ದಿನಕ್ಕೆ ಎರಡೇ ನ್ಯಾನೋ ಕಾರು ಉತ್ಪಾದನೆ

By Suvarna Web DeskFirst Published Nov 27, 2017, 5:37 PM IST
Highlights
  • ವಿಶ್ವದ ಅಗ್ಗದ ಕಾರಿಗೆ ಬೇಡಿಕೆ ಕುಸಿತ
  • ಕಾರು ಉತ್ಪಾದನೆ ನಿಲ್ಲಿಸಲು ಟಾಟಾ ಚಿಂತೆ

ಸಾನಂದ್: ವಿಶ್ವದ ಅತ್ಯಂತ ಅಗ್ಗದ ಕಾರು ಎಂಬ ನಿರೀಕ್ಷೆಯೊಂದಿಗೆ 2009ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ನ್ಯಾನೋ ಕಾರಿನ ಉತ್ಪಾದನೆ ಸ್ಥಗಿತಗೊಳಿಸಲು ಟಾಟಾ ಕಂಪನಿ ಗಂಭೀರ ಚಿಂತನೆ ನಡೆಸುತ್ತಿದೆ.

ಗ್ರಾಹಕರಿಂದ ಬೇಡಿಕೆ ಕುಸಿದಿದೆ. ‘ಜನರ ಕಾರು’ ಎಂಬ ಅಭಿದಾನ ಹೊಂದಿದ್ದ ನ್ಯಾನೋಗೆ ಜನರು ಹೆಚ್ಚು ಆಸಕ್ತಿ ತೋರದ ಕಾರಣ ಗುಜರಾತಿನ ಸಾನಂದ್‌ನಲ್ಲಿರುವ ಘಟಕದಲ್ಲಿ ನಿತ್ಯ ಕೇವಲ 2 ಕಾರುಗಳಷ್ಟೇ ಉತ್ಪಾದನೆಯಾಗುತ್ತಿವೆ.

ಮೂರ್ನಾಲ್ಕು ತಿಂಗಳಿಂದ ಡೀಲರ್‌ಗಳು ಕಂಪನಿ ಬಳಿ ಹೊಸ ಕಾರಿಗೆ ಆರ್ಡರ್ ಇಟ್ಟಿಲ್ಲ. ಆಗಸ್ಟ್ ನಲ್ಲಿ 180 ಕಾರುಗಳು ಉತ್ಪಾದನೆಯಾಗಿದ್ದ ಘಟಕದಲ್ಲಿ ಅಕ್ಟೋಬರ್ ವೇಳೆಗೆ ಉತ್ಪಾದನೆ ಪ್ರಮಾಣ 57ಕ್ಕೆ ಕುಸಿತ ಕಂಡಿದೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ, ನ್ಯಾನೋ ಕಾರಿನ ಬಗ್ಗೆ ಟಾಟಾ ಕಂಪನಿ ಪ್ರಚಾರ ಮಾಡುತ್ತಿಲ್ಲ. ಕಳೆದ ಹಲವು ತಿಂಗಳುಗಳಿಂದ ಅಂತಹ ಚಟುವಟಿಕೆಯೇ ನಡೆದಿಲ್ಲ. ಹಳೆಯ ಸ್ಟಾಕ್‌ಗಳನ್ನು ಮಾರಾಟ ಮಾಡುತ್ತಿದ್ದೇವೆ. ಕಾರಿನ ಬಗ್ಗೆ ಆಸಕ್ತಿ ವ್ಯಕ್ತಪಡಿಸುವ ಗ್ರಾಹಕರೇ ಕಂಡುಬರುತ್ತಿಲ್ಲ ಎಂದು ಉತ್ತರಪ್ರದೇಶದ ಡೀಲರ್‌ವೊಬ್ಬರು ತಿಳಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ನ್ಯಾನೋಗೆ ಟ್ಯಾಕ್ಸಿ ಕ್ಷೇತ್ರದಿಂದ ಬೇಡಿಕೆ ಬರುತ್ತಿದೆ. ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿಲ್ಲ. ಟಿಯಾಗೋ (ಮಾಸಿಕ 6200 ಕಾರು ಉತ್ಪಾದನೆ) ಹಾಗೂ ಟೈಗೋರ್ (ಮಾಸಿಕ 2300 ಕಾರು) ತಯಾರಿಗೆ ಗಮನ ಕೇಂದ್ರೀಕರಿಸುತ್ತಿರುವುದರಿಂದ ನಿತ್ಯ ನ್ಯಾನೋ ಉತ್ಪಾದಿಸುತ್ತಿಲ್ಲ. ಬೇಡಿಕೆ ನೋಡಿ ಉತ್ಪಾದಿಸಲಾಗುತ್ತಿದೆ ಎಂದು ಕಂಪನಿಯ ಮೂಲವೊಂದು ತಿಳಿಸಿದೆ.

ಕೊಯಮತ್ತೂರು ಮೂಲದ ಜಯೇಂ ಆಟೋಮೊಬೈಲ್ಸ್ ಜತೆಗೂಡಿ ಎಲೆಕ್ಟ್ರಿಕ್ ನ್ಯಾನೋ ಬಿಡುಗಡೆ ಮಾಡುವ ಉದ್ದೇಶವನ್ನು ಕಂಪನಿ ಹೊಂದಿದೆ. ಅಲ್ಲಿಗೆ ಪೆಟ್ರೋಲ್ ಚಾಲಿತ ವಾಹನ ಉತ್ಪಾದನೆ ಸ್ಥಗಿತವಾಗಬಹುದು ಎಂದು ಹೇಳಲಾಗುತ್ತಿದೆ.

 

 

click me!