ಅಧಿಕಾರಿಗಳ ವರ್ಗಾವಣೆಗೆ ಪ್ರತ್ಯೇಕ ಬೋರ್ಡ್‌ ಇದೆ : ನನ್ನಿಂದ ಆಗಲ್ಲ

By Kannadaprabha NewsFirst Published Nov 2, 2022, 4:38 AM IST
Highlights

ಗೃಹ ಇಲಾಖೆಯಲ್ಲಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆಗೆಂದೇ ಪ್ರತ್ಯೇಕ ಬೋರ್ಡ್‌ ಇದೆ. ಈ ಬೋರ್ಡ್‌ ಮುಖಾಂತರವೇ ವರ್ಗಾವಣೆ ನಡೆಯಲಿದೆ. ನನ್ನ ಸಹಿಯಿಂದ ಯಾವ ಅಧಿಕಾರಿಗಳ ವರ್ಗಾವಣೆಯೂ ಆಗುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

 ತುಮಕೂರು(ನ.02):  ಗೃಹ ಇಲಾಖೆಯಲ್ಲಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆಗೆಂದೇ ಪ್ರತ್ಯೇಕ ಬೋರ್ಡ್‌ ಇದೆ. ಈ ಬೋರ್ಡ್‌ ಮುಖಾಂತರವೇ ವರ್ಗಾವಣೆ ನಡೆಯಲಿದೆ. ನನ್ನ ಸಹಿಯಿಂದ ಯಾವ ಅಧಿಕಾರಿಗಳ ವರ್ಗಾವಣೆಯೂ ಆಗುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ತುಮಕೂರಿನಲ್ಲಿ (Tumakur)  ಕನ್ನಡ (Kannada) ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವ ಪೊಲೀಸ್‌ ಅಧಿಕಾರಿಗಳು ಸಹ ವರ್ಗಾವಣೆಗೆ ಹಣ ಕೊಡಬಾರದು ಎಂಬ ಉದ್ದೇಶ ನಮ್ಮದ್ದಾಗಿದೆ. ಹಾಗಾಗಿ ಬೋರ್ಡ್‌ ಮುಖಾಂತರವೇ ವರ್ಗಾವಣೆಗಳು ನಡೆಯಲಿವೆ ಎಂದರು.

ಇನ್ಸ್‌ಪೆಕ್ಟರ್‌ ನಂದೀಶ್‌ ಸಾವಿನ ಕುರಿತು ತನಿಖೆ ನಡೆಯುತ್ತಿದೆ. ಆದರೆ ಇವರು ವರ್ಗಾವಣೆಗಾಗಿ ಯಾರಿಗೆ ಹಣ ಕೊಟ್ಟಿದ್ದಾರೆ, ಯಾರು ಪಡೆದಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಈ ಬಗ್ಗೆ ಸಚಿವ ಎಂಟಿಬಿ ನಾಗರಾಜು ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದು ಸಹ ನನಗೆ ಗೊತ್ತಿಲ್ಲ. ಯಾವ ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯನ್ನು ನಾನು ಮಾಡುವುದಿಲ್ಲ. ಪೊಲೀಸ್‌ ನೇಮಕಾತಿ ವಯೋಮಿತಿ ಹೆಚ್ಚಳದ ಬಗ್ಗೆ ಚಿಂತನೆ ನಡೆದಿದೆ. ಜತೆಗೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಸಹ ಇನ್ನು ಒಂದು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.

ಮಿಲಿಟರಿ ಮತ್ತು ಪೊಲೀಸ್‌ ನೇಮಕಾತಿಗೆ ಅಭ್ಯರ್ಥಿಗಳು ದೈಹಿಕವಾಗಿ ಸಮರ್ಥರಾಗಿರಬೇಕು. ಚಿಕ್ಕವಯಸ್ಸಿನಲ್ಲೇ ನೇಮಕಗೊಂಡರೆ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂಬುದಷ್ಟೇ ಮಾನದಂಡವಾಗಿದೆ. ಹಾಗಾಗಿ ವಯೋಮಿತಿ ಹೆಚ್ಚಳ ಸಂಬಂಧ ಇರುವ ಕೊಂಚ ಕಾನೂನು ತೊಡಕುಗಳ ಬಗ್ಗೆಯೂ ಗಮನ ಹರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್‌ ಮತ್ತಿತರರು ಉಪಸ್ಥಿತರಿದ್ದರು.

8 ಸಾವಿರ ಕೊಠಡಿಗಳು:

ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ರಾಜ್ಯದ 8 ಸಾವಿರ ಸರ್ಕಾರಿ ಶಾಲೆಗಳಿಗೆ ಕೊಠಡಿಗಳನ್ನು ಮಂಜೂರು ಮಾಡಲಾಗಿದೆ. ಇದೊಂದು ದೊಡ್ಡ ದಾಖಲೆಯಾಗಿದೆ. ಸದ್ಯ ಹೋಬಳಿಗೊಂದು ಕನ್ನಡ ಪಬ್ಲಿಕ್‌ ಶಾಲೆಗಳನ್ನು ತೆರೆಯಲಾಗುತ್ತಿದೆ. ಇನ್ನು ಮುಂದೆ ಪಂಚಾಯ್ತಿಗೊಂದು ಪಬ್ಲಿಕ್‌ ಶಾಲೆಗಳನ್ನು ತೆರೆದು ಸಮಗ್ರವಾಗಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಆರಗ ಹೇಳಿದರು. ರಾಜಧಾನಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿರುವುದು ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಸಂಗತಿ. ಬಹಳ ದೊಡ್ಡ ಮಟ್ಟದಲ್ಲಿ ಉದ್ಯಮಿಗಳು ಬರುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಆರ್ಥಿಕವಾಗಿ ಎತ್ತರಕ್ಕೇರಲು ಮತ್ತು ಯುವಕರಿಗೆ ಉದ್ಯೋಗ ಸಿಗಲು ಇದೊಂದು ಮಹತ್ವದ್ದ ಹೆಜ್ಜೆಯಾಗಿದೆ ಎಂದರು.

