ಎಸ್‌ಸಿ, ಎಸ್‌ಟಿ ರೈತರ ಸಾಲಮನ್ನಾಗೆ ಸರ್ಕಾರದಿಂದ ಹೊಸ ಪ್ಲಾನ್

First Published Jul 4, 2018, 8:11 AM IST
Highlights

ಎಸ್‌ಸಿ, ಎಸ್‌ಟಿ ರೈತರ ಸಾಲಮನ್ನಾಗೆ ಸರ್ಕಾರದಿಂದ ಹೊಸ ಉಪಾಯವೊಂದನ್ನು ಇದೀಗ ರೂಪಿಸಿಕೊಂಡಿದೆ. 

ಬೆಂಗಳೂರು  : ಸಮಾಜ ಕಲ್ಯಾಣ ಇಲಾಖೆಗೆ ಮೀಸಲಾದ ಹಣವನ್ನು ಮತ್ಯಾವ ಕಾರಣಗಳಿಗೂ ಬಳಸಲು ಸಾಧ್ಯವಾಗದಂತೆ ಜಾರಿಗೆ ತರಲಾಗಿರುವ ಕರ್ನಾಟಕ ಎಸ್‌ಸಿಪಿ ಹಾಗೂ ಟಿಎಸ್‌ಪಿ ಕಾಯ್ದೆಯ ಹೊರತಾಗಿಯೂ ರಾಜ್ಯದ ಮೈತ್ರಿಕೂಟದ ಸರ್ಕಾರ ಈ ಇಲಾಖೆಯು ಪಿ.ಡಿ. ಅಕೌಂಟ್‌ನಲ್ಲಿ ಹೊಂದಿರುವ ಸುಮಾರು 600 ಕೋಟಿ ರು.ಗಳನ್ನು ಬಳಸಲು ಉಪಾಯವೊಂದನ್ನು ಹುಡುಕಿಕೊಂಡಿದೆ ಎಂದು ಮೂಲಗಳು ತಿಳಿಸಿದೆ.

ಅದು- ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿರುವ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಕ್ಕೆ ಸೇರಿದ ರೈತರ ಸಾಲ ಮನ್ನಾ ಮಾಡಲು ಸಮಾಜ ಕಲ್ಯಾಣ ಇಲಾಖೆ ಹಣ ಬಳಸುವುದು!

ಸಮಾಜ ಕಲ್ಯಾಣ ಇಲಾಖೆಯು ಪಿ.ಡಿ. ಅಕೌಂಟ್‌ನಲ್ಲಿ ಹೊಂದಿರುವ ಮೊತ್ತವನ್ನು ಇಲಾಖೆಗೆ ಸಂಬಂಧಿಸಿದ ಕಾರ್ಯಗಳಿಗಲ್ಲದೆ ಬೇರಾರ‍ಯವ ಉದ್ದೇಶಕ್ಕೂ ಬಳಸುವಂತಿಲ್ಲ. ಬಳಸಿದರೂ, ಅದು ಪರಿಶಿಷ್ಟರಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕು. ಹೀಗಾಗಿ ರಾಜ್ಯ ಸರ್ಕಾರವು ವಾಣಿಜ್ಯ ಬ್ಯಾಂಕ್‌ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಹೊಂದಿರುವ ಹಾಗೂ ಸಾಲಮನ್ನಾ ಯೋಜನೆಯ ವ್ಯಾಪ್ತಿಗೆ ಬರಲಿರುವ ರೈತರ ಜಾತಿ ಮಾಹಿತಿಯನ್ನು ಪಡೆದುಕೊಳ್ಳಲು ಮುಂದಾಗಿದೆ. ಈ ರೀತಿ ರೈತರ ಜಾತಿ ಮಾಹಿತಿಯನ್ನು ಪಡೆದುಕೊಂಡು ಅದರಲ್ಲಿ ಪರಿಶಿಷ್ಟರೈತರ ಸಾಲವನ್ನು ಸಮಾಜ ಕಲ್ಯಾಣ ಇಲಾಖೆಯ ನಿಧಿಯಿಂದ ಮನ್ನಾ ಮಾಡುವ ಯೋಜನೆ ರೂಪಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

