
ಬೆಂಗಳೂರು: ಬಿಬಿಎಂಪಿ ಮೇಯರ್- ಉಪಮೇಯರ್ ಚುನಾವಣೆ ಮುಗಿದ ಬೆನ್ನಲ್ಲೇ ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಸ್ಥಾನಗಳಿಗೆ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರ ನಡುವೆ ತೀವ್ರ ಪೈಪೋಟಿ ಶುರುವಾಗಿದೆ.
ಪ್ರತಿ ವರ್ಷ ಮೇಯರ್ ಚುನಾವಣೆಯ ದಿನವೇ 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೂ ಚುನಾವಣೆ ನಡೆಯುತ್ತಿತ್ತು. ಆದರೆ ಈ ಬಾರಿ ಮೇಯರ್ ಚುನಾವಣೆ ದಿನ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸದೆ ಅಕ್ಟೋಬರ್ 25ಕ್ಕೆ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಿಗದಿ ಮಾಡಲಾಗಿದೆ.
ಅ.24ರಂದು ಸದಸ್ಯ ಆಕಾಂಕ್ಷಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಸ್ಥಾಯಿಸಮಿತಿಯ ಅಧ್ಯಕ್ಷ ಸ್ಥಾನಕ್ಕಾಗಿ ತಮ್ಮ ನಾಯಕರ ಮೂಲಕ ಆಯಾಪಕ್ಷಗಳಲ್ಲಿ ಲಾಬಿ ಆರಂಭಿಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರ ಮೈತ್ರಿ ಅಸ್ತಿತ್ವದಲ್ಲಿರುವ ಬಿಬಿಎಂಪಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ಭಾರಿ ಬೇಡಿಕೆ ಇದೆ. ಆಯಕಟ್ಟಿನ ಸ್ಥಾಯಿ ಸಮಿತಿಗಳಾದ ನಗರ ಯೋಜನೆ, ವಾರ್ಡ್ ಕಾಮಗಾರಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗಿದೆ.
ಈ ಆಯಕಟ್ಟಿನ ಸ್ಥಾಯಿಸಮಿತಿಗಳು ಸೇರಿದಂತೆ ಐದು ಸ್ಥಾಯಿಸಮಿತಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಜೆಡಿಎಸ್ ಬೇಡಿಕೆ ಇಟ್ಟಿದೆ. ಆದರೆ ಕಾಂಗ್ರೆಸ್ ನಾಲ್ಕು ಸಮಿತಿಗಳನ್ನು ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಈ ವರ್ಷವೂ ನಗರ ಯೋಜನೆ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯನ್ನು ಕಾಂಗ್ರೆಸ್ ತನ್ನ ಬಳಿಯೇ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಹೀಗಾಗಿ ಅಧ್ಯಕ್ಷ ಸ್ಥಾನಗಳಿಗೆ ಬೇಡಿಕೆ ಹೆಚ್ಚಾಗಿದೆ.
ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ: ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್‌ನಲ್ಲಿ ಹಿರಿಯ ಸದಸ್ಯರ ನಡುವೆ ಭಾರೀ ಪೈಪೋಟಿ ನಡೆದಿದೆ. ಸದಸ್ಯರಾದ ಜಾಕಿರ್ ಹುಸೇನ್, ಆರ್ಯ ಶ್ರೀನಿವಾಸ್, ವೇಲುನಾಯ್ಕರ್, ಆಂಜಿನಪ್ಪ ಸೇರಿದಂತೆ ಹಲವರು ಅಧ್ಯಕ್ಷ ಸ್ಥಾನಗಳಿಗಾಗಿ ತಮ್ಮ ನಾಯಕರ ಮೂಲಕ ಲಾಬಿ ನಡೆಸಿದ್ದಾರೆ.
