರಕಾರ ಬಡತನ ರೇಖೆಗಿಂತ ಕೆಳಗಿರುವ 5.8 ಲಕ್ಷ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ಗಳು ಸಿಕ್ಕಿರಲಿಲ್ಲ. ಇದರಲ್ಲಿ 4.2 ಲಕ್ಷ ಕುಟುಂಬಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿ ಎಪಿಎಲ್ ಪಟ್ಟಿಗೆ ಸೇರಿಸಿದ್ದರೆ, ಇನ್ನು ಅಧಿಕಾರಿಗಳ ಎಡವಟ್ಟಿನಿಂದಾಗಿ 1.6 ಲಕ್ಷ ಕುಟುಂಬಗಳು ಬಿಪಿಎಲ್ ಪಟ್ಟಿಗೆ ಸೇರಿರಲಿಲ್ಲ ಎಂಬ ವಿವರಗಳು ವರದಿಯಲ್ಲಿದ್ದವು ಎಂದು ತಿಳಿದು ಬಂದಿದೆ.
ಅನುರಾಗ್ ತಿವಾರಿ ನಿಗೂಢ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಬಗ್ಗು ಬಡಿಯಲು ಮುಂದಾಗಿದ್ದ ಬಿಜೆಪಿ ಮುಖಂಡರಿಗೆ ಮಣ್ಣು ಮುಕ್ಕಿಸಲು ಸಂತೋಷ್ ಹೆಗ್ಡೆ ಅವರು ನೀಡಿದ್ದ ವರದಿಗೆ ಮರು ಜೀವ ಕೊಡಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಕಾರಣವಾದಲ್ಲಿ ಅಚ್ಚರಿ ಏನಿಲ್ಲ.
ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.