
ಬೆಂಗಳೂರು: ಬಂಡೀಪುರ-ನಾಗರಹೊಳೆ ಅಭಯಾರಣ್ಯದಲ್ಲಿ ಈ ವರ್ಷ ಬಿದ್ದಿರುವ ಬೆಂಕಿ ಇತಿಹಾಸದಲ್ಲೇ 3ನೇ ಅತಿದೊಡ್ಡ ಹಾನಿ ಉಂಟು ಮಾಡಿದೆ. ಈ ಭಾಗದಲ್ಲಿ 2012ರಲ್ಲಿ 2900 ಹೆಕ್ಟೇರ್, 2014ರಲ್ಲಿ 2500 ಹೆಕ್ಟೇರ್ ಹಾನಿಯಾಗಿದ್ದರೆ, ಈ ವರ್ಷ ಈಗಾಗಲೇ 1200 ಹೆಕ್ಟೇರ್ ಅರಣ್ಯ ಅಗ್ನಿಗಾಹುತಿಯಾಗಿದೆ.
ಎರಡು ವಾರಗಳ ಹಿಂದೆ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಕಲ್ಕೆರೆಯಿಂದ ಬೇಗೂರು ಅರಣ್ಯ ವ್ಯಾಪ್ತಿವರೆಗೂ ವ್ಯಾಪಿಸಿದ ಬೆಂಕಿ ಸುಮಾರು 500 ಹೆಕ್ಟೇರ್ ಪ್ರದೇಶವನ್ನು ಆವರಿಸಿತು. ಆನಂತರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಯಂತ್ರಣ ತಪ್ಪಿ ಹೊತ್ತಿ ಉರಿಯಲಾರಂಭಿಸಿತ್ತು. ಸತತ ವಾರದ ವರೆಗೂ ಕಾಡನ್ನು ಸುಡುತ್ತಾ ಹೋದ ಬೆಂಕೆ ಈತನಕ ಸುಮಾರು 1200 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚಿನ ಅರಣ್ಯವನ್ನು ನುಂಗಿದೆ. ಇದರೊಂದಿಗೆ ಸಾವಿರಾರು ಪ್ರಾಣಿಗಳು, ಪಕ್ಷಿಗಳು, ಜೀವವೈವಿಧ್ಯತೆ ನಾಶವಾಗಿದೆ.
ರಾಜ್ಯದಲ್ಲಿ ಬೇಸಿಗೆಯಲ್ಲಿ ಕಾಡ್ಗಿಚ್ಚು ಉಂಟಾಗುವುದು ಸಹಜ. ಆದರೆ ಇಷ್ಟುಪ್ರಮಾಣದಲ್ಲಿ ಕಾಡ್ಗಿಚ್ಚು ಆಗಿರುವ ಉದಾಹರಣೆ ಕಡಿಮೆ. ಹೀಗಾಗಿ ಅರಣ್ಯ ಇಲಾಖೆ ಬೆಂಕಿ ಪ್ರಕರಣ ಎಂದಾಗ ಕಿಡಿಕೇಡಿಗಳ ಕೈವಾಡ ಎಂದು ಶಂಕಿಸುತ್ತದೆ.
ಅಂದಹಾಗೆ 2012ರಲ್ಲಿ ಬಂಡೀಪುರ ಅರಣ್ಯಕ್ಕೆ ಬೆಂಕಿ ಬಿದ್ದು ಸುಮಾರು 998 ಹೆಕ್ಟೇರ್ ಅರಣ್ಯ ನಾಶವಾಗಿತ್ತು. ಅದೇ ಸಂದರ್ಭದಲ್ಲಿ ನಾಗರಹೊಳೆ ಅರಣ್ಯದಲ್ಲಿ 1961 ಹೆಕ್ಟೇರ್ ಅರಣ್ಯ ಪ್ರದೇಶ ಸುಟ್ಟು ಹೋ ಗಿತ್ತು. ಇದರ ನಂತರ 2014ರಲ್ಲಿ ಕೂಡ ಭಾರೀ ಪ್ರಮಾ ಣದ ಬೆಂಕಿಯಿಂದ ಅರಣ್ಯ ನರಳಿ ಬೆಂದಿತ್ತು. ಬಂಡೀಪುರ ಮತ್ತು ನಾಗರಹೊಳೆ ಎರಡೂ ರಕ್ಷಿತ ಅರಣ್ಯದಿಂದ ಸುಮಾರು 2500 ಹೆಕ್ಟೇರ್ ಕಾಡು ಬೆಂಕಿಯಿಂದ ಸುಟ್ಟು ಕರಕಲಾಗಿತ್ತು. ಈ ಎರಡು ಪ್ರಕರಣಗಳ ನಂತರ ರಾಜ್ಯದಲ್ಲಿ ಕಡಿಮೆ ಅವಧಿಯಲ್ಲಿ ಅದರಲ್ಲೂ ಬೇಸಿಗೆ ಆರಂಭದಲ್ಲೇ ಬಂಡೀಪುರ ಅರಣ್ಯದಲ್ಲಿ ಅಪಾರ ಪ್ರಮಾಣದ ಕಾಡು ಬೆಂಕಿಯಿಂದ ನಾಶವಾಗಿದೆ.
