
ಬೆಂಗಳೂರು : ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ನಿಜವಾದ ತೊಂದರೆ ಯಾರಿಂದಾದರೂ ಇದ್ದರೆ ಅದು ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಂದ. ಹಾಗಂತ ಸರ್ಕಾರಕ್ಕೆ ನೂರು ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸುವರ್ಣ ನ್ಯೂಸ್ ನಡೆಸಿರುವ ಜನಾಭಿಪ್ರಾಯ ಸಮೀಕ್ಷೆಯ ಫಲಿತಾಂಶ ಹೇಳುತ್ತದೆ.
ಈ ಸಮ್ಮಿಶ್ರ ಸರ್ಕಾರಕ್ಕೆ ನಿಜವಾದ ಕಾಟ ಯಾರಿಂದ ಎಂಬ ಪ್ರಶ್ನೆಗೆ ಶೇ.43ರಷ್ಟುಜನರು ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ನಂತರದ ಸ್ಥಾನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಹೋದರ ಸಚಿವ ಎಚ್.ಡಿ.ರೇವಣ್ಣ ಅವರದ್ದು. ಶೇ.22ರಷ್ಟುಜನರು ರೇವಣ್ಣ ಹೆಸರು ಹೇಳಿದ್ದಾರೆ. ಶೇ.18ರಷ್ಟುಜನರು ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೆಸರು ಉಲ್ಲೇಖಿಸಿದ್ದಾರೆ.
ಅಲ್ಲದೆ, ಕುಮಾರಸ್ವಾಮಿ ಅವರ ಕಾರ್ಯನಿರ್ವಹಣೆಗೆ ಸಿದ್ದರಾಮಯ್ಯ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಅನಿಸುತ್ತಿದೆ ಎಂದು ಶೇ.43ರಷ್ಟುಜನರು ಹೇಳಿದ್ದಾರೆ. ಇರಬಹುದು ಎಂದು ಅಡ್ಡಗೋಡೆ ಮೇಲಿಟ್ಟಂತೆ ಹೇಳಿದವರು ಶೇ.23ರಷ್ಟುಜನರು. ಇಲ್ಲ ಎಂದವರ ಸಂಖ್ಯೆ ಶೇ.20 ಮಾತ್ರ.
ಈ ಜನಾಭಿಪ್ರಾಯದಲ್ಲಿ ಮತ್ತೊಂದು ಸ್ವಾರಸ್ಯಕರ ಸಂಗತಿ ಹೊರಬಿದ್ದಿದೆ. ಈ ಸಮ್ಮಿಶ್ರ ಸರ್ಕಾರವನ್ನು ನಿಜವಾಗಿ ನಿಯಂತ್ರಣ ಮಾಡುತ್ತಿರುವವರು ಯಾರು ಎಂಬ ಪ್ರಶ್ನೆಗೆ ಶೇ.49ರಷ್ಟುಜನರು ಜೆಡಿಎಸ್ ವರಿಷ್ಠ ಹಾಗೂ ಕುಮಾರಸ್ವಾಮಿ ಅವರ ತಂದೆ ಎಚ್.ಡಿ.ದೇವೇಗೌಡರ ಹೆಸರನ್ನು ಹೇಳಿದ್ದಾರೆ. ಅವರನ್ನು ಬಿಟ್ಟರೆ ಶೇ.24ರಷ್ಟುಜನರು ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಸರ್ಕಾರ ನಿಯಂತ್ರಿಸುತ್ತಿದ್ದಾರೆ ಎಂದು ಹೇಳಿದವರ ಸಂಖ್ಯೆ ಶೇ.16ರಷ್ಟುಮಾತ್ರ.