ನೇರ ನಿಷ್ಟುರ ಪತ್ರಕರ್ತರು ಅಗತ್ಯ

 ನೇರ, ನಿಷ್ಠುರ ಪತ್ರಕರ್ತರು ಶ್ರಮಿಸಿದಲ್ಲಿ ಸಾಮಾಜಿಕ ಜನಜೀವನದಲ್ಲಿ ಬದಲಾವಣೆ ಸಾಧ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ಪತ್ರಿಕಾ ಸಂಪಾದಕರ ಸಂಘ ಹಾಗೂ ದಿ ಎಡಿಟ​ರ್‍ಸ್ ಕ್ಲಬ್‌ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಮೇಲಿನ ನಂಬಿಕೆ ಜೊತೆಗೆ ಪತ್ರಿಕಾಂಗದ ಕಾರ್ಯದ ಮೇಲೆ ಜನರು ಹೆಚ್ಚಿನ ನಂಬಿಕೆ ಇಟ್ಟಿದ್ದಾರೆ. ಪತ್ರಕತರು ಹಪಾಹಪಿತನದ ಸುದ್ದಿಗಳಿಗೆ ಬಲಿಯಾಗದೇ ವೃತ್ತಿಧರ್ಮದಿಂದ ಸಮಾಜದ ಒಳಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾರ್ಪೋರೇಟ್‌ ಸಂಸ್ಥೆಗಳ ಕೈಯಲ್ಲಿ ಮಾಧ್ಯಮ; ಪತ್ರಕರ್ತರ ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ -ಈರೇಶ್ ಅಂಚಟಗೇರಿ

ಪತ್ರಕರ್ತರು ಸಮಾಜದ ಅಭಿವೃದ್ಧಿಗೆ ಧ್ವನಿಯಾಗಿ ಕೆಲಸ ಮಾಡಬೇಕು. ಕರ್ತವ್ಯ ನಿರ್ವಹಣೆಯಲ್ಲಿ ಎಡರು ತೊಡರುಗಳನ್ನು ಮಾಡಿದಾಗ ಎಚ್ಚರಿಸುವ ಕೆಲಸವನ್ನು ಮಾಡಬೇಕು. ಇಂದಿನ ದಿನಮಾನಗಳಲ್ಲಿ ಪತ್ರಕರ್ತರ ಬದುಕು ಅನಿಶ್ಚಿತ ಅಗಿದೆ. ಬದುಕಿಗೆ ಯಾವುದೇ ಆಸರೆ ಇಲ್ಲದಂತಾಗಿದೆ. ಸಮಾಜದ ಕೈಗನ್ನಡಿಯಂತೆ ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರ ಬದುಕು ಸಂಕಷ್ಟದಲ್ಲಿದೆ ಎಂದರು.

ಕೇವಲ ಟಿಆರ್‌ಪಿಗಾಗಿ, ಬೇರೆಯವರ ಚಾರಿತ್ರ್ಯಹರಣ ಮಾಡಿಕೊಂಡು ಸುದ್ದಿ ಮಾಡುವುದರಿಂದ ವ್ಯಕ್ತಿಗತವಾಗಿ ತೊಂದರೆಯಾದರು ಇದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಇಂತಹ ಸುದ್ದಿಗಳಿಗೆ ಮಹತ್ವ ಕೊಡದೇ ಸಮಾಜದ ಕಣ್ಣು ತೆರೆಸುವಂತಹ ಸುದ್ದಿಗಳನ್ನು ಕೊಡುವಂತಹ ಪತ್ರಿಕೋದ್ಯಮ ನಮಗೆ ಬೇಕು. ಪತ್ರಿಕೆಗಳ ಬಗ್ಗೆ ನನಗೆ ಬಹಳ ಅಪಾರದ ಗೌರವ ಮತ್ತು ವಿಶ್ವಾಸವಿದೆ. ನನ್ನಂತಹ ಹಲವಾರು ಜನಪ್ರತಿನಿಧಿಗಳನ್ನು ಈ ಮಟ್ಟಕ್ಕೆ ಬೆಳೆಸಿದ ಕೀರ್ತಿ ಪತ್ರಿಕೆಗಳಿಗೆ ಸಲ್ಲುತ್ತದೆ. ಒಂದು ಸಣ್ಣಮಟ್ಟದ ಪ್ರತಿಭಟನೆಯನ್ನು ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿ, ಸರ್ಕಾರದ ಕಣ್ಣು ತೆರೆಸುವ ತಾಕತ್ತು ಪತ್ರಿಕೆಗಳಿಗಿದೆ ಎಂದು ತಿಳಿಸಿದರು.

click me!