
ವಾಷಿಂಗ್ಟನ್[ಜು.08]: ಭಾರತೀಯ ಮೂಲದ ಟೆಕ್ಕಿ ಶರತ್ ಕೊಪ್ಪು[26] ಹತ್ಯೆಯ ಶಂಕಿತ ಹಂತಕನ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.
ರೆಸ್ಟೋರೆಂಟ್ ಬಳಿಯ ಆಚೆ ಈಚೆ ಓಡಾಡುತ್ತಿದ್ದ ಈತನ ದೃಶ್ಯವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ನಿನ್ನೆ ಸಂಜೆ ಕಾನ್ಸಾನ್ ಪಟ್ಟಣದ ರಸ್ಟೋರೆಂಟ್ ಬಳಿ ನಿಂತಿದ್ದಾಗ ಶಂಕಿತ ಹಂತಕ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದ. ಹಂತಕ 25 ವರ್ಷದ ಆಸುಪಾಸಿನವನಾಗಿದ್ದು ದರೋಡೆ ಮಾಡಲು ಗುಂಡಿಕ್ಕಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಹಂತಕನನ್ನು ಹುಡುಕಿಕೊಟ್ಟರೆ ಅಥವಾ ಸುಳಿವು ನೀಡಿದವರಿಗೆ 10 ಸಾವಿರ ಅಮೆರಿಕನ್ ಡಾಲರ್ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.
ಹೈದರಾಬಾದ್ ಮೂಲದ ಶರತ್ ಕೊಪ್ಪು[26] ಮೃತ ಟೆಕ್ಕಿ. ಕೆಲವೇ ತಿಂಗಳ ಹಿಂದೆ ಅಮೆರಿಕಾಕ್ಕೆ ಆಗಮಿಸಿದ್ದ ಶರತ್ ಮಿಸ್ಸೋರಿ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಸ್ಥಳೀಯ ಪೊಲೀಸ್ ವರದಿಯ ಪ್ರಕಾರ ನಿನ್ನೆ ಸಂಜೆ 7 ಗಂಟೆ ಸಮಯದಲ್ಲಿ ಕಾನ್ಸಾನ್ ಪಟ್ಟಣದ ರೆಸ್ಟೋರೆಂಟ್ ಒಂದರ ಆಚೆ ನಿಂತಿದ್ದಾಗ ಹತ್ಯೆ ನಡೆದಿದೆ.
ಸುಷ್ಮಾ ಸ್ವರಾಜ್ ಸಂತಾಪ
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶರತ್ ಸಾವಿನ ಬಗ್ಗೆ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದು ಆತನ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದಿರುವ ಅವರು ಮೃತದೇಹ ಭಾರತಕ್ಕೆ ರವಾನಿಸುವ ಬಗ್ಗೆ ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಶರತ್ ಕಪ್ಪು ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಹೈದರಾಬಾದ್ ವಿವಿಯಲ್ಲಿ ಪದವಿ ಪೂರೈಸಿ ಸಾಫ್ಟ್'ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2 ತಿಂಗಳ ಹಿಂದಷ್ಟೆ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಕ್ಕೆ ತೆರಳಿದ್ದರು. 2017ರ ಫೆಬ್ರವರಿಯಲ್ಲಿ ಭಾರತೀಯ ಮೂಲದ ಶ್ರೀನಿವಾಸ್ ಕೂಚಿಬೋತ್ಲಾ ಎಂಬ ಟೆಕ್ಕಿಯನ್ನು ಗುಂಡಿಕ್ಕಿ ಹತ್ಯೆಗಯ್ಯಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.