ಒಂದು ವೇಳೆ ಈ ಸಮ್ಮಿಶ್ರ ಸರ್ಕಾರ ಪತನಗೊಂಡಲ್ಲಿ ನಿಮ್ಮ ಆಯ್ಕೆಯ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಹೆಚ್ಚಿನ ಜನರು ಯಡಿಯೂರಪ್ಪ ಅವರ ಹೆಸರನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಶೇ.55ರಷ್ಟುಜನರು ಯಡಿಯೂರಪ್ಪ ಹೆಸರು ಹೇಳಿದ್ದರೆ, ಶೇ.23ರಷ್ಟುಜನರು ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿದ್ದಾರೆ. ಶೇ.17ರಷ್ಟುಜನ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಮತ್ತು ಕೇವಲ ಶೇ.5ರಷ್ಟುಜನರು ರೇವಣ್ಣ ಹೆಸರು ಹೇಳಿದ್ದಾರೆ.
ಸರ್ಕಾರದ ಮೊದಲ ನೂರು ದಿನಗಳಲ್ಲಿ ಆಗಿರುವ ಅತ್ಯುತ್ತಮ ಸಾಧನೆ ರೈತರ ಸಾಲಮನ್ನಾ ಎನ್ನುವುದು ಜನಾಭಿಪ್ರಾಯದಿಂದ ಗೊತ್ತಾಗಿದೆ. ಶೇ.44ರಷ್ಟುಜನರು ರೈತರ ಸಾಲಮನ್ನಾ ಅತ್ಯುತ್ತಮ ಎಂದಿದ್ದಾರೆ. ಶೇ.12ರಷ್ಟುಜನರು ಖಾಸಗಿ ಸಾಲ ಮನ್ನಾ ಎಂದು ಹೇಳಿದ್ದರೆ, ಶೇ.16ರಷ್ಟುಜನರು ಕೊಡಗು ಮಳೆ ಅನಾಹುತ ನಿರ್ವಹಣೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈತ್ರಿ ಸರ್ಕಾರದ ಸಾಧನೆ ಸಾಧಾರಣವಾಗಿದೆ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ. ಶೇ.47ರಷ್ಟುಜನರು ಸಾಧನೆ ಸಾಧಾರಣ ಎಂದಿದ್ದರೆ, ಶೇ.23ರಷ್ಟುಜನರು ಉತ್ತಮ ಎಂಬುದಾಗಿ ಹೇಳಿದ್ದಾರೆ. ಕಳಪೆ ಎಂದು ಹೇಳಿದವರ ಸಂಖ್ಯೆ ಶೇ.23 ರಷ್ಟಾದರೆ ಅತ್ಯುತ್ತಮ ಎಂದು ಹೇಳಿದ ಜನರು ಕೇವಲ ಶೇ.7ರಷ್ಟುಮಾತ್ರ.
ಈ ಜನಾಭಿಪ್ರಾಯದಲ್ಲಿ ಹೊರಬಿದ್ದಿರುವ ಮತ್ತೊಂದು ಸಂಗತಿ ಎಂದರೆ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲ ಮುಂದುವರೆಯುವ ಹೆಚ್ಚಿನ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ಶೇ.44ರಷ್ಟುಜನರು ಐದು ವರ್ಷ ಪೂರೈಸುವುದು ಸಾಧ್ಯವೇ ಇಲ್ಲ ಎಂದಿದ್ದಾರೆ. ಖಂಡಿತ ಪೂರೈಸುತ್ತಾರೆ ಎಂದು ಹೇಳಿದವರ ಸಂಖ್ಯೆ ಕೇವಲ ಶೇ.11ರಷ್ಟುಮಾತ್ರ. ಶೇ.29ರಷ್ಟುಜನರು ಪೂರೈಸಬಹುದು ಎಂದು ಹೇಳಿದ್ದರೆ, ಶೇ.16ರಷ್ಟುಮಂದಿ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ.
