ನರೇಂದ್ರ ಮೋದಿ ಹತ್ಯೆಗೆ 9 ವರ್ಷದಲ್ಲಿ 8 ಬಾರಿ ಸಂಚು

 |  First Published Jun 11, 2018, 8:50 AM IST
  • ನರೇಂದ್ರ ಮೋದಿ ಹತ್ಯೆಗೆ 9 ವರ್ಷದಲ್ಲಿ 8 ಬಾರಿ ಸಂಚು ನಡೆದಿದೆ
  • ಗುಜರಾತ್ ಸಿಎಂ ಆಗಿದ್ದಾಗ ಹೆಚ್ಚು ಪ್ರಯತ್ನಗಳು ನಡೆದಿವೆ

ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದ ಹಾಗೂ ಪ್ರಧಾನಿ ಅಭ್ಯರ್ಥಿಯೆಂದು ಘೋಷಣೆಯಾದಾಗಿನಿಂದ 8 ಬಾರಿ ನಡೆದಿದೆ

ಸಂಚು 1: 2009 ಜೂನ್ ಪಾಕ್ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹತ್ಯೆಗೆ ವಿಸ್ತೃತ ಸಂಚು ರೂಪಿಸಿತ್ತು. ಇದನ್ನು ವಿಕಿಲೀಕ್ಸ್ ವೆಬ್‌ಸೈಟ್ ಹೊರಗೆಳೆದಿತ್ತು. ಲಷ್ಕರ್ ನಾಯಕ ಶಫಿ ಸಂಚಿನ ರೂವಾರಿ ಎಂದೂ ತಿಳಿದುಬಂದಿತ್ತು.

Latest Videos

undefined

ಸಂಚು 2: 2011 ಡಿಸೆಂಬರ್ 2011ರಲ್ಲಿ ಸೋಫಿಯಾ ಮತ್ತು ಇರ್ಮಾ ನ್ ಎಂಬ ಇಬ್ಬರು ಪಾಕಿಸ್ತಾನಿ ಗೂಢಚಾರರನ್ನು ಭಾರತದಲ್ಲಿ ಬಂಧಿಸಲಾಗಿತ್ತು. ಹೆಚ್ಚಿನ ವಿಚಾರಣೆ ವೇಳೆ ನರೇಂದ್ರ ಮೋದಿ ಹತ್ಯೆ ಜೊತೆಗೆ ಗುಜರಾತ್‌ನಲ್ಲಿ ಪ್ರಮುಖ ಕಾರ್ಯಾಚರಣೆ ರೂಪಿಸಲು ಐಎಸ್‌ಐ ನಿರ್ಧರಿಸಿತ್ತು ಎಂದು ಇವರು ಬಾಯ್ಬಿಟ್ಟಿದ್ದರು. ಅಲ್ಲದೆ ಲಷ್ಕರ್-ಎ-ತೊಯ್ಬಾ ಮತ್ತು ಜೈಷ್-ಎ- ಮಹಮ್ಮದ್ ಸಂಘಟನೆ ಜತೆ ಸೇರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದೂ ತನಿಖೆ ವೇಳೆ ಬಯಲಾಗಿತ್ತು.

ಸಂಚು 3: 2013 ಅಕ್ಟೋಬರ್ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಈ ಸಂದರ್ಭದಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದ ‘ಹೂಂಕಾರ್ ರಾಲಿಯನ್ನುದ್ದೇಶಿಸಿ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿ ಮಾತನಾಡಬೇಕಿತ್ತು.ರಾಲಿಯಲ್ಲಿ 3 ಲಕ್ಷ ಜನರು ಭಾಗವಹಿಸಿದ್ದರು. ಆ ಈ ವೇಳೆ ಗಾಂಧಿ ಮೈದಾನ ಸೇರಿದಂತೆ ಹಲವೆಡೆ 9 ಸರಣಿ ಬಾಂಬ್ ಸ್ಫೋಟಗೊಂಡು 6 ಜನರು ಮೃತಪಟ್ಟಿದ್ದರೆ, 85 ಜನ ಗಾಯಗೊಂಡಿದ್ದರು. ಅದೃಷ್ಟವಶಾತ್ ಮೋದಿ ಅಪಾಯದಿಂದ ಪಾರಾಗಿದ್ದರು.

