ಜಯಲಲಿತಾ ಖಾತೆಗಳ ಹಸ್ತಾಂತರದ ಸುತ್ತ ಅನುಮಾನಗಳ ಹುತ್ತ

Published : Oct 13, 2016, 11:39 AM ISTUpdated : Apr 11, 2018, 01:05 PM IST
ಜಯಲಲಿತಾ ಖಾತೆಗಳ ಹಸ್ತಾಂತರದ ಸುತ್ತ ಅನುಮಾನಗಳ ಹುತ್ತ

ಸಾರಾಂಶ

ಪನ್ನೀರ್‌ ಸೆಲ್ವಂ ಅವರಿಗೆ ಖಾತೆಗಳನ್ನು ಹಸ್ತಾಂತರಿಸುವ ವೇಳೆಗೆ ರಾಜಭವನವು, ‘‘ಮುಖ್ಯಮಂತ್ರಿ ಜಯಲಲಿತಾ ಅವರ ಸಲಹೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ,’’ ಎಂದು ಹೇಳಿತ್ತು. ಆದರೆ, ಜಯಲಲಿತಾ ಅವರು ನಿಜಕ್ಕೂ ನಿರ್ದೇಶನ ನೀಡುವ, ಕಡತಗಳಿಗೆ ಸಹಿ ಹಾಕುವ ಸ್ಥಿತಿಯಲ್ಲಿದ್ದಾರೆಯೋ ಎಂಬುದು ಈಗ ಎದ್ದಿರುವ ಪ್ರಶ್ನೆ

ಚೆನ್ನೈ(ಅ.13): ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರಿರುವ ತಮಿಳುನಾಡು ಸಿಎಂ ಜಯಲಲಿತಾ ಅವರು ತಮ್ಮ 8 ಖಾತೆಗಳನ್ನು ಹಣಕಾಸು ಸಚಿವ ಒ ಪನ್ನೀರ್‌ಸೆಲ್ವಂ ಅವರಿಗೆ ಹಸ್ತಾಂತರಿಸುವಂತೆ ಸೂಚಿಸಿದ್ದಾರೆ ಎಂಬ ಅಂಶವು ಈಗ ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಇವುಗಳನ್ನಿಟ್ಟುಕೊಂಡು ತಮಿಳುನಾಡಿನ ಪ್ರತಿಪಕ್ಷಗಳೂ ಎಐಎಡಿಎಂಕೆಗೆ ಹಲವು ಪ್ರಶ್ನೆಗಳ ಬಾಣಗಳನ್ನು ಬಿಡತೊಡಗಿವೆ.

ಪನ್ನೀರ್‌ ಸೆಲ್ವಂ ಅವರಿಗೆ ಖಾತೆಗಳನ್ನು ಹಸ್ತಾಂತರಿಸುವ ವೇಳೆಗೆ ರಾಜಭವನವು, ‘‘ಮುಖ್ಯಮಂತ್ರಿ ಜಯಲಲಿತಾ ಅವರ ಸಲಹೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ,’’ ಎಂದು ಹೇಳಿತ್ತು. ಆದರೆ, ಜಯಲಲಿತಾ ಅವರು ನಿಜಕ್ಕೂ ನಿರ್ದೇಶನ ನೀಡುವ, ಕಡತಗಳಿಗೆ ಸಹಿ ಹಾಕುವ ಸ್ಥಿತಿಯಲ್ಲಿದ್ದಾರೆಯೋ ಎಂಬುದು ಈಗ ಎದ್ದಿರುವ ಪ್ರಶ್ನೆ. ಏಕೆಂದರೆ, ‘‘ಜಯಾ ಅವರು ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಾರೆ ಹಾಗೂ ಪ್ಯಾಸಿವ್ ಫಿಸಿಯೋಥೆರಪಿಗೆ ಒಳಗಾಗುತ್ತಿದ್ದಾರೆ,’’ ಎಂದು ಸ್ವತಃ ಅಪೋಲೋ ಆಸ್ಪತ್ರೆ ನೀಡುತ್ತಿರುವ ವೈದ್ಯಕೀಯ ಬುಲೆಟಿನ್‌ಗಳು ಹೇಳುತ್ತಿವೆ. ಅಂದರೆ, ಅವರು ಪ್ರಜ್ಞಾವಸ್ಥೆಯಲ್ಲಿಲ್ಲ ಎಂದರ್ಥ. ಹೀಗಿರುವಾಗ ಜಯಲಲಿತಾ ಅವರು ತಮ್ಮ ಆಡಳಿತಕ್ಕೆ ಸಂಬಂಸಿದ ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದಾದರೂ ಹೇಗೆ ಎನ್ನುವ ಅನುಮಾನಗಳು ಮೂಡತೊಡಗಿವೆ. ಒಂದು ವೇಳೆ, ಅವರು ಮಾತನಾಡುವ, ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲೇ ಇದ್ದರೆ, ಅದನ್ನು ಮೆಡಿಕಲ್ ಬುಲೆಟಿನ್‌ನಲ್ಲಿ ವೈದ್ಯರೇಕೆ ಬಹಿರಂಗಪಡಿಸುತ್ತಿಲ್ಲ ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ ಎಂದು ಫಸ್ಟ್‌ಪೋಸ್ಟ್’ ವರದಿ ಮಾಡಿದೆ.