ಇದೇವೇಳೆ, ಅಣಶಿ, ದಾಂಡೇಲಿ, ಮಂಡ್ಯದ ಕರೀಘಟ್ಟ, ಚಿಕ್ಕಮಗಳೂರು, ಹಾಸನದ ಸಕಲೇಶಪುರದ ಅರಣ್ಯಗಳಲ್ಲೂ ಅಲಲ್ಲಿ ಕಾಣಿಸಿಕೊಂಡಿದೆ. ಕೊಡಗು ಜಿಲ್ಲೆಯಲ್ಲೂ ಈ ಬಾರಿ ಭಾರೀ ಬೆಂಕಿ ಕಾಣಿಸಿಕೊಂಡು ಭಾರೀ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿರುವುದು ಆತಂಕ ಮೂಡಿಸಿದೆ. ಹಾಗೆಯೇ ಮಂದೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎದುರಾಗುವ ಬಿಸಿಲು, ನೀರಿನ ಕೊರತೆಯಿಂದ ಕಾಡಿನ ಪರಿಸ್ಥಿತಿ ಏನಾಗಬಹುದು ಎನ್ನುವ ಭೀತಿಯನ್ನು ತಂದೊಡ್ಡಿದೆ.
ಬೆಂಕಿ ನಂದಿಸಲು ಏಕೆ ಆಗಲಿಲ್ಲ ?: ಬಂಡೀಪುರ ಅರಣ್ಯ ವಾರಗಟ್ಟಲೇ ಬೇಯುತ್ತಿದ್ದರೂ ಅರಣ್ಯ ಇಲಾಖೆ ಬೆಂಕಿ ನಂದಿಸಲು ಸಾಧ್ಯವಾಗಲೇ ಇಲ್ಲ. ಏಕೆಂದರೆ, ಇಲಾಖೆ ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಸಿಬ್ಬಂದಿ ಕೊರತೆ. ಸಾಮಾನ್ಯ ಕಾಡ್ಗಿಚ್ಚು ವೇಳೆ ಬೆಂಕಿ ನಂದಿಸುವವರು ತಳ ಹಂತದ ಸಿಬ್ಬಂದಿ. ಅಂದರೆ ಉಪ ವಲಯ ಆರಣ್ಯಾಧಿಕಾರಿ, ಅರಣ್ಯ ರಕ್ಷಕರು, ಅರಣ್ಯ ವೀಕ್ಷಕರು, ಮತ್ತು ಅನೆ ಕಾವಾಡಿಗರ ಸೇರಿದಂತೆ ಅನೇಕ ಸಿಬ್ಬಂದಿ ಇರುತ್ತಾರೆ. ಇವರ ಸಂಖ್ಯೆ ತೀರಾ ಕಡಿಮೆ ಇದೆ. ಉಪ ವಲಯ ಆರಣ್ಯಾಧಿಕಾರಿ ಹುದ್ದೆಗಳೇ ಸಾವಿರಕ್ಕೂ ಹೆಚ್ಚು ಖಾಲಿ ಇವೆ. ಅರಣ್ಯ ರಕ್ಷಕರ 1056 ಹುದ್ದೆ ಖಾಲಿಯಾಗಿವೆ. 159 ಅರಣ್ಯ ವೀಕ್ಷಕರ ಹುದ್ದೆಗಳು ಅನೇಕ ವರ್ಷಗಳಿಂದ ಇನ್ನೂ ಭರ್ತಿಯಾಗಿಲ್ಲ. ಹೀಗಾಗಿ ಬೆಂಕಿ ಬಿದ್ದಿರುವ ಮಾಹಿತಿ ಇದ್ದರೂ ಇಲಾಖೆ ಅನೇಕ ಕಡೆ ಅಸಹಾಯಕವಾಗಿ ನಿಲ್ಲಬೇಕಾಯಿತು.
ರಾಜ್ಯದಲ್ಲಿ ಸತತ ಮೂರು ವರ್ಷಗಳಿಂದ ಬರ, ಮಳೆ ಕೊರತೆ, ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಕಾಡಿನಲ್ಲಿ ಎಲ್ಲಿ ನೋಡಿದರೂ ಒಣಗಿದ ಗಿಡ, ಮರಗಳೇ ಕಾಣಸಿಕ್ಕುತ್ತಿದ್ದವು. ಇದರಿಂದ ಬೆಂಕಿ ಬಿದ್ದೊಡನೆ ಕ್ಷಣಮಾತ್ರದಲ್ಲಿ ಹೊತ್ತಿ ಉರಿದಿತ್ತು. ಇದರ ಮಧ್ಯೆ ಅಪಾಯಕಾರಿ ಬಿರುಗಾಳಿ, ದಟ್ಟಹೊಗೆ. ನಾಲ್ಕೈದು ಅಡಿ ದೂರದವರೂ ಕಾಣದಷ್ಟುದಟ್ಟಹೊಗೆಯಿಂದ ಸಿಬ್ಬಂದಿ ಬೆಂಕಿ ವಿರುದ್ಧ ಸೆಣಸಿ ನಂದಿಸಲಾಗದೆ ನೊಂದರು.
