ಮುಸ್ಲಿಂ ರಂಗಕರ್ಮಿ ಮನೆಯಲ್ಲಿ ಕನ್ನಡಾಂಬೆಗೆ ಮೊದಲ ಪೂಜೆ!

By Web Desk  |  First Published Nov 3, 2018, 10:35 AM IST

ವಿಜಯಪುರದ ಗಚ್ಚಿಮಹಲ್‌ ಬಡಾವಣೆಯಲ್ಲಿನ ಹಿರಿಯ ರಂಗಕರ್ಮಿ, ಕನ್ನಡಪ್ರೇಮಿ ಎಸ್‌.ಎಂ.ಖೇಡಗಿ ಅವರ ಮನೆಯಲ್ಲಿ ಪ್ರತಿ ದಿನವೂ ಕನ್ನಡಾಂಬೆಗೆ ಅಗ್ರ ಪೂಜೆ ಸಲ್ಲುತ್ತದೆ. ವಿಶೇಷವೆಂದರೆ ಖೇಡಗಿ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು ಪೂಜೆ ಸಲ್ಲಿಕೆ ವಿಶೇಷತೆಯಿಂದ ಕೂಡಿರುವುದಕ್ಕೆ ಕಾರಣವಾಗಿದೆ. 


ವಿಜಯಪುರ :  ಪ್ರತಿಯೊಬ್ಬರ ಮನೆಯಲ್ಲೂ ವಿಘ್ನ ನಿವಾರಕ ಗಣೇಶನಿಗೆ ಮೊದಲ ಪೂಜೆ ಸಲ್ಲುವುದು ಸಂಪ್ರದಾಯ. ಆದರೆ, ಇಲ್ಲೊಬ್ಬ ರಂಗಕರ್ಮಿ ಮನೆಯಲ್ಲಿ ಅಗ್ರ ಪೂಜೆ ನಡೆಯುವುದು ಕನ್ನಡಾಂಬೆಗೆ!

ಹೌದು, ವಿಜಯಪುರದ ಗಚ್ಚಿಮಹಲ್‌ ಬಡಾವಣೆಯಲ್ಲಿನ ಹಿರಿಯ ರಂಗಕರ್ಮಿ, ಕನ್ನಡಪ್ರೇಮಿ ಎಸ್‌.ಎಂ.ಖೇಡಗಿ ಅವರ ಮನೆಯಲ್ಲಿ ಪ್ರತಿ ದಿನವೂ ಕನ್ನಡಾಂಬೆಗೆ ಅಗ್ರ ಪೂಜೆ ಸಲ್ಲುತ್ತದೆ. ವಿಶೇಷವೆಂದರೆ ಖೇಡಗಿ ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಆದರೂ ಧರ್ಮದ ಗೋಡೆ ಮೀರಿ ಬದುಕುತ್ತಿದ್ದಾರೆ. ಬಾಲ್ಯದಿಂದಲೂ ಕನ್ನಡ ಪ್ರೀತಿಯನ್ನು ಬೆಳೆಸಿಕೊಂಡಿರುವ ಖೇಡಗಿ 76ರ ಈ ಇಳಿವಯಸ್ಸಲ್ಲೂ ಕನ್ನಡಾಂಬೆಯ ಸೇವೆ ಮಾಡುತ್ತಿದ್ದಾರೆ. ಕನ್ನಡ ತಾಯಿ ಭುವನೇಶ್ವರಿ ಮೇಲೆ ವಿಶೇಷ ಪ್ರೀತಿ ಹೊಂದಿರುವ ಅವರು ಬಾಲ್ಯದ ಶಿಕ್ಷಣವನ್ನೂ ಕನ್ನಡದಲ್ಲೇ ಪಡೆದಿದ್ದಾರೆ. ಮಾತ್ರವಲ್ಲ, ತಮ್ಮ ಮಕ್ಕಳು, ಮೊಮ್ಮಕ್ಕಳಿಗೂ ಉರ್ದು ಶಾಲೆ ಬದಲು ಕನ್ನಡ ಶಾಲೆಗೆ ಕಳುಹಿಸಿದ್ದಾರೆ. ಅವರಲ್ಲೂ ಕನ್ನಡಪ್ರೇಮ ಬೆಳೆಸಿದ್ದಾರೆ.

Latest Videos

undefined

ಮಹಾರಾಷ್ಟ್ರದಲ್ಲೂ ಕನ್ನಡದ ಕಂಪು:

ದಶಕಗಳಿಂದ ರಂಗಕರ್ಮಿಯಾಗಿ ದುಡಿಯುತ್ತಿರುವ ಖೇಡಗಿ ಅವರು ‘ರಂಗಚೇತನ’ ಎಂಬ ಸಂಸ್ಥೆಯನ್ನೂ ಹುಟ್ಟು ಹಾಕಿದ್ದಾರೆ. ಈ ಸಂಸ್ಥೆ ಇದೀಗ ಬೆಳ್ಳಿಹಬ್ಬದ ಹೊಸ್ತಿಲಿನಲ್ಲಿದೆ. ಈ ರಂಗ ಸಂಸ್ಥೆ ಮೂಲಕ ಉಚಿತವಾಗಿ ಕನ್ನಡ ನಾಟಕ ಪ್ರದರ್ಶನ, ಕನ್ನಡ ನಾಟಕಗಳ ಕುರಿತು ಉಚಿತ ತರಬೇತಿ ನಿರಂತರವಾಗಿ ನಡೆಯುತ್ತಾ ಬಂದಿದೆ. ಸಂಸ್ಥೆಯಿಂದ ಮಹಾರಾಷ್ಟ್ರದ ಸೊಲ್ಲಾಪುರ, ಮುಂಬೈ, ಪುಣೆ, ರತ್ನಗಿರಿ, ಅಕ್ಕಲಕೋಟ ಮುಂತಾದ ಕಡೆಗಳಲ್ಲಿ ಕನ್ನಡ ನಾಟಕ ಆಗಾಗ ಪ್ರದರ್ಶನಗೊಳ್ಳುತ್ತಿರುತ್ತದೆ. ಈ ಮೂಲಕ ನೆರೆಯ ಮಹಾರಾಷ್ಟ್ರದಲ್ಲೂ ಕನ್ನಡದ ಕಂಪು ಹರಡುವ ಕೆಲಸ ಖೇಡಗಿ ಸಂಸ್ಥೆ ಮಾಡುತ್ತಿದೆ.

