
ಬೆಂಗಳೂರು (ಮಾ.28): ಬೆಂಗಳೂರಿನ ಬಹುತೇಕ ಕಡೆ ಮಸಾಜ್ ಪಾರ್ಲರ್ ಹೆಸರಲ್ಲಿ ನಡೆಯುತ್ತಿರುವ ಮಾಂಸದಂಧೆಯನ್ನು ಸುವರ್ಣ ನ್ಯೂಸ್ ಕುಟುಕು ಕಾರ್ಯಾಚರಣೆ ನಡೆಸಿ ಪ್ರಸಾರ ಮಾಡಿದ ವರದಿಯನ್ನು ಪೊಲೀಸ್ ಇಲಾಖೆಯೇ ಒಪ್ಪಿಕೊಂಡಿದೆ. ಅಲ್ಲದೆ, ದಂಧೆಗೆ ಬೆನ್ನೆಲುಬಾಗಿದ್ದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಬಿಸಿ ಮುಟ್ಟಿಸಲಾಗಿದೆ.
ನಗರದಲ್ಲಿ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ವರದಿ ಮಾಡುವಂತೆ ಪ್ರತಿದಿನ ಹತ್ತಾರು ಕರೆಗಳು ಸುವರ್ಣ ನ್ಯೂಸ್ಗೆ ಕಚೇರಿಗೆ ಬರ್ತಾನೇ ಇದ್ದವು. ಅದರಲ್ಲೂ ಇಂದಿರಾನಗರ, ಜೀವನ್ ಭೀಮಾನಗರದಲ್ಲಿ ತುಸು ಹೆಚ್ಚಾಗಿಯೇ ಈ ದಂಧೆ ಇದೆ ಎಂಬ ಮಾಹಿತಿ ಬಂದಿತ್ತು.
ಕುಟುಕು ಕಾರ್ಯಾಚರಣೆ ನಡೆಸಿ ಸಾಕ್ಷಿ ಸಮೇತ ಪ್ರಸಾರ ಮಾಡುತ್ತಿದ್ದಂತೆ ಪೊಲೀಸ್ ಆಯುಕ್ತರೇ ಅದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಇಂತಹ ದಂಧೆಗಳ ಕಡಿವಾಣ ಹಾಕುವುದಷ್ಟೇ ಅಲ್ಲದೆ, ಅಕ್ರಮಕ್ಕೆ ರಕ್ಷಣೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ.
ಪೂರ್ವ ವಲಯ ಡಿಸಿಪಿ ಅಜಯ್ ಹಿಲೋರಿ ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳಿಗೂ ಚುರುಕು ಮುಟ್ಟಿಸಿದ್ದು, ಜೀವನ್ ಭೀಮಾನಗರ ಇನ್ಸ್ಪೆಕ್ಟರ್ ಶಿವಪ್ರಸಾದ್' ರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ
ಸುವರ್ಣ ನ್ಯೂಸ್ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಅಕ್ರಮ ದಂಧೆ ಮಾಡುತ್ತಿದ್ದ ಬಹುತೇಕ ಮಸಾಜ್ ಪಾರ್ಲರ್'ಗೆ ಬೀಗ ಹಾಕಿಸಿದ್ದಾರೆ. ಅಲ್ಲದೆ, ಅಕ್ರಮದಲ್ಲಿ ಭಾಗಿಯಾಗುವವರಿಗೂ ಖಡಕ್ ಎಚ್ಚರಿಕೆ ಕೂಡ ಹಿರಿಯ ಅಧಿಕಾರಿಗಳು ನೀಡಿದ್ದಾರೆ. ಹಲಸೂರು ಉಪವಿಭಾಗದ ಎಸಿಪಿ, ಪೂರ್ವ ವಿಭಾಗದ ಡಿಸಿಪಿ ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.