ಇದರ ಮಧ್ಯೆ, ಬೆಂಕಿಯ ಜ್ವಾಲೆ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರದೇಶ ವ್ಯಾಪಿಸಲು ಕಾರಣವಾಗಿದ್ದು ಟುಪಟೋರಿಯಂ ಮತ್ತು ಲಾಂಟನದಂತಹ ಕಳೆ. ಇಂಥ ಒಣಗಿದ ಗಿಡಗಳು ಒಳಗಿ ಬಿದ್ದಿರುವುದರಿಂದ ಬೆಂಕಿ ಹೊತ್ತುತ್ತಿದ್ದಂತೆ ಎಲ್ಲೆಡೆ ಆವರಿಸುವಂತೆ ಮಾಡಿದೆ. ಇದು ಮರದಿಂದ ಮರಕ್ಕೂ ಹಬ್ಬಿಸಿ ಊಹೆಗೂ ನಿಲುಕದಷ್ಟುಕಾಡು ಕಡಿಮೆ ಅವಧಿಯಲ್ಲಿ ಸುಟ್ಟು ಹೋಗಿದೆ.
ಮುನ್ನೆಚ್ಚರಿಕೆ ಇದ್ದರೂ ಏಕೆ ವಿಫಲ?
ಇಸ್ರೋ ಸಂಸ್ಥೆಯ ಅಧೀನದ ಹೈದರಾಬಾದ್‌ನಲ್ಲಿರುವ ಎನ್‌ಆರ್‌ಎಸ್‌ಸಿ (ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್) ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಚಿÜತ್ರ ಸಹಿತ ಮಾಹಿತಿ ರವಾನಿಸುತ್ತದೆ. ಈ ಮಾಹಿತಿಯನ್ನು ಅರಣ್ಯ ಇಲಾಖೆ ತನ್ನ ನಿಯಂತ್ರಣ ವ್ಯವಸ್ಥೆಯಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರವಾನಿಸುತ್ತದೆ. ಬಂಡೀಪುರ ಅರಣ್ಯದ ಬೆಂಕಿ ಮಾಹಿತಿ ಎನ್‌ಆರ್‌ಎಸ್‌ಸಿಯಿಂದ ಸಿಗುವ ಮುನ್ನವೇ ಇಲಾಖೆ ಬೆಂಕಿ ಹೊತ್ತಿರುವುದನ್ನು ಗುರುತಿಸಿದ್ದರು. ಆದರೆ ಅಲ್ಲಿಗೆ ಹೆಚ್ಚಿನ ಸಿಬ್ಬಂದಿ ಆಯೋಜಿಸಲು ಸಾಧ್ಯವಾಗಿಲ್ಲ. ತಕ್ಷಣ ನೀರು ಮತ್ತು ನಂದಿಸುವ ಪರಿಕರಗಳನ್ನು ಕೊಂಡೊಯ್ಯಲು ಸಮಯ ಸಿಕ್ಕಿಲ್ಲ. ಬೀರುಗಾಳಿಯಿಂದಾಗಿ ಬೆಂಕಿ ವೇಗವಾಗಿ ಸಿಕ್ಕಿಸಿಕ್ಕ ಕಡೆಗೆ ಹಬ್ಬಿ ಹೊತ್ತಿ ಉರಿದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
3 ಜಿಲ್ಲೆಗಳಲ್ಲಿ ನಿನ್ನೆ ಕಾಡ್ಗಿಚ್ಚು
ರಾಜ್ಯದ 3 ಜಿಲ್ಲೆಗಳ ಅರಣ್ಯ ದಲ್ಲಿ ಶುಕ್ರವಾರ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಬಂಡೀಪುರ ಅರಣ್ಯ ವ್ಯಾಪ್ತಿ ಯ ಬಿಳಿಗಿರಿರಂಗನಬೆಟ್ಟ, ಕೊಡಗಿನ ಅತ್ತೂರು-ಆನೆಕಾಡು ಪ್ರದೇಶ ಹಾಗೂ ಗದಗ ಜಿಲ್ಲೆಯ ಔಷಧೀಯ ಸಸ್ಯಗಳುಳ್ಳ ಕಪ್ಪತ್ತಗುಡ್ಡದಲ್ಲಿ ಬೆಂಕಿ ಬಿದ್ದಿದ್ದು, ಅಪಾರ ಹಾನಿಯಾಗಿದೆ.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.