ತ್ರಿರಾಜ್ಯದಲ್ಲಿ ಅಮಿತ್‌ ಶಾ, ರಾಹುಲ್‌ ಯುವಕಹಳೆ!

By Web DeskFirst Published Oct 23, 2018, 10:53 AM IST
Highlights

ಬಿಜೆಪಿ ಆಂತರಿಕ ಸರ್ವೇಗಳೇ ಹೇಳುತ್ತಿರುವ ಪ್ರಕಾರ ರಾಜಸ್ಥಾನ ಬಹುತೇಕ ಕೈ ಬಿಟ್ಟು ಹೋಗುವ ಹಂತದಲ್ಲಿದೆ. ಗುಜರಾತ್‌ ರೀತಿಯಲ್ಲಿ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತುರುಸಿನ ಪೈಪೋಟಿ ಕಾಣಲಿದೆ. ಛತ್ತೀಸ್‌ಗಢದಲ್ಲಿ ಅಜಿತ್‌ ಜೋಗಿ ಹಾಗೂ ಬಿಎಸ್‌ಪಿ ಕಿಂಗ್‌ ಮೇಕರ್‌ ಆಗಿ ಹೊರ ಹೊಮ್ಮುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ ಜೋಗಿ ಕಾಂಗ್ರೆಸ್‌ ಜೊತೆ ಹೋಗುವ ಸಾಧ್ಯತೆಯೇ ಹೆಚ್ಚು.

ನವದೆಹಲಿ(ಅ.23): 2014ರ ಲೋಕಸಭೆಯ ನಂತರ ಒಂದೊಂದೇ ರಾಜ್ಯಗಳನ್ನು ಗೆಲ್ಲುತ್ತಾ ಬಂದ ಮೋದಿ ಮತ್ತು ಅಮಿತ್‌ ಶಾಗೆ ಮುಂದಿನ ವರ್ಷದ ಕುರುಕ್ಷೇತ್ರದ ಮೊದಲು ನಡೆಯುತ್ತಿರುವ ಹಿಂದಿ ಭಾಷಿಕ ಪ್ರದೇಶದ 3 ರಾಜ್ಯಗಳನ್ನು ಸೋತರೆ ಎಂಬ ಭಯ ಶುರು ಆಗಿದೆ. ಇದಕ್ಕಾಗಿ ಸ್ವತಃ ಅಮಿತ್‌ ಶಾ ಮೂರು ರಾಜ್ಯಗಳ ಚುನಾವಣಾ ಪ್ರಬಂಧನಕ್ಕೆ ಇಳಿದಿದ್ದಾರೆ. ಮೂರು ರಾಜ್ಯಗಳ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಗುಜರಾತ್‌, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ದಿಲ್ಲಿಯಿಂದ ಚುನಾವಣಾ ನಿರ್ವಹಣೆಗಾಗಿ ನಾಯಕರನ್ನು ಕಳಿಸಿರುವ ಶಾ, ಇದರ ಹೊರತಾಗಿ ಬಿಲಿಯನ್‌ ಮೈಂಡ್ಸ್‌ ಎಂಬ ಖಾಸಗಿ ಸಂಸ್ಥೆಯ ನೆರವನ್ನು ಕೂಡ ಪಡೆಯುತ್ತಿದ್ದಾರೆ.