ಸಂಕಷ್ಟದಲ್ಲಿರುವವರಿಗೆ ನೆರವು:

ಖೇಡಗಿ ಅವರು ತಮ್ಮ ಸಂಸ್ಥೆ ಮೂಲಕ ಈವರೆಗೆ ನೂರಾರು ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ, ಸಂಕಷ್ಟದಲ್ಲಿರುವ ಕನ್ನಡ ಮನಸ್ಸುಗಳ ನೆರವಿಗೂ ಕೈಜೋಡಿಸುತ್ತಾರೆ. ಕನ್ನಡಿಗರು ಯಾರಾದರೂ ಸಂಕಷ್ಟದಲ್ಲಿದ್ದರೆ ಅಂತಹವರ ತಕ್ಷಣ ಖೇಡಗಿ ಧಾವಿಸುತ್ತಾರೆ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬದ ನೆರವಿಗಾಗಿ ನಾಟಕ ಪ್ರದರ್ಶಿಸುತ್ತಾರೆ, ಆ ಪ್ರದರ್ಶನದಿಂದ ಬಂದ ದುಡ್ಡನ್ನು ಆ ಕುಟುಂಬಕ್ಕೆ ದೇಣಿಗೆಯಾಗಿ ನೀಡುತ್ತಾರೆ. ಈ ಮೂಲಕ ಕನ್ನಡ ಸೇವೆಯ ಜತೆಗೆ ಬಡವರ ಕಣ್ಣೊರೆಸುವ ಕೆಲಸದಲ್ಲೂ ಶ್ರಮಿಸುತ್ತಾರೆ.

ನಟರಾಜ ಪುಸ್ತಕಾಲಯ:

ಖೇಡಗಿ ಅವರು ಬಣ್ಣ ಹಚ್ಚುವ ಮೂಲಕ ವೇದಿಕೆ ಮೇಲೆ ಜನರನ್ನು ರಂಜಿಸುವುದಷ್ಟೇ ಅಲ್ಲ, ಸ್ವತಃ ಕನ್ನಡದಲ್ಲಿ 54ಕ್ಕೂ ಹೆಚ್ಚು ನಾಟಕ ಬರೆದು ಕನ್ನಡರಂಗ ಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ. ಗೌರಿ ಹೋದಳು ಗಂಗೆ ಬಂದಳು, ನಿಮ್ಮ ಹೆಂಡತಿ ನಾನಲ್ಲ, ಗರಗದ ಮಡಿವಾಳೇಶ್ವರ ಮಹಾತ್ಮೆ, ಪಾಪದ ದೇಹ ಪುಣ್ಯದ ಜೀವ...ಇವು ಖೇಡಗಿ ವಿರಚಿತ ಪ್ರಮುಖ ನಾಟಕಗಳು. ಖೇಡಗಿ ಅವರು ವಿಜಯಪುರದಲ್ಲಿ ನಟರಾಜ ಪುಸ್ತಕಾಲಯವನ್ನೂ ತೆರೆದಿದ್ದಾರೆ. ಈ ಪುಸ್ತಕಾಲಯದ ಉದ್ದೇಶ ಕೂಡ ಕನ್ನಡ ನಾಟಕ ಕೃತಿಗಳನ್ನು ಗ್ರಾಮೀಣ ಪ್ರದೇಶಕ್ಕೆ ತಲುಪಿಸುವುದೇ ಆಗಿದೆ.

ವಿಶೇಷವೆಂದರೆ ವೃತ್ತಿ ರಂಗಭೂಮಿಯ 100 ವರ್ಷ ಹಳೆಯದಾದ ನಾಟಕ ಪುಸ್ತಕಗಳು ಇಲ್ಲಿ ದೊರೆಯುತ್ತವೆ. ರಾಜ್ಯದ ಯಾವುದೇ ನಗರ, ಪಟ್ಟಣಗಳಲ್ಲಿ ಸಿಗದ ಕನ್ನಡ ನಾಟಕ ಪುಸ್ತಕಗಳು ವಿಜಯಪುರದಲ್ಲಿ ಖೇಡಗಿ ಅವರ ನಟರಾಜ ಪುಸ್ತಕಾಲಯದಲ್ಲಿ ಸಿಗುತ್ತವೆ. ರಂಗಭೂಮಿ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಹಾಗೂ ಇವರ ಕನ್ನಡಾಭಿಮಾನವನ್ನು ಪರಿಗಣಿಸಿ 2000ರಲ್ಲಿ ಇಸ್ವಿಯಲ್ಲಿ ಖೇಡಗಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. 1994ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಬಂದಿದೆ. ಸಂಘ-ಸಂಸ್ಥೆಗಳೂ ನೂರಾರು ಬಾರಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ.


ವರದಿ :  ರುದ್ರಪ್ಪ ಆಸಂಗಿ

click me!