ಅಡಿಕೆ ತೋಟದ ರೈತರಿಗೆ ತಲೆ ನೋವಾದ ಬಸವನ ಹುಳುವಿನ ಕಾಟ

Published : Oct 31, 2017, 03:22 PM ISTUpdated : Apr 11, 2018, 12:55 PM IST
ಅಡಿಕೆ ತೋಟದ ರೈತರಿಗೆ ತಲೆ ನೋವಾದ ಬಸವನ ಹುಳುವಿನ ಕಾಟ

ಸಾರಾಂಶ

ಈ ಹುಳುವನ್ನು ಶಂಕುಹುಳು ಎಂದೂ ಕರೆಯುತ್ತಾರೆ. ಅನೇಕ ಪ್ರಭೇದಗಳುಳ್ಳ ಈ ಹುಳುಗಳ ಪೈಕಿ ಕಂದು ಬಣ್ಣದ ವಿದೇಶಿ ಬಸವನಹುಳು ಅಡಕೆ, ಕಾಳುಮೆಣಸು, ಶುಂಠಿ, ಟೊಮೆಟೋ ಮೊದಲಾದ ತೋಟಗಾರಿಕೆ ಬೆಳೆಗಳಲ್ಲಿ ಹಾನಿ ಉಂಟುಮಾಡುತ್ತಿವೆ.

ಶಿವಮೊಗ್ಗ(ಅ.31): ಜಿಲ್ಲೆಯ ಪ್ರಮುಖ ಅರೆ ಮಲೆನಾಡು ಪ್ರದೇಶಗಳಾದ ಶಿಕಾರಿಪುರ ಮತ್ತು ಶಿವಮೊಗ್ಗ ತಾಲೂಕಿನ ಬಹಳಷ್ಟು ಅಡಕೆ ತೋಟಗಳಲ್ಲಿ ಬಸವನ ಹುಳುವಿನ ಹಾವಳಿ ತೀವ್ರವಾಗಿದೆ.

ಇತರೆ ತೋಟಗಾರಿಕೆ ಬೆಳೆಗಳಲ್ಲೂ ಹಾನಿ ಉಂಟುಮಾಡುತ್ತಿದೆ. ಈ ಹುಳುವನ್ನು ಶಂಕುಹುಳು ಎಂದೂ ಕರೆಯುತ್ತಾರೆ. ಅನೇಕ ಪ್ರಭೇದಗಳುಳ್ಳ ಈ ಹುಳುಗಳ ಪೈಕಿ ಕಂದು ಬಣ್ಣದ ವಿದೇಶಿ ಬಸವನಹುಳು ಅಡಕೆ, ಕಾಳುಮೆಣಸು, ಶುಂಠಿ, ಟೊಮೆಟೋ ಮೊದಲಾದ ತೋಟಗಾರಿಕೆ ಬೆಳೆಗಳಲ್ಲಿ ಹಾನಿ ಉಂಟುಮಾಡುತ್ತಿವೆ. ಶುಷ್ಕ ವಾತಾವರಣದಿಂದ ಆದಷ್ಟು ದೂರ ಉಳಿಯುವ ಈ ಹುಳಗಳು ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ಸಮೃದ್ಧವಾಗಿ ಕಂಡುಬರುತ್ತವೆ. ಹಗಲು ಹೊತ್ತಿನಲ್ಲಿ ಅವಿತು ಉಳಿಯುವ ಇವು ಕತ್ತಲೆ ಅಥವಾ ಮಳೆಗಾಲದಲ್ಲಿ ಆಹಾರವನ್ನು ಅರಸಿ ಹೋಗುತ್ತವೆ. ಚಲಿಸುವಾಗ ಲೋಳೆ ಪದಾರ್ಥವನ್ನು ಒಸರುವ ಬಸವನ ಹುಳುಗಳು 20ರಿಂದ 200 ಮೊಟ್ಟೆಗಳನ್ನು ಗುಂಪುಗುಂಪಾಗಿ ಮಣ್ಣಿನಲ್ಲಿ ಇಡುತ್ತವೆ. ಸಾಮಾನ್ಯವಾಗಿ 14 ರಿಂದ 30 ದಿನಗಳ ಒಳಗೆ ಮೊಟ್ಟೆ ಒಡೆದು ಮರಿಗಳು ಹೊರಬರುತ್ತದೆ. ಈ ಸಂದರ್ಭದಲ್ಲಿ ವಾತಾವರಣ ತೇವಾಂಶ ಭರಿತವಾಗಿದ್ದಲ್ಲಿ ಈ ಹುಳುಗಳು ಬೆಳೆಗಳಿಗೆ ಹಾನಿ ಮಾಡುತ್ತವೆ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಹಾನಿ ಪ್ರಮಾಣ ಉಲ್ಬಣಗೊಂಡಿದೆ.

