ಅಪ್ಪನಿಗೆ ಮಸಾಜ್ ಮಾಡಿದೆ, ಸೋದರಿ ಉಗುರು ಕತ್ತರಿಸಿದಳು, ಬೆಳಗ್ಗೆ ಹೊತ್ತಿಗೆ ಅವರು ನಮ್ಮೊಂದಿಗೆ ಇರಲಿಲ್ಲ ಗಿರೀಶ್ ಕಾರ್ನಾಡ್‌ಗೆ ಪುತ್ರನಿಂದ ಅಕ್ಷರ ನಮನ
ನವದೆಹಲಿ[ಜೂ.14]: ರಂಗಕರ್ಮಿ ಗಿರೀಶ್ ಕಾರ್ನಾಡ್ ನಿಧನದ ಮೂರು ದಿನದ ಬಳಿಕ, ಪುತ್ರ ರಘು ಕಾರ್ನಾಡ್ ತಮ್ಮ ತಂದೆ ನಿಧನಕ್ಕೆ ಅಕ್ಷರ ನಮನ ಸಲ್ಲಿಸಿದ್ದಾರೆ. ತಂದೆಯೊಂದಿಗೆ ಕಳೆದ ಕೊನೆಯ ದಿನಗಳ ಬಗ್ಗೆ ಪತ್ರಕರ್ತರೂ ಆಗಿರುವ ರಘು ಕಾರ್ನಾಡ್ ಆನ್‌ಲೈನ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
‘ಹಲವಾರು ಸ್ನೇಹಿತರು ಹೇಳುವಂತೆ ಕಾರ್ನಾಡರು ಸಮಯವನ್ನು ಪರಿಪೂರ್ಣವಾಗಿ ಗ್ರಹಿಸುತ್ತಾರೆ. ಸ್ನೇಹಿತನ ಮದುವೆಗಾಗಿ ನಾನು ಮತ್ತು ನನ್ನ ಸಹೋದರಿ ಕಳೆದ ವಾರಾಂತ್ಯದಲ್ಲಿ ಬೆಂಗಳೂರಿಗೆ ಆಗಮಿಸಿದ್ದೆವು. ಶನಿವಾರ ಸಂಜೆ, ಭಾಷಾಂತರ ಲೇಖಕಿ ಅರ್ಶಿಯಾ ಸತ್ತಾರ್ ಅವರೊಂದಿಗೆ ಧ್ವನಿ ಸುರಳಿ ಸಂದರ್ಶನಗಳನ್ನು ಕಾರ್ನಾಡರು ಮುಗಿಸಿದ್ದರು. ಅದೇ ದಿನ ಸಂಜೆ ಮುಳುಗುತ್ತಿರುವ ಸೂರ್ಯನ ಕಿರಣಗಳನ್ನು ಆಸ್ವಾದಿಸುತ್ತಾ, ಕುಟುಂಬ ಸದಸ್ಯರೆಲ್ಲಾ ಮನೆಯ ಚಾವಣಿಯ ಮೇಲೆ ಒಟ್ಟಾಗಿ ಕುಳಿತು ಹರಟೆ ಹೊಡೆಯುತ್ತಿದ್ದೆವು. ನಾನು ಅವರ ಮೈ- ಕೈಗಳಿಗೆ ಮಸಾಜ್ ಮಾಡಿಕೊಟ್ಟೆ. ನನ್ನ ಸೋದರಿ ಅವರ ಉಗುರುಗಳನ್ನು ಕತ್ತರಿಸಿದಳು. ತನ್ನ ದೇಹದ ಕೆಲವು ಕ್ಲಿಷ್ಟಕರ ಸಂಗತಿಗಳ ಬಗ್ಗೆ ತಂದೆ ನನ್ನ ಜೊತೆ ಮಾತನಾಡಿದರು.
ಅದು ಕೇವಲ ಬೇಸರದ ಸಂಗತಿ ಅಷ್ಟೇ ಅಲ್ಲ. ಅತ್ಯಂತ ಬೇಸರದ ಸಂಗತಿಯಾಗಿತ್ತು. ಏಕೆಂದರೆ ಸೋಮವಾರ ಮುಂಜಾನೆ ಅವರು ನಮ್ಮೊಂದಿಗೆ ಇರಲಿಲ್ಲ. ಬರಹದ ಮೂಲಕ ನಮನ ಸಲ್ಲಿಸುವಾಗ, ಅಪ್ಪನಿಗೆ ಶ್ರದ್ಧಾಂಜಲಿ ಸಲ್ಲಿಸಿದ ಭಾವ ನನ್ನಲ್ಲಿ ಮೂಡುತ್ತಿದೆ. ನಾನು ಅತಿ ಹೆಚ್ಚು ಪ್ರೀತಿಸುತ್ತಿದ್ದ ವ್ಯಕ್ತಿ ಅವರಾಗಿದ್ದರು. ಮನೆ ಮತ್ತು ತಂದೆ ಮಾತನಾಡುತ್ತಿದ್ದ ಕೊಂಕಣಿ, ಕನ್ನಡ, ತಮಿಳು, ಮಲಯಾಳಂ, ಇಂಗ್ಲಿಷ್, ಹಿಂದಿ ಭಾಷೆಯ ಸುತ್ತ ನನ್ನ ಮನಸ್ಸು ಸುತ್ತುತ್ತಿದೆ. ಹಲವಾರು ಸಂದೇಶಗಳನ್ನು ನನ್ನ ಜೀವನಕ್ಕಾಗಿ ಬಿಟ್ಟುಹೋದ ನಿಮಗೆ ಧನ್ಯವಾದಗಳು’ ಎಂದು ರಘು ಕಾರ್ನಾಡ್ ಬರೆದಿದ್ದಾರೆ.