ಸ್ಪೀಕರ್ ಅನರ್ಹತೆ ತೀರ್ಪಿನಿಂದ ಹೊಸ ವಿವಾದ

By Web DeskFirst Published Jul 26, 2019, 8:58 AM IST
Highlights

ಅತೃಪ್ತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರಳಿದವರಲ್ಲಿ ಮೂವರಿಗೆ ಅನರ್ಹತೆ ಶಿಕ್ಷೆ ನೀಡಲಾಗಿದೆ. ಈ ತೀರ್ಪು ಇದೀಗ ಹೊಸ ವಿವಾದ ಹುಟ್ಟು ಹಾಕಿದೆ. 

ಬೆಂಗಳೂರು [ಜು.26]:  ವಿಧಾನಸಭೆ ಅಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರು ಗುರುವಾರ ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ನೀಡಿದ ತೀರ್ಪು ಹೊಸದೊಂದು ವಿವಾದ ಹುಟ್ಟುಹಾಕಿದೆ.

ಏಕೆಂದರೆ, ಕಾಂಗ್ರೆಸ್‌ನ ಅತೃಪ್ತ ಶಾಸಕರಾದ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ ಹಾಗೂ ಪಕ್ಷೇತರ (ಕೆಪಿಜೆಪಿ) ಶಂಕರ್‌ ಅವರ ಅನರ್ಹತೆಯು 15ನೇ ವಿಧಾನಸಭೆ ಅಸ್ತಿತ್ವದಲ್ಲಿ ಇರುವವರೆಗೂ (ಈ ವಿಧಾನಸಭೆಯು ಪೂರ್ಣಾವಧಿಗೆ ಇದ್ದಲ್ಲಿ ಮೇ 2023ರವರೆಗೂ ಅಸ್ತಿತ್ವದಲ್ಲಿರುತ್ತದೆ) ಅನ್ವಯವಾಗುತ್ತದೆ. ಅಂದರೆ ಅನರ್ಹಗೊಂಡ ಶಾಸಕರು ಈ ವಿಧಾನಸಭೆ ಅಸ್ತಿತ್ವದಲ್ಲಿ ಇರುವವರೆಗೂ ಮರು ಆಯ್ಕೆಯಾಗುವಂತಿಲ್ಲ ಮತ್ತು ಯಾವುದೇ ಸಂವಿಧಾನಿಕ ಹುದ್ದೆ ಅಲಂಕರಿಸುವಂತಿಲ್ಲ ಎಂದು ರಮೇಶ್‌ ಕುಮಾರ್‌ ಸ್ಪಷ್ಟವಾಗಿ ಹೇಳಿದ್ದಾರೆ.

ಅಂದರೆ, ಈ ತೀರ್ಪು 15ನೇ ವಿಧಾನಸಭೆ ಅಸ್ತಿತ್ವದಲ್ಲಿರುವವರೆಗೆ ನಡೆಯುವ ಯಾವುದೇ ಚುನಾವಣೆಯಲ್ಲಿ, ಅದು ಮರು ಚುನಾವಣೆಯಿರಲಿ ಅಥವಾ ಸಾರ್ವತ್ರಿಕ ಚುನಾವಣೆಯಾಗಿರಲಿ, ಸ್ಪರ್ಧಿಸದಂತೆ ಅನರ್ಹರನ್ನು ಪ್ರತಿಬಂಧಿಸುತ್ತದೆ. ಜತೆಗೆ, ಈ ಅವಧಿಯಲ್ಲಿ ಅವರು ಸಚಿವ ಸ್ಥಾನವೂ ಸೇರಿದಂತೆ ಯಾವುದೇ ಸಂವಿಧಾನಿಕ ಹುದ್ದೆ ಅಲಂಕರಿಸದಂತೆಯೂ ನಿರ್ಬಂಧಿಸುತ್ತದೆ.