ಬಿಜೆಪಿ ಆಂತರಿಕ ಸಮೀಕ್ಷೆಗಳೇ ಹೇಳುತ್ತಿರುವ ಪ್ರಕಾರ ರಾಜಸ್ಥಾನ ಬಹುತೇಕ ಕೈಬಿಟ್ಟು ಹೋಗುವ ಹಂತದಲ್ಲಿದ್ದು, ಗುಜರಾತ್‌ ರೀತಿಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ತುರುಸಿನ ಪೈಪೋಟಿ ಕಾಣಲಿದೆ. ಛತ್ತೀಸ್‌ಗಢದಲ್ಲಿ ಅಜಿತ್‌ ಜೋಗಿ ಹಾಗೂ ಬಿಎಸ್‌ಪಿ ಕಿಂಗ್‌ ಮೇಕರ್‌ ಆಗಿ ಹೊರ ಹೊಮ್ಮುವ ಸಾಧ್ಯತೆಗಳಿದ್ದು, ಹಾಗೇನಾದರೂ ಆದರೆ ಜೋಗಿ ಕಾಂಗ್ರೆಸ್‌ ಜೊತೆ ಹೋಗುವ ಸಾಧ್ಯತೆಯೇ ಹೆಚ್ಚು. ಇಂಥ ಫಲಿತಾಂಶ ಬರುವುದನ್ನು ತಪ್ಪಿಸಲು ಹಗಲು ರಾತ್ರಿ ಒಂದು ಮಾಡಿ ಓಡಾಡುತ್ತಿರುವ ಶಾಗೆ ಮೂರು ರಾಜ್ಯಗಳ ಟಿಕೆಟ್‌ ವಿಷಯದಲ್ಲಿ ಮುಖ್ಯಮಂತ್ರಿಗಳ ಹಟವೇ ತಲೆನೋವು ತಂದಿದೆಯಂತೆ. ಗೆಲ್ಲಬೇಕಾದರೆ ಬೆಂಬಲಿಗರಿಗೆ ಟಿಕೆಟ್‌ ಕೊಡಬೇಕು ಎನ್ನುವ ಹಟ ಬಿಡಿ ಎಂದು ಶಾ ಹೇಳಿದ್ದು, ಮೂರು ಕಡೆ ಶೇಕಡ 35ರಷ್ಟುಹಾಲಿ ಶಾಸಕರು ಟಿಕೆಟ್‌ ಕಳೆದುಕೊಳ್ಳಲಿದ್ದಾರೆ.

ಯುವ ಮುಖಗಳೇ ಸಿಎಂ?
ರಾಜಸ್ಥಾನದಲ್ಲಿ ಕಾಂಗ್ರೆಸ್‌ ಗೆದ್ದರೆ ಕಾರ್ಯಕರ್ತರಲ್ಲಿ ಅಶೋಕ್‌ ಗೆಹ್ಲೋಟ್‌ ಬಗ್ಗೆ ಒಲವಿದ್ದರೂ ಕೂಡ ರಾಹುಲ್ ಗಾಂಧಿಗೆ ಸಚಿನ್‌ ಪೈಲಟ್‌ರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಮನಸ್ಸಿದೆಯಂತೆ. ಇನ್ನು ಮಧ್ಯಪ್ರದೇಶದಲ್ಲಿ ಕೂಡ ಸಭೆಯೊಂದರಲ್ಲಿ ಶಾಸಕ ಒಬ್ಬ ಮುಂದಿನ ಮುಖ್ಯಮಂತ್ರಿ ಜ್ಯೋತಿರಾದಿತ್ಯ ಸಿಂಧಿಯಾ ಎಂದಾಗ ರಾಹುಲ್ ಮುಗುಳ್ನಗೆ ತೋರಿಸಿದರಂತೆ. ಇದನ್ನು ಸಮ್ಮತಿ ಎಂದೇ ಅನೇಕರು ಅರ್ಥ ಮಾಡಿಕೊಂಡಿದ್ದು, ಆದರೆ ಪಕ್ಕದಲ್ಲಿ ಕುಳಿತುಕೊಂಡಿದ್ದ ಕಮಲ್‌ನಾಥ ಮಾತ್ರ ಕಿಸೆಯಿಂದ ಮಾತ್ರೆ ತೆಗೆದು ನುಂಗಿ, ಮೂಗಿನಿಂದ ಇನ್ಹೇಲರ್‌ ಎಳೆದುಕೊಂಡರಂತೆ. ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ಗೆ ಗ್ರಾಮೀಣ ಭಾಗದಲ್ಲಿ ಒಳ್ಳೆಯ ಹಿಡಿತವಿದೆ. 2009ರಲ್ಲಿ ದಿಲ್ಲಿ ನಾಯಕರು, ಸಿ.ಪಿ.ಜೋಶಿ ಅವರನ್ನು ಪರ್ಯಾಯ ಎಂದು ಬಿಂಬಿಸಿದಾಗ ಜೋಶಿ ಸೇರಿದಂತೆ ತನ್ನ ಎಲ್ಲಾ ವಿರೋಧಿ ಬಣ ಚುನಾವಣೆಯಲ್ಲಿ ಸೋಲುವಂತೆ ಗೆಹ್ಲೋಟ್‌ ನೋಡಿಕೊಂಡಿದ್ದರು.

