ಕಲ್ಲಡ್ಕ ಪ್ರಕರಣ: ಪರಿಸ್ಥಿತಿ ಹತೋಟಿಗೆ ತರಲು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ವಿಶೇಷ ನಿಯೋಜನೆ

By Suvarna Web deskFirst Published Jun 21, 2017, 10:19 PM IST
Highlights

ಕಲ್ಲಡ್ಕ ಘಟನೆ ಬಳಿಕ ದಕ್ಷಿಣ ಕನ್ನಡದಲ್ಲಿ ತಲೆದೋರಿರುವ ಉದ್ವಿಗ್ನ ಪರಿಸ್ಥಿತಿ ಹತೋಟಿಗೆ ತರಲು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರನ್ನು ಕೆಲಕಾಲದವರೆಗೆ ಕರೆಸಿಕೊಳ್ಳಲಾಗಿದೆ. ಹಾಲಿ ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ ಅವರನ್ನು ಬೆಂಗಳೂರಿಗೆ ಎತ್ತಂಗಡಿ ಮಾಡಲಾಗಿದ್ದು, ಇವರ ಸ್ಥಾನಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ನೇಮಿಸಲಾಗಿದೆ. ಅಣ್ಣಾಮಲೈ ಅವರು ಬುಧವಾರವೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಮಂಗಳೂರು (ಜೂ.21): ಕಲ್ಲಡ್ಕ ಘಟನೆ ಬಳಿಕ ದಕ್ಷಿಣ ಕನ್ನಡದಲ್ಲಿ ತಲೆದೋರಿರುವ ಉದ್ವಿಗ್ನ ಪರಿಸ್ಥಿತಿ ಹತೋಟಿಗೆ ತರಲು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರನ್ನು ಕೆಲಕಾಲದವರೆಗೆ ಕರೆಸಿಕೊಳ್ಳಲಾಗಿದೆ. ಹಾಲಿ ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ ಅವರನ್ನು ಬೆಂಗಳೂರಿಗೆ ಎತ್ತಂಗಡಿ ಮಾಡಲಾಗಿದ್ದು, ಇವರ ಸ್ಥಾನಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ನೇಮಿಸಲಾಗಿದೆ. ಅಣ್ಣಾಮಲೈ ಅವರು ಬುಧವಾರವೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
 
ಬೆಂಜನಪದವಿನಲ್ಲಿ ನಡೆದ ಕೊಲೆ ಘಟನೆ ಬಳಿಕ ಉದ್ವಿಗ್ನ ಸ್ಥಿತಿ ನಿಭಾಯಿಸಲು ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ ಜೊತೆಗೆ ಅಣ್ಣಾಮಲೈ ನೆರವು ನೀಡುತ್ತಿದ್ದಾರೆ. ಮೃತ ಅಶ್ರಫ್‌ನ ಶವವನ್ನು ಮರಣೋತ್ತರ ಪರೀಕ್ಷೆಗೆ ನಗರದ ಖಾಸಗಿ ಆಸ್ಪತ್ರೆಗೆ ಕರೆತಂದಾಗ ಅಣ್ಣಾಮಲೈ ಅವರೇ ಬಂದೋಬಸ್ತ್ ಕೈಗೊಂಡಿದ್ದರು. ನಂತರ ಸೂಕ್ಷ್ಮಪ್ರದೇಶವಾದ ಫರಂಗಿಪೇಟೆಯಲ್ಲಿ ಪೊಲೀಸ್ ತಂಡದೊಂದಿಗೆ ಅಣ್ಣಾಮಲೈ ಮೊಕ್ಕಾಂ ಹೂಡಿದ್ದರು. ಕಲ್ಲಡ್ಕ ಘಟನೆಯನ್ನು ನಿಭಾಯಿಸುವಲ್ಲಿ ಎಸ್ಪಿ ಭೂಷಣ್ ವಿಫಲವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಆರೆಸ್ಸೆಸ್ ಮುಖಂಡ ಡಾ.ಪ್ರಭಾಕರ ಭಟ್ ಮೇಲೆ ಕೇಸು ದಾಖಲಿಸಿ ಬಂಧಿಸುವಂತೆ ರೈ ಎಸ್ಪಿಗೆ ತಾಕೀತು ಮಾಡಿದ್ದರು. ಈ ವಿಚಾರ ಸಾಕಷ್ಟು ವಿವಾದಕ್ಕೆ ಎಡೆಮಾಡಿತ್ತಲ್ಲದೆ, ವಿಧಾನಸಭಾ ಅಧಿವೇಶನದಲ್ಲೂ ಚರ್ಚೆಗೆ ಕಾರಣವಾಗಿತ್ತು. ಕಲ್ಲಡ್ಕದಲ್ಲಿ 2 ನೇ ಸಲ ಹಲ್ಲೆ ಘಟನೆ ಸಂಭವಿಸಿದಾಗ, ಬೊಸರೆ ಅವರನ್ನು ರಜೆ ಮೇಲೆ ಕಳುಹಿಸಿ ಚಿಕ್ಕಮಗಳೂರಿನಿಂದ ಅಣ್ಣಾಮಲೈಯನ್ನು ಕರೆಸಿಕೊಳ್ಳಲು ಉಸ್ತುವಾರಿ ಸಚಿವರು ಪೊಲೀಸ್ ಉನ್ನತಾಧಿಕಾರಿಗಳಿಗೆ ಸೂಚಿಸಿದ್ದರು. ಅಣ್ಣಾಮಲೈ ಸೋಮವಾರವೇ ಜಿಲ್ಲೆಗೆ ಆಗಮಿಸಬೇಕಿತ್ತು. ಆದರೆ ಚಿಕ್ಕಮಗಳೂರಿನ ಆಲ್ದೂರಿನಲ್ಲಿ ಪ್ರಕರಣವೊಂದು ಸಂಭವಿಸಿದ ಕಾರಣ ಎರಡು ದಿನ ವಿಳಂಬವಾಗಿ ಎಸ್ಪಿ ಅಣ್ಣಾಮಲೈ ಬುಧವಾರ ಜಿಲ್ಲೆಗೆ ಆಗಮಿಸಿದ್ದಾರೆ.
 
ದ.ಕ. ನೂತನ ಎಸ್ಪಿ ಸುಧೀರ್: ದ.ಕ ಜಿಲ್ಲೆಯ ಎಸ್ಪಿ ಭೂಷಣ್ ಗುಲಾಬ್ ಬೊರಸೆ ಅವರನ್ನು ಬೆಂಗಳೂರಿನ ನಗರ ಪೊಲೀಸ್ ಆಡಳಿತ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಮಂಡ್ಯ ಎಸ್ಪಿ  ಸುಧೀರ್ ಕುಮಾರ್ ರೆಡ್ಡಿ ಅವರನ್ನು ದ.ಕ ಎಸ್ಪಿಯಾಗಿ ನೇಮಿಸಲಾಗಿದೆ. 2010 ರ ಐಪಿಎಸ್ ಬ್ಯಾಚ್‌ನವರಾದ ಸುಧೀರ್ ಕುಮಾರ್ ರೆಡ್ಡಿ ಚಿಕ್ಕಬಳ್ಳಾಪುರದಲ್ಲಿ ಎಸ್ಪಿಯಾಗಿದ್ದರು. 
click me!