ಆದರೆ, ಈ ತೀರ್ಪು ವಿವಾದಾತ್ಮಕವಾಗಿದೆ ಎಂಬುದು ಅತೃಪ್ತ ಶಾಸಕರ ವಾದ. ಏಕೆಂದರೆ, ಈ ತೀರ್ಪು ಸಂವಿಧಾನದ ಪರಿಚ್ಛೇದ 191 ಮತ್ತು ಪರಿಚ್ಛೇದ 361 ‘ಬಿ’ಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಸಂವಿಧಾನದ ಪರಿಚ್ಛೇದ 191ರ ಉಪ ವಿಧಿ 2ರ ಪ್ರಕಾರ ಯಾವುದೇ ವ್ಯಕ್ತಿ ಸಂವಿಧಾನದ 10ನೇ ಶೆಡ್ಯೂಲ್‌ ಅಡಿಯಲ್ಲಿ ಅನರ್ಹತೆಗೆ ಒಳಗಾದರೆ ಆತ ವಿಧಾನಸಭೆಯ ಶಾಸಕ ಸ್ಥಾನದಿಂದ ಅನರ್ಹನಾಗುತ್ತಾನೆ ಎಂದು ಹೇಳುತ್ತದೆ. ಅಂದರೆ, ವ್ಯಕ್ತಿಯು ಆ ವಿಧಾನಸಭೆಯ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವನೇ ಹೊರತು ಆತನ ಮರು ಆಯ್ಕೆಗೆ ಅನರ್ಹತೆ ಅನ್ವಯವಾಗುವುದಿಲ್ಲ.

ಅದೇ ರೀತಿ ಸಂವಿಧಾನದ ಪರಿಚ್ಛೇದ ಬಿ ಪ್ರಕಾರ ಶೆಡ್ಯೂಲ್‌ 10ರ ಅಡಿಯಲ್ಲಿ ಅನರ್ಹಗೊಂಡ ವ್ಯಕ್ತಿ ತಾನು ಮರು ಆಯ್ಕೆಯಾಗುವವರೆಗೂ ಯಾವುದೇ ಸಂವಿಧಾನಬದ್ಧ ಹುದ್ದೆಯನ್ನು ಅಲಂಕರಿಸುವಂತಿಲ್ಲ. ಅಂದರೆ, ಆತ ಮರು ಆಯ್ಕೆಯಾದ ನಂತರ ಸಂವಿಧಾನಿಕ ಹುದ್ದೆ ಅಲಂಕರಿಸಲು ಸಂವಿಧಾನದಲ್ಲಿ ಅವಕಾಶವಿದೆ ಎಂದು ಅವರು ವಾದಿಸುತ್ತಾರೆ.

15ನೇ ವಿಧಾನಸಭೆ ಅಸ್ತಿತ್ವದಲ್ಲಿ ಇರುವವರೆಗೆ ನಡೆಯುವ ಯಾವುದೇ ಚುನಾವಣೆಯಲ್ಲಿ ಅನರ್ಹಗೊಂಡವರು ಸ್ಪರ್ಧಿಸುವಂತಿಲ್ಲ. ಇದೇ ಅವಧಿಯಲ್ಲಿ ಸಚಿವ ಸ್ಥಾನ ಸೇರಿ ಯಾವುದೇ ಸಾಂವಿಧಾನಿಕ ಹುದ್ದೆ ಅಲಂಕರಿಸುವಂತಿಲ್ಲ.

ಸಂವಿಧಾನದ ಪರಿಚ್ಛೇದ 191, 361 ‘ಬಿ’ಯನ್ನು ತೀರ್ಪು ಉಲ್ಲಂಘಿಸುತ್ತದೆ. 10ನೇ ಶೆಡ್ಯೂಲ್‌ ಅಡಿ ಅನರ್ಹ ಆದರೆ, ಆತ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವನೇ ಹೊರತು ಮರು ಆಯ್ಕೆಗೆ ಅನರ್ಹತೆ ಅನ್ವಯವಾಗುವುದಿಲ್ಲ.

click me!