ಜೆಡಿಎಸ್‌ನಲ್ಲಿ ಈವರೆಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಪಡೆಯದವರು ತೀವ್ರ ಲಾಬಿ ಆರಂಭಿಸಿದ್ದಾರೆ. ಪಕ್ಷದ 14 ಸದಸ್ಯರ ಪೈಕಿ ಕಳೆದ ಎರಡು ವರ್ಷಗಳಿಂದ ಪಕ್ಷದ ಎಂಟು ಪಾಲಿಕೆ ಸದಸ್ಯರಿಗೆ ಸಮಿತಿಗಳ ಅಧ್ಯಕ್ಷ ಸ್ಥಾನ ದೊರೆತಿದೆ. ಇಬ್ಬರಿಗೆ ಉಪಮೇಯರ್ ಪಟ್ಟ ದೊರೆತಿದೆ. ಉಳಿದ ನಾಲ್ಕು ಸದಸ್ಯರಿಗೆ ಯಾವುದೇ ಸಮಿತಿಗಳ ಅಧ್ಯಕ್ಷ ಸ್ಥಾನ ಅಥವಾ ಪ್ರಮುಖ ಹುದ್ದೆ ಸಿಕ್ಕಿಲ್ಲ. ಪಾಲಿಕೆಯ ಹಾಲಿ
ಜೆಡಿಎಸ್ ಪಕ್ಷದ ನಾಯಕಿ ಕಾವೇರಿಪುರ ವಾರ್ಡ್‌ನ ರಮೀಳಾ ಉಮಾಶಂಕರ್, ಶಕ್ತಿ ಗಣಪತಿ ನಗರದ ಗಂಗಮ್ಮ, ಮಾರಪ್ಪನಪಾಳ್ಯ ವಾರ್ಡ್‌ನ ಮಹದೇವ್, ವಿಶ್ವನಾಥ ನಾಗೇನಹಳ್ಳಿಯ ರಾಜಶೇಖರ್, ಪಾದರಾಯನ ಪಾಳ್ಯ ಇಬ್ರಾಹಿಂ ಪಾಷಾ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗಾಗಿ ಭಾರಿ ಪೈಪೋಟಿ ನಡೆಸಿದ್ದಾರೆ.
ಪಕ್ಷೇತರರ ಸದಸ್ಯರಾದ ದೊಮ್ಮಲೂರು ವಾರ್ಡ್‌ನ ಲಕ್ಷ್ಮೀನಾರಾಯಣ (ಗುಂಡಣ್ಣ), ಮಾರತ್‌ಹಳ್ಳಿ ವಾರ್ಡ್‌ನ ರಮೇಶ್ ಹಾಗೂ ಸಿದ್ದಾಪುರ ವಾರ್ಡ್‌ನ ಮುಜಾಹಿದ್ ಪಾಷಾ ಅವರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎರಡನೇ ಬಾರಿಯೂ ಲಾಬಿ ಮುಂದುವರೆಸಿದ್ದಾರೆ.
ಮತ್ತೊಮ್ಮೆ ಸಭೆ: ಸ್ಥಾಯಿ ಸಮಿತಿ ಸ್ಥಾನಗಳ ಹಂಚಿಕೆ ಬಗ್ಗೆ ದೀಪಾವಳಿ ಹಬ್ಬಕ್ಕೂ ಮುನ್ನ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮತ್ತೊಮ್ಮೆ ಸಭೆ ಸೇರಿ ಚರ್ಚೆ ನಡೆಸಲಿದ್ದಾರೆ. ಬಳಿಕ ಪಕ್ಷದ ಆಂತರಿಕ ಸಭೆಯಲ್ಲಿ ಯಾರ್ಯಾರಿಗೆ ಈ ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ನೀಡಬೇಕೆಂದು ಅಂತಿಮಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಾಯಿ ಸಮಿತಿಗಳ ಚುನಾವಣೆ ಪೂರ್ವ ಸಿದ್ಧತೆ ಸಂಬಂಧ ಅ.16ಕ್ಕೆ ಪ್ರಾದೇಶಿಕ ಚುನಾವಣೆ ಆಯುಕ್ತೆ ಜಯಂತಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಅವರು ಬಿಬಿಎಂಪಿ ಆಯುಕ್ತರು, ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.