ಸೂಚನೆ: ಬೆಳೆ ರಕ್ಷಣೆ ದೃಷ್ಟಿಯಿಂದ ಶಂಕು ಅಥವಾ ಬಸವನ ಹುಳು ನಿಯಂತ್ರಣಕ್ಕೆ ರೈತರು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಹಗಲು ಅವಿತುಕೊಳ್ಳುವ ಜಾಗಗಳಾದ ಹಲಗೆಗಳು, ಮರದ ಗರಿಗಳು, ಕೈಚೀಲ ಮತ್ತು ಕಸದ ರಾಶಿಯನ್ನು ತೆಗೆಯುವುದು. ಬಾತುಕೋಳಿ ಸಾಕಾಣಿಕೆಯಿಂದ ಹುಳುಗಳನ್ನು ನಿಯಂತ್ರಿಸಬಹುದು. ತೋಟದಲ್ಲಿ ಒದ್ದೆ ಗೋಣಿಚೀಲಗಳನ್ನು ಹಾಕಿ ಮುಂಜಾನೆ ಅವುಗಳನ್ನು ವೀಕ್ಷಿಸಿ ಅವಿತಿರುವ ಹುಳುಗಳನ್ನು ನಾಶಪಡಿಸುವುದು ಹಾಗೂ ತೋಟದ ಸುತ್ತಲೂ ಬಸಿಗಾಲುವೆ ಮಾಡಿ ಅದರಲ್ಲಿ ಸುಣ್ಣವನ್ನು ಹಾಕುವುದರಿಂದ ತಡೆಗೋಡೆಯಾಗಿ ಹುಳುವನ್ನು ನಿಯಂತ್ರಿಸಬಹುದು.

10 ಕೆಜಿ ಅಕ್ಕಿ ತೌಡು, 1 ಕೆಜಿ ಬೆಲ್ಲ ಮಿಶ್ರ ಮಾಡಿ ರಾತ್ರಿಯಿಡೀ ಕಳಿಯಲು ಬಿಟ್ಟು ಮಾರನೇ ದಿನದ ಸಾಯಂಕಾಲ 200 ಗ್ರಾಂ ಮೆಥೋಮಿಲ್ ವಿಷವನ್ನು ಬೆರೆಸಿ, ವಿಷಪಾಷಾಣ ಮಾಡಿ ತೋಟದ ಎಲ್ಲ ಪ್ರದೇಶದಲ್ಲೂ ಎರಚುವುದು. ಶೇ. 4ರ ಮೆಟಾಲ್ಡಿಹೈಡ್ ಗುಳಿಗೆಗಳನ್ನು ಗಿಡದ ಬುಡಕ್ಕೆ ಹಾಕುವುದು. ಸತ್ತ ಹುಳುಗಳನ್ನು ಆರಿಸಿ 2 ಮೀ. ಆಳ ಗುಂಡಿ ತೆಗೆದು ಮುಚ್ಚುವುದು ಅವಶ್ಯಕ. ಏಕೆಂದರೆ ಮೊಟ್ಟೆಗಳು ಇನ್ನೂ ಬದುಕಿರುವ ಸಾಧ್ಯತೆಗಳು ಇರುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಸ್ಸಿ ಭಾರತ ಭೇಟಿ: ರಾಹುಲ್ ಗಾಂಧಿಗೆ ಟಿ-ಶರ್ಟ್ ಉಡುಗೊರೆ ಮೆಸ್ಸಿ, ಬಂಗಾಳದಲ್ಲಿ ಫ್ಯಾನ್ಸ್ ದಾಂಧಲೆ, ಕ್ಷಮೆಯಾಚಿಸಿದ ಮಮತಾ
ಗೆಲುವಿನ ವಿಶ್ವಾಸದಲ್ಲಿ ಬೆಟ್ , ಚುನಾವಣೆ ಫಲಿತಾಂಶ ಉಲ್ಟಾ ಬೆನ್ನಲ್ಲೇ ಮೀಸೆ ಬೋಳಿಸಿದ ಮುಖಂಡ