ಇನ್ನು ಮಧ್ಯಪ್ರದೇಶದಲ್ಲಿ ಕಮಲ್‌ನಾಥ್‌ಗೆ ಯಾರನ್ನೂ ಗೆಲ್ಲಿಸುವ, ಸೋಲಿಸುವ ಶಕ್ತಿ ಇಲ್ಲ. ಆದರೆ ಈಗಲೂ ಮಹಾರಾಜನಂತೆ ನಡೆದುಕೊಳ್ಳುವ ಜ್ಯೋತಿರಾದಿತ್ಯ ಬಗ್ಗೆ ಅಲ್ಲಲ್ಲಿ ಗುಸುಗುಸುಗಳಿವೆ. ಅನೇಕರು ಹೇಳುವ ಪ್ರಕಾರ ರಾಹುಲ್ ಯಥಾಪ್ರಕಾರ ಒಳಜಗಳಗಳನ್ನು ಸರಿಯಾಗಿ ನಿರ್ವಹಿಸಿದರೆ ಹಿಂದಿ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಮತ್ತೆ ಚಿಗಿತುಕೊಳ್ಳಲು ಅವಕಾಶವಿದೆ.

ಅಂಬೇಡ್ಕರ್‌ರಿಂದ ಪಟೇಲ್‌ವರೆಗೆ
ನೆಹರು ಕುಟುಂಬದ ಹೊರತಾಗಿಯೂ ರಾಷ್ಟ್ರ ನಿರ್ಮಾಣದಲ್ಲಿ ಉಳಿದವರ ಪಾಲು ಇದೆ ಎನ್ನುವುದನ್ನು ಮರೆತಿದ್ದ ಕಾಂಗ್ರೆಸ್‌ ಇದನ್ನೇ ಮುಂದುಮಾಡಿ ಚುನಾವಣೆಗೆ ಬಂಡವಾಳ ಕೂಡ ಮಾಡಿಕೊಂಡಿತ್ತು. ಆದರೆ ಈಗ ಅಂಬೇಡ್ಕರ್‌, ಸುಭಾಷ್‌ ಚಂದ್ರ ಬೋಸ್‌, ಮದನ್‌ ಮೋಹನ್‌ ಮಾಳವೀಯ, ವಲ್ಲಭ ಭಾಯಿ ಪಟೇಲರನ್ನು ಪ್ರಧಾನಿ ನರೇಂದ್ರ ಮೋದಿ ಒಂದೇ ಕುಟುಂಬದ ಸಾರ್ವಭೌಮತ್ವದ ವಿರುದ್ಧದ ರೂಪಕಗಳನ್ನಾಗಿ ತೋರಿಸಿ ಚುನಾವಣೆಗೆ ಹೊರಟಿದ್ದಾರೆ. ಮಾಳವೀಯರಿಗೆ ಭಾರತ ರತ್ನ, ಅಂಬೇಡ್ಕರ್‌ ಹೆಸರಲ್ಲಿ ದಿಲ್ಲಿಯಲ್ಲಿ ಭವ್ಯ ಕಟ್ಟಡ, ಬೋಸ್‌ರ ಅಜಾದ್‌ ಹಿಂದ್‌ ಫೌಜ್‌ನ 75ನೇ ವರ್ಷಾಚರಣೆ ನಂತರ ಈಗ ಅಕ್ಟೋಬರ್‌ 31ಕ್ಕೆ ನರ್ಮದಾ ದಂಡೆಯ ಮೇಲೆ ವಲ್ಲಭ ಭಾಯಿ ಪಟೇಲರ 182 ಮೀಟರ್‌ ಎತ್ತರದ ವಿಶ್ವದ ಅತ್ಯಂತ ಉದ್ದ ಪ್ರತಿಮೆ ಮೋದಿ ಹಸ್ತದಿಂದ ಅನಾವರಣಗೊಳ್ಳಲಿದೆ. ರಾಜಕೀಯದ ದೃಷ್ಟಿಯಿಂದ ಗಮನಿಸಬೇಕಾದ ಅಂಶ ಎಂದರೆ ಇಂಥ ಯಾವುದೇ ಮಹತ್ವದ ಕಾರ್ಯಕ್ರಮಗಳನ್ನು ಮೋದಿ ಸಾಹೇಬರು ಚುನಾವಣೆಗೆ ಮೊದಲು ತುಂಬಾ ಜಾಣತನದಿಂದ ಹಮ್ಮಿಕೊಳ್ಳುವುದು.

