ಜಿ.ಟಿ. ದೇವೇಗೌಡಗೆ ಇನ್ನೂ ಇಲ್ಲ ಹೊಸ ಖಾತೆ ಭಾಗ್ಯ

First Published Jun 20, 2018, 7:42 AM IST
Highlights

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿ ಬೀಗುತ್ತಿದ್ದ ಜಿ.ಟಿ.ದೇವೇಗೌಡ ಅವರು ಮಂತ್ರಿಯಾದರೂ ಅದರ ಅಧಿಕಾರ ಅನುಭವಿಸುವ ಸಂದರ್ಭ ಮಾತ್ರ ಇನ್ನೂ ಬಂದಿಲ್ಲ.
 

ಬೆಂಗಳೂರು (ಜೂ. 20):  ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿ ಬೀಗುತ್ತಿದ್ದ ಜಿ.ಟಿ.ದೇವೇಗೌಡ ಅವರು ಮಂತ್ರಿಯಾದರೂ ಅದರ ಅಧಿಕಾರ ಅನುಭವಿಸುವ ಸಂದರ್ಭ ಮಾತ್ರ ಇನ್ನೂ ಬಂದಿಲ್ಲ.

ಕಳೆದ ಎರಡು ವಾರಗಳಿಂದ ಸಚಿವ ಸ್ಥಾನ ಇದ್ದರೂ ಖಾತೆರಹಿತ ಮಂತ್ರಿಯಂತೆಯೇ ಅವರು ನಡೆದುಕೊಳ್ಳುತ್ತಿದ್ದಾರೆ. ಕೊಟ್ಟಿರುವ ಖಾತೆ ಬೇಡ ಎಂಬ ತೀರ್ಮಾನಕ್ಕೆ ಬಂದಿರುವ ಅವರಿಗೆ ಬೇರೊಂದು ಖಾತೆ ಮಾತ್ರ ಸಿಕ್ಕಿಲ್ಲ.

ನೂತನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಅವರಿಗೆ ಇಷ್ಟವಾದ ಖಾತೆ ಸಿಗಲಿಲ್ಲ. ಸಿಕ್ಕಿದ್ದ ಉನ್ನತ ಶಿಕ್ಷಣ ಖಾತೆ ಬೇಡ ಎಂದು ನಿರಾಕರಿಸಿದರು. ಅದರ ಬದಲಾಗಿ ಸಹಕಾರ ಖಾತೆ ಕೊಡಿ ಎಂಬ ಬೇಡಿಕೆಯನ್ನೂ ಮುಖ್ಯಮಂತ್ರಿಗಳ ಬಳಿ ಇಟ್ಟರು. ಆದರೆ, ಸಹಕಾರ ಖಾತೆ ಹೊಂದಿದ್ದ ಬಂಡೆಪ್ಪ ಕಾಶೆಂಪೂರ್‌ ಅವರು ಒಪ್ಪಲಿಲ್ಲ. ಹೋಗಲಿ ಅಬಕಾರಿ ಖಾತೆ ಇಟ್ಟುಕೊಳ್ಳಿ, ಅದರೊಂದಿಗೆ ಕೃಷಿ ಉತ್ಪನ್ನ ಮಾರುಕಟ್ಟೆಖಾತೆಯನ್ನೂ ನೀಡುತ್ತೇವೆ ಎಂದು ಖುದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಭರವಸೆ ನೀಡಿದರು. ಮನಸ್ಸಿಲ್ಲದಿದ್ದರೂ ಆಯಿತು ಎಂದು ಹೇಳಿ ವಾರ ಕಳೆದರೂ ಈವರೆಗೆ ಈಡೇರಿಲ್ಲ.

ಇಲಾಖೆಯ ಅಧಿಕಾರಿಗಳಿಗೂ ಗೊಂದಲ ಉಂಟಾಗಿದೆ. ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿಗಳ ಬಳಿ ಹೋದರೂ ಕೆಳಹಂತದ ಅಧಿಕಾರಿಗಳು ಸಂಬಂಧಪಟ್ಟಮಂತ್ರಿ ಎಂಬ ಕಾರಣದಿಂದ ಜಿ.ಟಿ.ದೇವೇಗೌಡರ ಬಳಿಯೇ ಸುಳಿಯುತ್ತಿದ್ದಾರೆ. ನಾನು ಉನ್ನತ ಶಿಕ್ಷಣ ಖಾತೆ ನಿರ್ವಹಿಸುತ್ತಿಲ್ಲ ಎಂದು ಹೇಳಿ ಸುಸ್ತಾಗಿದ್ದಾರೆ. ಗೆದ್ದು ಮಂತ್ರಿಯೇನೂ ಆದೆ. ಆದರೆ, ಸಮರ್ಪಕ ಖಾತೆ ಇಲ್ಲದೆ ಮಂತ್ರಿ ಸ್ಥಾನದ ಅಧಿಕಾರವನ್ನೂ ಅನುಭವಿಸುವುದಕ್ಕೆ ಆಗುತ್ತಿಲ್ಲ. ಕೆಲಸವನ್ನೂ ಮಾಡಲು ಆಗುತ್ತಿಲ್ಲ ಎಂದು ತಮ್ಮ ಆಪ್ತರ ಬಳಿ ಬೇಸರದಿಂದ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

click me!