ಶಿವರಾತ್ರಿ ಆಚರಣೆಗೆ ದೇವಾಲಯಗಳು ಸಿದ್ಧ; ಈ ಎಲ್ಲಾ ದೇವಾಲಯಗಳಿಗೆ ನೀವು ಭೇಟಿ ಕೊಡಬಹುದು

By Suvarna Web DeskFirst Published Feb 12, 2018, 10:39 AM IST
Highlights

ಮಹಾಶಿವರಾತ್ರಿ ಹಬ್ಬಕ್ಕೆ ನಗರದ ಶಿವಾಲಯಗಳಲ್ಲಿ ಹಬ್ಬದ ಆಚರಣೆಗೆ ಭರ್ಜರಿ ಸಿದ್ಧತೆಗಳು ನಡೆದಿದೆ. ಶಿವರಾತ್ರಿಯಂದು ಉಪವಾಸ,  ಜಾಗರಣೆ ಮಾಡಿ ಶಿವ ಸ್ಮರಣೆ ಮಾಡಲು ಭಕ್ತರು ಕೂಡ
ಸಜ್ಜಾಗಿದ್ದಾರೆ.

ಬೆಂಗಳೂರು (ಫೆ.12): ಮಹಾಶಿವರಾತ್ರಿ ಹಬ್ಬಕ್ಕೆ ನಗರದ ಶಿವಾಲಯಗಳಲ್ಲಿ ಹಬ್ಬದ ಆಚರಣೆಗೆ ಭರ್ಜರಿ ಸಿದ್ಧತೆಗಳು ನಡೆದಿದೆ. ಶಿವರಾತ್ರಿಯಂದು ಉಪವಾಸ,  ಜಾಗರಣೆ ಮಾಡಿ ಶಿವ ಸ್ಮರಣೆ ಮಾಡಲು ಭಕ್ತರು ಕೂಡ
ಸಜ್ಜಾಗಿದ್ದಾರೆ.
ನಗರದ ಕಾಡುಮಲ್ಲೇಶ್ವರದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಗವೀಪುರಂನ ಗವಿಗಂಗಾಧರೇಶ್ವರ ದೇವಾಲಯ, ಗುಟ್ಟಹಳ್ಳಿ ಪಂಚಲಿಂಗೇಶ್ವರ ಸ್ವಾಮಿ ದೇವಾಲಯ, ಹಲಸೂರು ಸೋಮೇಶ್ವರ, ಮುರುಗೇಶಪಾಳ್ಯ ಸೇರಿದಂತೆ ನಾನಾ  ಶಿವ ದೇವಾಲಯಗಳು ಹಾಗೂ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿ ಸಿದ್ಧತೆ ಪೂರ್ಣಗೊಂಡಿದೆ. ಶಿವನ ದೇವಸ್ಥಾನಗಳೆಲ್ಲ ಸುಣ್ಣ ಬಣ್ಣ ಬಳಿದುಕೊಂಡು ತಳಿರು ತೋರಣ ಮತ್ತು ಪೆಂಡಾಲಿನಿಂದ ಸಿಂಗಾರಗೊಳ್ಳುತ್ತಿವೆ. ಫೆ.13 ರ ಶಿವರಾತ್ರಿ ದಿನದಂದು ಶಿವಾಲಯಗಳಲ್ಲಿನ ಸಂಭ್ರಮದ ವಾತಾವರಣ ಕಳೆಗಟ್ಟಲಿದೆ.
ಶಿವನಿಗೆ ವಿಶೇಷ ಪೂಜೆ: ಅಂದು ಎಲ್ಲಾ ಶಿವ ದೇವಾಲಯಗಳಲ್ಲಿ ಶಿವಲಿಂಗ ಮೂರ್ತಿಗೆ ವಿವಿಧ ಪೂಜೆ, ಅಭಿಷೇಕ, ರುದ್ರಾಭಿಷೇಕ, ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಮೂಲಕ ಪೂಜೆ, ಮಹಾಮಂಗಳಾರತಿ, ಶಿವನಸಹಸ್ರನಾಮ ಪಠಣ, ಸಂಕೀರ್ತನೆ, ಪುರಾಣ ಪಠಣ, ವೇದಾಂತ ಉಪನ್ಯಾಸ, ಸಂಗೀತೋತ್ಸವ ಮತ್ತು ಅಹೋರಾತ್ರಿ ಶಿವನಾಮ ಜಪ ಜರುಗಲಿವೆ. ಶಿವನ ಆರಾಧಕರು ಜಾಗರಣೆ ನಡೆಸಲು ವಿವಿಧ ದೇವಸ್ಥಾನಗಳಲ್ಲಿ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ಕೆಲ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯಗಳು, ಭಜನೆ, ಸಂಗೀತ ಕಛೇರಿ, ಪೌರಾಣಿಕ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗಿದೆ.