ಅಳಿಯ ತಂದ ತಲೆ ನೋವು
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಪತ್ನಿ ಸಾಧನಾ ಸಿಂಗ್‌ ಸಹೋದರ ಸಂಜಯ್ ಸಿಂಗ್‌ ಈ ಬಾರಿ ತನಗೆ ಟಿಕೆಟ್‌ ಬೇಕೇ ಬೇಕು ಎಂದು ಬೆನ್ನು ಹತ್ತಿದ್ದು ಶಿವರಾಜ್‌ಗೆ ತಲೆನೋವಾಗಿದೆ. ಟಿಕೆಟ್‌ ಕೊಡದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಬೇರೆ ಮಾಧ್ಯಮಗಳಿಗೆ ಅಳಿಯ ಹೇಳಿಕೆ ಕೊಟ್ಟಿದ್ದಾನೆ. ಆದರೆ ಅಮಿತ್‌ ಶಾ ಮಾತ್ರ ಯಾವುದೇ ಕುಟುಂಬ ಸದಸ್ಯನಿಗೆ ಟಿಕೆಟ್‌ ಇಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ಆದರೂ, ಶಿವರಾಜ್‌ ಸಿಂಗ್‌ ಹೆಂಡತಿ ತನ್ನ ತಮ್ಮನಿಗೆ ಟಿಕೆಟ್‌ಗಾಗಿ ಗಂಡನ ಮೇಲೆ ಒತ್ತಡ ಹೇರುತ್ತಿದ್ದಾರೆ. ಮುಖ್ಯ ಮಂತ್ರಿ ಆದರೇನು, ಹೆಂಡತಿಯ ತಮ್ಮ ಅಂದರೆ ಸುಮ್ಮನೆಯೇ?

ಮೈ ಲಾರ್ಡ್‌ ನೋ ರಜೆ

ಜಸ್ಟಿಸ್‌ ರಂಜನ್‌ ಗೊಗೋಯ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಸಹ ನ್ಯಾಯಾಧೀಶರಿಗೆ ‘ಕೆಲಸದ ದಿನ ರಜೆ ತೆಗೆದುಕೊಳ್ಳಬೇಡಿ’ ಎಂದು ಹೇಳಿದ್ದಾರೆ. ‘ಕೆಲಸದ ದಿನ ಸೆಮಿನಾರ್‌ಗಳನ್ನು ಒಪ್ಪಿಕೊಳ್ಳುವುದು, ಬೇರೆ ಊರಿಗೆ ಹೋಗುವುದು ಮಾಡಬೇಡಿ. ಕೋರ್ಟ್‌ನಲ್ಲೇ ಇದ್ದು ವಿಚಾರಣೆ ನಡೆಸಿ’ ಎಂದು ಹೇಳಿದ್ದಾರೆ. ನ್ಯಾ ಗೊಗೋಯ್‌ ಸೂಚನೆ ನಂತರ ಇಬ್ಬರು ನ್ಯಾಯಮೂರ್ತಿಗಳ ವಿದೇಶ ಪ್ರವಾಸ ರದ್ದಾಗಿದೆ.