ಇನ್ನೊಂದೆಡೆ, ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ತಮ್ಮ ಸಾಂವಿಧಾನಿಕ ವಿವೇಚನಾಕಾರವನ್ನು ಬಳಸಿಕೊಂಡು, ಜಯಾ ಅವರ ಖಾತೆಗಳನ್ನು ಪನ್ನೀರ್‌ಸೆಲ್ವಂ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿದ್ದಾಗಿಯೂ ವರದಿ ಹೇಳಿದೆ. ಒಬ್ಬ ಮುಖ್ಯಮಂತ್ರಿಯು ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲದಾಗ, ಪ್ರಮುಖ ನಿರ್ಧಾರಗಳನ್ನು ಯಾರು ಕೈಗೊಳ್ಳಬಹುದು ಎಂಬ ಬಗ್ಗೆ ಸಂವಿಧಾನದಲ್ಲಿ ಯಾವುದೇ ಉಲ್ಲೇಖವಿಲ್ಲ. ಹೀಗಾಗಿ, ರಾಜ್ಯಪಾಲ ರಾವ್ ಅವರು ಹಿರಿಯ ಸಚಿವರು ಮತ್ತು ಅಕಾರಿಗಳೊಂದಿಗೆ ಚರ್ಚಿಸಿ, ಈ ನಿರ್ಧಾರ ಕೈಗೊಂಡರು ಎಂದೂ ಹೇಳಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ವಾರವಷ್ಟೇ ತಮಿಳುನಾಡಿನ ಹಿರಿಯ ಸಚಿವರು ರಾಜ್ಯಪಾಲ ರಾವ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಪ್ರಶ್ನೆಯೆತ್ತಿದ ಪ್ರತಿಪಕ್ಷಗಳು:

ಇದೇ ಪ್ರಶ್ನೆಯನ್ನು ಎತ್ತಿರುವ ಪ್ರತಿಪಕ್ಷ ಡಿಎಂಕೆ, ಈ ಕುರಿತು ಎಐಎಡಿಎಂಕೆಯೊಂದಿಗೆ ಸ್ಪಷ್ಟನೆ ಕೇಳಿದೆ. ‘‘ತಮ್ಮ ಖಾತೆಗಳನ್ನು ಹಸ್ತಾಂತರಿಸುವಂತೆ, ಸ್ವತಃ ಜಯಲಲಿತಾ ಅವರೇ ೈಲ್‌ಗೆ ಸಹಿ ಹಾಕಿದ್ದಾರಾ ಎಂಬ ಪ್ರಶ್ನೆ ನಮ್ಮ ಜನರಲ್ಲಿ ಮೂಡಿದೆ. ಈ ಕುರಿತು ರಾಜ್ಯಪಾಲರೇ ಸ್ಪಷ್ಟನೆ ನೀಡಬೇಕು,’’ ಎಂದು ಡಿಎಂಕೆ ನಾಯಕ ಎಂ ಕರುಣಾನಿ ಒತ್ತಾಯಿಸಿದ್ದಾರೆ. ಜಯಾರ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ರಾಜ್ಯಪಾಲರ ಹೇಳಿಕೆಯು ಅಚ್ಚರಿ ಮೂಡಿಸಿದೆ ಎಂದೂ ಅವರು ಹೇಳಿದ್ದಾರೆ. ಜತೆಗೆ, ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಗೂ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್‌ಗಾಗಲೀ ನೇರವಾಗಿ ಜಯಾರನ್ನು ನೋಡಲು ಏಕೆ ಅವಕಾಶ ಕಲ್ಪಿಸಲಿಲ್ಲ ಎಂಬ ಪ್ರಶ್ನೆಯನ್ನೂ ಅವರು ಹಾಕಿದ್ದಾರೆ. ಇದೇ ವೇಳೆ, ಪಿಎಂಕೆ ನಾಯಕ ಎಸ್ ರಾಮದಾಸ್ ಕೂಡ ಇದೇ ಪ್ರಶ್ನೆ ಮುಂದಿಟ್ಟಿದ್ದು, ಸಂಬಂಧಪಡದ ವ್ಯಕ್ತಿಗಳು ಆಡಳಿತದ ನಿಯಂತ್ರಣ ಕೈಗೊಳ್ಳಲು ರಾಜ್ಯಪಾಲರು ಬಿಡಬಾರದು ಎಂದು ಹೇಳಿದ್ದಾರೆ. ಏತನ್ಮಧ್ಯೆ, ಎಐಎಡಿಎಂಕೆಯ ಉಚ್ಚಾಟಿತ ಸಂಸದೆ ಶಶಿಕಲಾ ಪುಷ್ಟಾ ಅವರು, ಸಿಎಂ ಜಯಲಲಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ ವಿಚಾರದಲ್ಲಿ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.

ಅಪೋಲೋ ಆಸ್ಪತ್ರೆಗೆ ಜೇಟ್ಲಿ, ಶಾ ಭೇಟಿ

ಕೇಂದ್ರ ಸಚಿವ ಅರುಣ್ ಜೇಟ್ಲಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬುಧವಾರ ಚೆನ್ನೈನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ, ಸಿಎಂ ಜಯಲಲಿತಾರ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಆದರೆ, ಆಸ್ಪತ್ರೆಯಿಂದ ಹೊರಬಂದಾಗ ಮಾಧ್ಯಮ ಪ್ರತಿನಿಗಳು ಕೇಳಿದ ಯಾವುದೇ ಪ್ರಶ್ನೆಗಳಿಗೂ ಅವರು ಉತ್ತರಿಸಿಲ್ಲ. ದೆಹಲಿಗೆ ವಾಪಸಾದ ಬಳಿಕ ಟ್ವೀಟ್ ಮಾಡಿರುವ ಜೇಟ್ಲಿ ಮತ್ತು ಶಾ, ‘‘ಜಯಲಲಿತಾ ಅವರು ಶೀಘ್ರವೇ ಗುಣಮುಖರಾಗಿ ವಾಪಸಾಗಲಿದ್ದಾರೆ ಎಂಬ ಭರವಸೆಯಿದೆ,’’ ಎಂದಿದ್ದಾರೆ. ಪುದುಚೇರಿಯ ಮಾಜಿ ಸಿಎಂ ಎನ್ ರಂಗಸಾಮಿ ಅವರೂ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೀರಿಯಲ್‌ ನಟಿ ಅ*ತ್ಯಾಚಾರ ಮಾಡಿ ಬೆದರಿಸಿ ಮದುವೆ, ಈಗ ನಡುರಸ್ತೆಯಲ್ಲಿಯೇ ಅತ್ತೆ-ಮಾವನ ಮೇಲೆ ಹಲ್ಲೆ!
2 ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿಗೆ ಹೋಯ್ತು?, ವಿಪಕ್ಷಗಳ ಆಕ್ರೋಶಕ್ಕೆ ಹೆಬ್ಬಾಳ್ಕರ್ ಭಾವುಕ, ನಾನು ಮಹಿಳೆ ಎಂಬ ಕಾರಣಕ್ಕೆ ಹೀಗೆ ಮಾಡ್ತೀರಾ ಎಂದ ಸಚಿವೆ