ಕಾಡುಮಲ್ಲೇಶ್ವರ ದೇವಾಲಯ: ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯಂದು ಮುಂಜಾನೆ 4 ಕ್ಕೆ ರುದ್ರಾಭಿಷೇಕ ಜರುಗಲಿದೆ. 5.30 ಕ್ಕೆ ಮಹಾ ಮಂಗಳಾರತಿ ನಂತರ 24  ಗಂಟೆಗಳ ಕಾಲ ನಿರಂತರವಾಗಿ ಜಲಾಭಿಷೇಕ ನೆರವೇರಲಿದೆ. ಅಂದು ರಾತ್ರಿ 10.30 ಕ್ಕೆ ಗಿರಿಜಾಕಲ್ಯಾಣೋತ್ಸವ ಹಾಗೂ ರುದ್ರಪಾರಾಯಣ ನಡೆಯಲಿದೆ. ಹಬ್ಬದ ಮಾರನೆ ದಿನವಾದ ಬುಧವಾರ ಬ್ರಹ್ಮ ರಥೋತ್ಸವ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಉಸ್ತುವಾರಿ  ಪ್ರಸಾದ್ ಹಾಗೂ ಅರ್ಚಕರಾದ ಗಂಗಾಧರ್ ತಿಳಿಸಿದರು.
ಗವಿಪುರಂ ದೇವಾಲಯ: ಐತಿಹಾಸಿಕ ದೇವಸ್ಥಾನದಲ್ಲಿ ಬೆಳಗ್ಗೆ 6 ರಿಂದ ಮರುದಿನ ಬೆಳಗ್ಗೆ 4 ರವರೆಗೆ ಸತತವಾಗಿ ಶಿವಲಿಂಗಕ್ಕೆ ಅಭಿಷೇಕ, ವಿಶೇಷ ಅಲಂಕಾರ  ನೆರವೇರಲಿದೆ. ಅಂದು ಲಕ್ಷಾಂತರ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವಾಗುವಂತೆ ದೇವಸ್ಥಾನದ ದಕ್ಷಿಣ ಸಾಲಿನಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ವಿಶೇಷ ಅಭಿಷೇಕ ಮಾಡಿಸುವವರು ಪ್ರತ್ಯೇಕ ಸಾಲಿನಲ್ಲಿ ತೆರಳಬಹುದಾಗಿದೆ. ಸಂಜೆ 5 ರಿಂದ ಮಾರನೇ ದಿನ ಮುಂಜಾನೆವರೆಗೂ ಸಂಗೀತ ಸೇವೆ,
ಭಜನೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತ್ ಅವರು ಮಾಹಿತಿ ನೀಡಿದರು.
ವಾಸವಿ ದೇವಸ್ಥಾನ: ದೇಶದ 13 ನೇ ಜ್ಯೋತಿರ್ಲಿಂಗವೆಂದು ಪ್ರಸಿದ್ಧಿಯಾಗಿರುವ ಮಧ್ಯಪ್ರದೇಶದ ಮಂದಸೌರ್ ನಗರದ ಅಷ್ಟಮುಖಿ ಪಶುಪತಿನಾಥ ಶಿವಲಿಂಗದ ವಿಶೇಷ ದರ್ಶನವನ್ನು ವಿಜಯನಗರ ಆರ‌್ಯವೈಶ್ಯ ಮಂಡಳಿ ಕಲ್ಪಿಸಿದೆ.
ಫೆ.13 ರಿಂದ 15 ರವರೆಗೆ ಭಕ್ತಾದಿಗಳ ದರ್ಶನಕ್ಕೆ ಲಭ್ಯವಿರಲಿದೆ. 

click me!