ಸಂಚು 4: 2015 ಮೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಗ್ರಾಮದಲ್ಲಿ ಸಾಧನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಹತ್ಯೆ ಮಾಡುವುದಾಗಿ ವ್ಯಾಟ್ಸ್ ಆ್ಯಪ್ ಮೆಸೇಜ್ ಬಂದಿತ್ತು. ಇದು ಇಡೀ ಸರ್ಕಾರವನ್ನು ಆತಂಕಕ್ಕೆ ದೂಡಿತ್ತು. ಯುಪಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದರು.

ಸಂಚು 5: 2015 ಏಪ್ರಿಲ್ ತೆಲಂಗಾಣ ಪೊಲೀಸರು ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಐವರು ಭಯೋತ್ಪಾದಕರನ್ನು ಬಂಧಿಸಿದ್ದರು. ವಾರಂಗಲ್ ಜೈಲಿನಲ್ಲಿದ್ದುಕೊಂಡೇ ಪ್ರಧಾನಿ ಹತ್ಯೆಗೆ ಸಂಚು ರೂಪಿಸಿ ಜೈಲಿನಿಂದ ತಪ್ಪಿಸಿಕೊಳ್ಳಲು ಇವರು ಯೋಜನೆ ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದರು.

ಸಂಚು 6: 2017 ಫೆಬ್ರವರಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ವೇಳೆ ಉತ್ತರ ಪ್ರದೇಶದ ಮೌ ಎಂಬಲ್ಲಿ ಬಿಜೆಪಿ ಪ್ರಚಾರದ ಬಹಿರಂಗ ಸಭೆ ಏರ್ಪಡಿಸಿತ್ತು. ಈ ವೇಳೆ, ಮೋದಿ ಹತ್ಯೆ ಬೆದರಿಕೆ ಹಾಕಲಾಗಿತ್ತು. ಗುಜರಾತ್‌ನ ಮಂತ್ರಿ ಹರೇನ್ ಪಾಂಡ್ಯ ಅವರ ಹತ್ಯೆ ಆರೋಪಿ ರಸೂಲ್ ಪಾಟೀಲ್ ಹಾಗೂ ಆತನ ಸಹಚರರು ಪ್ರಧಾನಿಯನ್ನು ರಾಕೆಟ್ ಲಾಂಚರ್ ಮೂಲಕ ಉಡಾಯಿಸುವ ಬೆದರಿಕೆ ಒಡ್ಡಿದ್ದರು.

ಸಂಚು 7: 2017ರ ಜೂನ್ ಪ್ರಧಾನಿ ನರೇಂದ್ರ ಮೋದಿ ಕೇರಳದ ಕೊಚ್ಚಿಯಲ್ಲಿ ಮೆಟ್ರೋ ರೈಲು ಸಂಚಾರದ ಉದ್ಘಾಟನೆಗೆ ತೆರಳಿದ್ದರು. ಈ ವೇಳೆ, ಅಲ್ಲಿನ ಡಿಜಿಪಿ ಸೇನ್‌ಕುಮಾರ್ ಅವರು ಪ್ರಧಾನಿಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದರು. ಆದರೆ, ಈ ಬಗೆಗಿನ ಮಾಹಿತಿ ಬಹಿರಂಗಕ್ಕೆ ಅವರು ನಿರಾಕರಿಸಿದ್ದರು. 

ಸಂಚು 8: 2018 ಜೂನ್ ಮೋದಿ ಅವರನ್ನು ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ರೀತಿಯಲ್ಲಿಯೇ ಕೊಲ್ಲಲು ನಕ್ಸಲರು ಸಂಚು ರೂಪಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಪುಣೆ ಪೊಲೀಸರು ಪತ್ತೆಹಚ್ಚಿದರು. ಜನವರಿಯಲ್ಲಿ ಮಹಾರಾಷ್ಟ್ರದ ಭೀಮಾ ಕೊರೆಗಾಂವ್ ದಲಿತ ಮೆರವಣಿಗೆ ವೇಳೆ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಿಷೇಧಿತ ಸಿಪಿಐ ಮಾವೋವಾದಿ ಸಂಘಟನೆ ಜತೆ ನಂಟು ಹೊಂದಿದ್ದ ಐವರನ್ನು ಪೊಲೀಸರು ಬಂದಿಸಿದ್ದರು. ಆ ಪೈಕಿ ಬಂಧಿತ ರೋನಾ ವಿಲ್ಸನ್ ಅವರ ದೆಹಲಿ ನಿವಾಸದಲ್ಲಿ ಮೋದಿ ಅವರ ಹತ್ಯೆ ಸಂಚಿನ ಕುರಿತ ಪತ್ರ ಸಿಕ್ಕಿದೆ.
 

click me!