ಶಾಲೆಗಳಲ್ಲಿ ‘ಅಸತೋಮಾ ಸದ್ಗಮಯ’: ಸಾಂವಿಧಾನಿಕ ಪೀಠದಿಂದ ವಿಚಾರಣೆ?

By Web DeskFirst Published Jan 29, 2019, 9:42 AM IST
Highlights

ಶಾಲೆಗಳಲ್ಲಿ ‘ಅಸತೋಮಾ ಸದ್ಗಮಯ’: ಸಾಂವಿಧಾನಿಕ ಪೀಠದಿಂದ ವಿಚಾರಣೆ?  ಇದು ಧಾರ್ಮಿಕ ಶ್ಲೋಕ, ಇದರ ಹೇರಿಕೆ ಸಲ್ಲದು ಎಂದು ಸುಪ್ರೀಂಗೆ ಅರ್ಜಿ | ಧಾರ್ಮಿಕ ಶ್ಲೋಕ ಆಗಲ್ಲ: ಸರ್ಕಾರದ ವಾದ |  ಸಂವಿಧಾನ ಪೀಠ ರಚಿಸುವಂತೆ ಸಿಜೆಐಗೆ ದ್ವಿಸದಸ್ಯ ಪೀಠ ಕೋರಿಕೆ

ನವದೆಹಲಿ (ಜ. 29):  ಶಾಲೆಗಳಲ್ಲಿ ‘ಅಸತೋಮಾ ಸದ್ಗಮಯ’ದಂತಹ ಸಂಸ್ಕೃತ ಹಾಗೂ ಕೆಲವು ಹಿಂದಿ ಶ್ಲೋಕಗಳನ್ನು ಪ್ರಾರ್ಥನೆಯ ವೇಳೆ ಪಠಿಸುವ ವಿವಾದಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಪೀಠ ರಚಿಸಲು ಸರ್ವೋಚ್ಚ ನ್ಯಾಯಾಲಯ ಒಲವು ವ್ಯಕ್ತಪಡಿಸಿದೆ.

ನ್ಯಾ. ರೋಹಿನ್ಟನ್‌ ನಾರಿಮನ್‌ ಅವರ ದ್ವಿಸದಸ್ಯ ಪೀಠದ ಮುಂದೆ, ಕೇಂದ್ರೀಯ ವಿದ್ಯಾಲಯಗಳು ಸೇರಿದಂತೆ ಸರ್ಕಾರಿ ಶಾಲೆಗಳಲ್ಲಿ ಸಂಸ್ಕೃತ ಹಾಗೂ ಹಿಂದಿ ಶ್ಲೋಕಗಳನ್ನು ಪ್ರಾರ್ಥನೆ ವೇಳೆ ಪಠಿಸುವುದನ್ನು ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯೊಂದು ಸೋಮವಾರ ವಿಚಾರಣೆಗೆ ಬಂದಿತ್ತು.

ಇದರ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ‘ಇದು ಮಹತ್ವದ ವಿಚಾರ ಎನ್ನಿಸುತ್ತದೆ. ಸಾಂವಿಧಾನಿಕ ಪೀಠ ಇದರ ಅಧ್ಯಯನ ನಡೆಸಬೇಕಾಗುತ್ತದೆ’ ಎಂದು ಪ್ರಕರಣದಲ್ಲಿ ಸರ್ಕಾರದ ಪರ ವಾದಿಸುತ್ತಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಹೇಳಿತು.

ಇದು ಧಾರ್ಮಿಕ ಪ್ರಾರ್ಥನೆ ಅಲ್ಲ- ಸರ್ಕಾರ:

ತಮ್ಮ ವಾದದ ವೇಳೆ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡ ಮೆಹ್ತಾ, ‘ಅಸತೋಮಾ ಸದ್ಗಮಯ’ದಂತಹ ಸಂಸ್ಕೃತ ಪ್ರಾರ್ಥನೆಯು ಉಪನಿಷತ್ತಿನಲ್ಲಿ ಇದೆ. ಇದನ್ನೇ ಶಾಲೆಗಳ ಪ್ರಾರ್ಥನೆಯಲ್ಲೂ ಅಳವಡಿಸಲಾಗಿದೆ. ಸಂಸ್ಕೃತ ಭಾಷೆಯಲ್ಲಿದೆ ಎಂಬ ಮಾತ್ರಕ್ಕೆ ಇದು ಧಾರ್ಮಿಕ ಪ್ರಾರ್ಥನೆ ಎನ್ನಿಸಿಕೊಳ್ಳಲ್ಲ. ಎಲ್ಲ ಧರ್ಮಗಳೂ ಇದನ್ನು ಅಳವಡಿಸಿಕೊಂಡಿವೆ. ಕ್ರೈಸ್ತ ಶಾಲೆಗಳು ‘ಆನೆಸ್ಟಿಇಸ್‌ ದ ಬೆಸ್ಟ್‌ ಪಾಲಿಸಿ’ ಎಂಬ ಪ್ರಾರ್ಥನೆ ಹಾಡಿಸುತ್ತವೆ. ಅದನ್ನು ನಾವು ಧಾರ್ಮಿಕ ಎನ್ನಲಾಗುತ್ತದೆಯೇ? ಅದು ಧಾರ್ಮಿಕ ಅಲ್ಲ’ ಎಂದರು.

ಸುಪ್ರೀಂ ಕೋರ್ಟ್‌ ಲಾಂಛನದಲ್ಲೇ ‘ಯತೋ ಧರ್ಮಸ್ತತೋ ಜಯಃ’ ಎಂದಿದೆ. ಎಲ್ಲಿ ಧರ್ಮ ಇದೆಯೋ ಅಲ್ಲಿ ಜಯ ಎಂದು ಇದರರ್ಥ. ಇದನ್ನೂ ಧಾರ್ಮಿಕ ಅಥವಾ ಕೋಮು ವಾಕ್ಯ ಎನ್ನಲಾಗುತ್ತದೆಯೇ ಎಂದೂ ಮೆಹ್ತಾ ಪ್ರಶ್ನಿಸಿದರು.

ಆಗ ಮಧ್ಯಪ್ರವೇಶಿಸಿದ ನ್ಯಾ. ನಾರಿಮನ್‌, ‘ಇದನ್ನು ಸಾಂವಿಧಾನಿಕ ಪೀಠವೇ ಇತ್ಯರ್ಥ ಮಾಡಬೇಕು. ಅರ್ಜಿಯನ್ನು ಮುಖ್ಯ ನ್ಯಾಯಾಧೀಶರ ಮುಂದೆ ‘ಸೂಕ್ತ ಪೀಠ ರಚಿಸಿ’ ಎಂದು ಇಡಲಾಗುವುದು’ ಎಂದೂ ಅವರು ಹೇಳಿದರು.

ಅರ್ಜಿ ಏನು?:

ಜಬಲ್ಪುರದ ವಿನಾಯಕ ಶಾ ಎಂಬುವರು ಶಾಲೆಗಳಲ್ಲಿ ಧಾರ್ಮಿಕ ಶ್ಲೋಕ ಪಠಣ ಹೇರಿಕೆ ಮಾಡುವುದು ವಾಕ್‌ ಸ್ವಾತಂತ್ರ್ಯದ ಹರಣ ಎಂದು ಅರ್ಜಿ ಸಲ್ಲಿಸಿದ್ದರು.

click me!