ಮಮತೆಯ ಹಾಡಿನ ವಿಷ್ಯ
ಈ ಬಾರಿ ದುರ್ಗಾ ಪೂಜಾ ಪೆಂಡಾಲ್‌ಗಳಿಗೆ ಮತ್ತು ಎಲ್ಲ ಪೊಲೀಸ್‌ ಸ್ಟೇಶನ್‌ಗಳಿಗೆ ತೃಣಮೂಲ ಕಾಂಗ್ರೆಸ್‌ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಚಿಸಿ ಸಂಗೀತ ಸಂಯೋಜನೆ ಮಾಡಿರುವ ದೇವಿ ಗೀತೆಗಳನ್ನು ಕಳಿಸಿಕೊಡಲಾಗಿದೆ. ಇವನ್ನೇ ಹಾಕಬೇಕು ಎಂದು ಕಟ್ಟಪ್ಪಣೆ ಬೇರೆ ಮಾಡಲಾಗಿದೆ. ಸ್ಥಳೀಯ ಪೊಲೀಸರು ಬಂದು ನಿಂತಿದ್ದರಿಂದ ದುರ್ಗಾ ಪೆಂಡಾಲ್‌ಗಳಲ್ಲಿ ಬಹುತೇಕ ಕಡೆ ಮಮತಾ ಹಾಡುಗಳೇ ಕೇಳಿ ಬರುತ್ತಿದ್ದವಂತೆ. ಕಳೆದ ವರ್ಷ ಮೊಹರಂಗಾಗಿ ದುರ್ಗಾ ವಿಸರ್ಜನೆ ಒಂದು ದಿನ ಮುಂದೂಡಿ ಎಂದು ಹೇಳಿದ್ದ ಮಮತಾ, ಈ ಬಾರಿ ಮಾತ್ರ ತಾನೇ ದಿನವೂ ಸಂಜೆ 10 ಪೆಂಡಾಲ… ಸುತ್ತಾಡಿ ಬಂದಿದ್ದಾರೆ. ಬೆಳೆಯುತ್ತಿರುವ ಬಿಜೆಪಿಯಿಂದ ಮಮತಾ ಚಿಂತಿತರಾಗಿದ್ದಾರೆ ಎನಿಸುತ್ತದೆ.

ಪ್ರಧಾನಿಗಳಿಗಾಗಿ ಮ್ಯೂಸಿಯಂ
ದೇಶದ ಮೊದಲ ಪ್ರಧಾನಿ ಪಂಡಿತ್‌ ನೆಹರು ವಾಸಿಸುತ್ತಿದ್ದ ನವದೆಹಲಿಯ ತೀನ್‌ಮೂರ್ತಿ ಭವನವು ನೆಹರು ಸ್ಮಾರಕ ಎನಿಸಿಕೊಂಡಿದೆ. ಆದರೆ, ಮೋದಿ ಸರ್ಕಾರ ಅದೇ ಪರಿಸರದಲ್ಲಿ ಪ್ರಧಾನಿಗಳ ಮ್ಯೂಸಿಯಂ ಆರಂಭಿಸಲು ಭೂಮಿ ಪೂಜೆ ಮಾಡಿದ್ದು ಲಾಲ… ಬಹದ್ದೂರ್‌ ಶಾಸ್ತ್ರಿ ಅವರಿಂದ ಹಿಡಿದು ಮೋದಿವರೆಗಿನ ಪ್ರಧಾನಿಗಳ ವೈಯಕ್ತಿಕ ಬಳಕೆಯ ವಸ್ತುಗಳನ್ನು ಇಲ್ಲಿ ಇಡಲಾಗುತ್ತದೆ. ಇಲ್ಲಿಯವರೆಗೆ ಪಂಡಿತ್‌ ನೆಹರು, ಇಂದಿರಾ ಗಾಂಧಿ ಮತ್ತು ಶಾಸ್ತ್ರೀಜಿ ಅವರ ಮನೆಗಳು ಮ್ಯೂಸಿಯಂ ಆಗಿ ಪರಿವರ್ತಿತವಾಗಿವೆ.