33 ಸಾವಿರ ಕೋಟಿ ರು. ಸಾಲಮನ್ನಾ?:  ಈ ಮೂಲಗಳ ಪ್ರಕಾರ ರಾಜ್ಯ ಸರ್ಕಾರ ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಸುಮಾರು 2 ಲಕ್ಷ ರು. ಮಿತಿಗೆ ಒಳಪಟ್ಟಸಾಲವನ್ನು ಮನ್ನಾ ಮಾಡಲು ಉದ್ದೇಶಿಸಿದೆ. ಪ್ರಾಥಮಿಕ ಲೆಕ್ಕಾಚಾರಗಳ ಪ್ರಕಾರ ವಾಣಿಜ್ಯ ಬ್ಯಾಂಕ್‌ನಲ್ಲಿ 2 ಲಕ್ಷ ರು. ಮಿತಿಯಲ್ಲಿರುವ ರೈತರ ಸಾಲದ ಮೊತ್ತ 30 ಸಾವಿರ ಕೋಟಿ ರು.ಗಳಾಗಿದ್ದರೆ, ಸಹಕಾರಿ ಬ್ಯಾಂಕ್‌ಗಳಲ್ಲಿ ಈ ಮೊತ್ತ 3 ಸಾವಿರ ಕೋಟಿ ರು. ಇದೆ. ಅಂದರೆ ಒಟ್ಟಾರೆ 33 ಸಾವಿರ ಕೋಟಿ ರು.ಗಳನ್ನು ಸಾಲ ಮನ್ನಾ ಮಾಡುವ ಉದ್ದೇಶ ಸರ್ಕಾರ ಹೊಂದಿದೆ ಎನ್ನಲಾಗಿದೆ.

ಈ 33 ಸಾವಿರ ಕೋಟಿ ರು.ಗಳನ್ನು ಪ್ರತಿ ವರ್ಷ 8 ಸಾವಿರ ಕೋಟಿ ರು.ಗಳಂತೆ ಸರ್ಕಾರ ನಾಲ್ಕು ವರ್ಷದಲ್ಲಿ ಬ್ಯಾಂಕ್‌ಗಳಿಗೆ ತುಂಬಿಕೊಡುವ ಭರವಸೆಯನ್ನು ನೀಡುವ ಸಾಧ್ಯತೆಯಿದೆ. ಅಂದರೆ, ಪ್ರಥಮ ವರ್ಷದ ಬಜೆಟ್‌ನಲ್ಲಿ ಸಾಲ ಮನ್ನಾಗೆ 8 ಸಾವಿರ ಕೋಟಿ ರು.ಗಳನ್ನು ಒದಗಿಸಬೇಕಾದ ಅನಿವಾರ್ಯತೆಯಿದೆ.

ಹೀಗಾಗಿ ರಾಜ್ಯ ಸರ್ಕಾರವು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದು ಸಾವಿರ ಕೋಟಿ ರು., ಸಮಾಜ ಕಲ್ಯಾಣ ಇಲಾಖೆಯಿಂದ 600 ಕೋಟಿ ರು. ಹಾಗೂ ಲೋಕೋಪಯೋಗಿ ಮತ್ತು ಆರ್‌ಡಿಪಿಆರ್‌ ಇಲಾಖೆಯಿಂದ ಬಳಕೆಯಾಗದ ಅನುದಾನವನ್ನು ಹಿಂಪಡೆದು ಅದನ್ನು ಸಾಲ ಮನ್ನಾಗೆ ಬಳಸಲು ಉದ್ದೇಶಿಸಿದೆ ಎಂದು ಮೂಲಗಳು ಹೇಳಿವೆ.

click me!