ಕೊಡಗು ಪ್ರವಾಹ : ಆಹಾರ ಇಲ್ಲದೇ ದಂಪತಿ 7 ದಿನ ಬದುಕಿದ್ದು ಹೇಗೆ?

By Web DeskFirst Published Aug 24, 2018, 7:31 AM IST
Highlights

ಕೊಡಗಿನ ಭೀಕರ ಪ್ರವಾಹ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಇಲ್ಲೊಂದು ಅಂತಹದ್ದೇ ರೀತಿಯ ಮನಕಲುಕುವ ಕಥೆಯೊಂದಿದೆ. ಈ ದಂಪತಿ ಅನ್ನ ಆಹಾರವಿಲ್ಲದೇ ೭ ದಿನಗಳ ಕಾಲ ಪ್ರಾಣವನ್ನು ಕೈಲಿ ಹಿಡಿದು ಬದುಕಿದ್ದು ಕೊನೆಗೂ ಅವರನ್ನು ಕಾಪಾಡಲಾಗಿದೆ. 

ಮಡಿಕೇರಿ :  ಕೊಡಗಿನ ಪ್ರಕೃತಿ ವಿಕೋಪಕ್ಕೆ ಸಿಲುಕಿ ಸರಿಯಾದ ಅನ್ನಾಹಾರ ವ್ಯವಸ್ಥೆ ಇಲ್ಲದೆ ಸುಮಾರು 7 ದಿನಗಳ ಕಾಲ ನರಕಯಾನತೆ ಅನುಭವಿಸಿದ್ದ ದಂಪತಿಯನ್ನು ಗುರುವಾರ ಕೊನೆಗೂ ರಕ್ಷಿಸಲಾಗಿದೆ.

ಮಡಿಕೇರಿ ತಾಲೂಕಿನ ಮಕ್ಕಂದೂರು ಸಮೀಪದ ಹೆಮ್ಮೆತ್ತಾಳು ಗ್ರಾಮದ ಪಳನಿ ಹಾಗೂ ಶಾಂತಾ ಅವರನ್ನು ಗುರುವಾರ ರಕ್ಷಣೆ ಮಾಡಲಾಗಿದೆ. ಭಾರಿ ಮಳೆಯಿಂದ ಈ ಗ್ರಾಮದಲ್ಲಿ ಹಲವು ಮನೆಗಳು ನಾಶವಾಗಿ ಇಡೀ ಊರೇ ಖಾಲಿಯಾಗಿತ್ತು. ಈ ಹಿಂದೆ ನಡೆಸಿದ ಕಾರ್ಯಾಚರಣೆಯಲ್ಲಿ ಇಲ್ಲಿನ ಹಲವು ಗ್ರಾಮಸ್ಥರನ್ನು ರಕ್ಷಣೆ ಮಾಡಿ ಸಂತ್ರಸ್ತರ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ ಈ ದಂಪತಿಯ ಪತ್ತೆಯೇ ಇರಲಿಲ್ಲ.

ಈ ದಂಪತಿ ನಿರಾಶ್ರಿತರ ಕೇಂದ್ರಗಳಲ್ಲಿ ಇದ್ದಾರೆಂದೇ ನಂಬಲಾಗಿತ್ತು. ಆದರೆ ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ ಪರಿಶೀಲಿಸಿದ ಸಂದರ್ಭ ಇವರ ಕುರಿತು ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ಸ್ಥಳೀಯರು ಮತ್ತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ದಂಪತಿ ಇರುವ ಬಗ್ಗೆ ಸುಳಿವು ಸಿಕ್ಕಿತ್ತು.

ಗುರುವಾರ ಬೆಳಗ್ಗಿನಿಂದ ಎಸ್‌ಡಿಆರ್‌ಎಫ್‌, ಪೊಲೀಸ್‌ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ದಂಪತಿ ಪತ್ತೆಯಾಗಿದ್ದಾರೆ. ಮನೆ ಬೀಳುವ ಸಂದರ್ಭ ಪಳನಿ ಸ್ವಾಮಿ ಕಾಲಿಗೆ ಗಂಭೀರ ಗಾಯವಾಗಿತ್ತು. ಇದರಿಂದ ಅವರು ನಡೆದಾಡಲು ಸಾಧ್ಯವಾಗಿರಲಿಲ್ಲ. ಪತ್ನಿ ಶಾಂತಾ ಕೂಡ ಅವರೊಂದಿಗೆ ಮಳೆ ನಡುವೆ ದಿನ ಕಳೆಯುತ್ತಿದ್ದರು. ಇದೀಗ ರಕ್ಷಿಸಿ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಪರಿಹಾರ ಕೇಂದ್ರಕ್ಕೆ ತಲುಪಿಸಲಾಗಿದೆ.

ವಿಘ್ನೇಶ್ ಎಂ. ಭೂತನಕಾಡು 

click me!