ಬಜೆಟ್ ಘೋಷಣೆ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಕೇಳಿಬಂದಿದ್ದ ಪ್ರಾದೇಶಿಕ ಅಸಮಾನತೆ ಕುರಿತಂತೆ ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ನಿರ್ಲಕ್ಷಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಶೇ.46ರಷ್ಟುಜನರು ಹೌದು ಎಂದಿದ್ದಾರೆ. ಶೇ.18ರಷ್ಟುಜನರು ಇರಬಹುದು ಎಂದಿದ್ದರೆ, ಶೇ.14ರಷ್ಟುಮಂದಿ ಇಲ್ಲ ಎಂದು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಪ್ರತಿಪಕ್ಷ ಬಿಜೆಪಿ ಅಭದ್ರಗೊಳಿಸಲು ಯತ್ನಿಸುತ್ತಿದೆ ಎಂಬುದನ್ನು ಶೇ.33ರಷ್ಟುಜನರು ಹೇಳಿದ್ದಾರೆ. ಆದರೆ, ಶೇ.34ರಷ್ಟುಜನರು ಇಲ್ಲ ಎಂದಿದ್ದಾರೆ.
ಜನಾಭಿಪ್ರಾಯದಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಜನರು ಈಗಿನ ಕುಮಾರಸ್ವಾಮಿ ಅವರಿಗಿಂತಲೂ ಹಿಂದೆ 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರನ್ನು ಹೆಚ್ಚು ಇಷ್ಟಪಡುತ್ತಾರೆ. 2006ರಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಕಾರ್ಯನಿರ್ವಹಣೆ ಇಷ್ಟವೋ ಅಥವಾ 2018ರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಾರ್ಯವೈಖರಿ ಇಷ್ಟವಾಗುತ್ತದೆಯೋ ಎಂಬ ಪ್ರಶ್ನೆಗೆ ಶೇ.44ರಷ್ಟುಜನರು 2006ರ ಅವಧಿಯ ಮುಖ್ಯಮಂತ್ರಿ ಎಂದು ಉತ್ತರಿಸಿದ್ದಾರೆ. ಎರಡೂ ಅವಧಿಯ ಮುಖ್ಯಮಂತ್ರಿಯಾಗಿ ಇಷ್ಟಎಂದವರು ಶೇ.20, 2018ರ ಅವಧಿಯ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಇಷ್ಟವಾಗಿಲ್ಲ ಎಂದವರು ಶೇ.16ರಷ್ಟು.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನಿಜವಾದ ಕಾಟ ಯಾರಿಂದ.?
ಸಿದ್ದರಾಮಯ್ಯ 43%
ಯಡಿಯೂರಪ್ಪ 18%
ಎಚ್.ಡಿ.ರೇವಣ್ಣ 22%
ಯಾರೂ ಇಲ್ಲ 17%
ಕುಮಾರಸ್ವಾಮಿ ಸಿಎಂ ಆಗಿ 5 ವರ್ಷ ಪೂರೈಸುತ್ತಾರೆ ಅನ್ನಿಸುತ್ತಿದೆಯೇ?
ಖಂಡಿತ ಹೌದು 11%
ಆಗಬಹುದು 29%
ಸಾಧ್ಯವೇ ಇಲ್ಲ 44%
ಗೊತ್ತಿಲ್ಲ 16%
ಮೈತ್ರಿ ಸರ್ಕಾರವನ್ನು ನಿಜವಾಗಿ ಕಂಟ್ರೋಲ… ಮಾಡುತ್ತಿರುವವರು ಯಾರು?
ಎಚ್.ಡಿ.ದೇವೇಗೌಡ 49%
ಸಿದ್ದರಾಮಯ್ಯ 24%
ಎಚ್.ಡಿ.ರೇವಣ್ಣ 11%
ಕುಮಾರಸ್ವಾಮಿ 16%
ಮೈತ್ರಿ ಸರ್ಕಾರದ 100 ದಿನಗಳಲ್ಲಿ ಅತ್ಯುತ್ತಮ ಸಾಧನೆ ಯಾವುದು?
ರೈತರ ಸಾಲಮನ್ನಾ 44%
ಖಾಸಗಿ ಸಾಲಮನ್ನಾ 12%
ಕೊಡಗು ಪ್ರವಾಹ ನಿರ್ವಹಣೆ 16%
ಯಾವುದೂ ಇಲ್ಲ 28%
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.