ಸಿಬಿಐ ನೇಮಕದ ಚಿಂತೆ
ಈಗಾಗಲೇ ಮೋದಿ ಸರ್ಕಾರವೇ ನೇಮಿಸಿರುವ ಸಿಬಿಐ ಮುಖ್ಯಸ್ಥ ಅಲೋಕ್‌ ವರ್ಮಾ ಮತ್ತು ಹೆಚ್ಚುವರಿ ನಿರ್ದೇಶಕ ರಾಕೇಶ್‌ ಅಸ್ಥಾನಾ ನಡುವೆ ಮಹಾಯುದ್ಧವೇ ನಡೆಯುತ್ತಿದೆ. ಆದರೆ ಜನವರಿಯಲ್ಲಿ ಅಲೋಕ್‌ ವರ್ಮಾ ನಿವೃತ್ತರಾಗುತ್ತಾರೆ. ಸಿಬಿಐ ನೇಮಕಾತಿ ಸಮಿತಿಯಲ್ಲಿ ಪ್ರಧಾನಿ ವಿಪಕ್ಷ ನಾಯಕರು ಮತ್ತು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಸದಸ್ಯರು. ಖರ್ಗೆ ಅಧಿಕೃತ ವಿಪಕ್ಷ ನಾಯಕರಲ್ಲದ ಕಾರಣ ವೋಟಿಂಗ್‌ ಪರ್ವ ಇರುವುದಿಲ್ಲ. ಆದರೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಒಪ್ಪದೇ ಮೋದಿ ಸರ್ಕಾರಕ್ಕೆ ಹೊಸ ಸಿಬಿಐ ಮುಖ್ಯಸ್ಥರನ್ನು ನೇಮಿಸುವುದು ಸಾಧ್ಯವಿಲ್ಲ. ಆದರೆ ನ್ಯಾ

ರಂಜನ್‌ ಗೊಗೋಯ್‌, ಸರ್ಕಾರ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುವವರಲ್ಲ. ಇದು ಮುಂದೆ ಹೊಸ ತಿಕ್ಕಾಟಕ್ಕೂ ಕಾರಣ ಆಗಬಹುದೇನೋ. ಯಾವುದೇ ಸರ್ಕಾರಕ್ಕೆ ಸಿಬಿಐ ಮುಖ್ಯಸ್ಥರು ಮತ್ತು ಆದಾಯ ತೆರಿಗೆ ಮುಖ್ಯಸ್ಥರು ಕೈಯಲ್ಲಿ ಇಲ್ಲದೇ ಸರ್ಕಾರ ನಡೆಸುವುದು ಕಷ್ಟಬಿಡಿ.

ಆರ್‌ಎಸ್‌ಎಸ್‌ ಮೇಕ್‌ ಓವರ್‌
ಮೊದಲಿಗೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರನ್ನು ನಾಗಪುರಕ್ಕೆ ಸಂಘ ಶಿಕ್ಷಾ ವರ್ಗಕ್ಕೆ ಕರೆದು ಅಚ್ಚರಿ ಮೂಡಿಸಿದ್ದ ಆರ್‌ಎಸ್‌ಎಸ್‌, ಈಗ ನಾಗಪುರದ ವಾರ್ಷಿಕ ವಿಜಯ ದಶಮಿ ಕಾರ್ಯಕ್ರಮಕ್ಕೆ ನೊಬೆಲ್ ಪ್ರಶಸ್ತಿ ವಿಜೇತ ಕೈಲಾರ್ಶ ಸತ್ಯಾರ್ಥಿ ಅವರನ್ನು ಕರೆಸಿತ್ತು. ತನ್ನ ಸಿದ್ಧಾಂತವನ್ನು ಒಪ್ಪದವರ ಜೊತೆಗೆ ಸಂವಾದ ಸಾಧಿಸಿ ಅವರನ್ನು ಹತ್ತಿರ ಸೆಳೆದುಕೊಳ್ಳುವ ಪ್ರಯತ್ನ ದಲ್ಲಿ ಆರ್‌ಎಸ್‌ಎಸ್‌ ಇರುವಂತಿದೆ. ಎಡ ಅಲ್ಲದ ಆದರೆ ಆರ್‌ಎಸ್‌ಎಸ್‌ ವಿರೋಧಿಸುವ ಕೆಲ ಹೆಸರುಗಳನ್ನು ಆರ್‌ಎಸ್‌ಎಸ್‌ ಪಟ್ಟಿಮಾಡಿದೆ. ಅವರನ್ನು ಸ್ವತಃ ಸರಸಂಘ ಚಾಲಕ ಮೋಹನ್‌ ಭಾಗವತ್‌ ಅವರೇ ಭೇಟಿ ಮಾಡಿ ಸಂಘ ಕಾರ್ಯಕ್ರಮಗಳಿಗೆ ಬರುವಂತೆ ಮನ ಒಲಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸಂವಾದ ನಡೆಯುತ್ತಿರಲೇ ಬೇಕು ಬಿಡಿ.

ಪ್ರಶಾಂತ್ ನಾತು

click me!