ಗೌರಿ ಲಂಕೇಶ್ ಹತ್ಯೆ: 8 ಆಯಾಮದಲ್ಲಿ ಎಸ್’ಐಟಿ ತನಿಖೆ

Published : Sep 16, 2017, 02:09 PM ISTUpdated : Apr 11, 2018, 12:49 PM IST
ಗೌರಿ ಲಂಕೇಶ್ ಹತ್ಯೆ: 8 ಆಯಾಮದಲ್ಲಿ ಎಸ್’ಐಟಿ ತನಿಖೆ

ಸಾರಾಂಶ

ಹೇಗೆ ಆಗಿರಬಹುದು? ಮನೆ ಎದುರೇ ಗುಂಡಿನ ದಾಳಿ ನಡೆದು 11 ದಿನಗಳೇ ಕಳೆದರೂ ತನಿಖಾ ತಂಡಕ್ಕೆ ಹಂತಕರ ಸುಳಿವು ಇಲ್ಲ | ಗೌರಿ ಲಂಕೇಶ್ ಹತ್ಯೆ 8 ಆಯಾಮದಲ್ಲಿ ತನಿಖೆ ಎಸ್‌ಐಟಿಯಿಂದ ಇದುವರೆಗೆ ಬರೋಬ್ಬರಿ 80ಕ್ಕೂ ಹೆಚ್ಚು ಮಂದಿಯ ವಿಚಾರಣೆ | 57 ಜನರ ಹೇಳಿಕೆ ದಾಖಲು

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹಂತಕರ ಬೆನ್ನು ಹತ್ತಿರುವ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಘಟನೆ ನಡೆದು ಹನ್ನೊಂದು ದಿನ ಕಳೆದರೂ ಗುಂಡು ಹಾರಿಸಿದವರ ಸಣ್ಣದೊಂದು ಸುಳಿವು ಕೂಡ ಸಿಗದಿರುವುದರಿಂದ ಪ್ರಕರಣ ಸವಾಲಾಗಿ ಪರಿಣಮಿಸಿದೆ.

ಈ ಕೃತ್ಯ ಭೇದಿಸಲು ಹರಸಾಹಸಪಡುತ್ತಿರುವ ಎಸ್ಐಟಿಯು ವೈಚಾರಿಕ ಭಿನ್ನಾಭಿಪ್ರಾಯ, ಕೌಟುಂಬಿಕ ಸಮಸ್ಯೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಸೇರಿದಂತೆ ಹತ್ಯೆಗೆ ಏನೇನು ಕಾರಣವಿರಬಹುದು ಎಂಬುದನ್ನು ಶಂಕಿಸಿ ಎಂಟು ಆಯಾಮದಲ್ಲಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ನೆರೆಹೊರೆಯವರು, ಕುಟುಂಬದ ಸದಸ್ಯರು, ಮಾಜಿ ನಕ್ಸಲರು ಸೇರಿದಂತೆ 80ಕ್ಕೂ ಅಧಿಕ ಜನರನ್ನು ವಿಚಾರಣೆಗೊಳಪಡಿಸಿರುವ ಅಧಿಕಾರಿಗಳು, ಒಟ್ಟು 57 ಮಂದಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಯಾವ್ಯಾವ ಆಯಾಮದ ತನಿಖೆ?

ಬಲಪಂಥೀಯ ಸಿದ್ಧಾಂತ: ಗೌರಿ ಅವರು ಉಗ್ರವಾಗಿ ಬಲಪಂಥೀಯ ಸಿದ್ಧಾಂತವನ್ನು ವಿರೋಧಿಸುತ್ತಿದ್ದರು. ಇದೇ ಕಾರಣಕ್ಕೆ ಅವರು ಹಲವರ ಕೋಪಕ್ಕೂ ತುತ್ತಾಗಿದ್ದರು. ಇದು ಹತ್ಯೆಗೂ ಕಾರಣವಾಗಿರಬಹುದೇ ಎಂಬುದು ಎಸ್‌ಐಟಿ ಅನುಮಾನವಾಗಿದೆ. ಈ ದಿಸೆಯಲ್ಲಿ ಬಲಪಂಥೀಯ ಸಂಘಟನೆಗಳ ಕೆಲವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

ಟೈಗರ್ ವಿಂಗ್ ಕೈವಾಡ?: ಹಿಂದೂ ಪರ ಒಲವು ಹೊಂದಿರುವ ಟೈಗರ್ ಸಂಘಟನೆಯು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಬಲವಾಗಿದೆ. ಪ್ರಮುಖ ಮುಸ್ಲಿಂ ಮುಖಂಡರೇ ಅದರ ಟಾರ್ಗೆಟ್. ಹಿಂದೂ ತತ್ವವನ್ನು ಪ್ರಶ್ನಿಸಿದವರ ಮೇಲೆ ಆ ಸಂಘಟನೆ ದಾಳಿ ನಡೆಸಿದ ನಿದರ್ಶನಗಳಿವೆ. ಹೀಗಾಗಿ ಎಡಪಂಥೀಯ ಧೋರಣೆ ಹೊಂದಿದ್ದ ಗೌರಿ ಅವರನ್ನು ಟೈಗರ್ ಗುರಿಯಾಗಿಸಿತ್ತೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ ಎಂದು ಗೊತ್ತಾಗಿದೆ.

ನಕ್ಸಲ್ ಕೈವಾಡ? ಪ್ರಗತಿ ಪರ ನಿಲುವು ಪ್ರತಿಪಾದಿಸುತ್ತಿದ್ದ ಗೌರಿ ಲಂಕೇಶ್ ಅವರು ನಕ್ಸಲೀಯರ ಜತೆ ಸಂಪರ್ಕ ಹೊಂದಿದ್ದರು. ನಕ್ಸಲೀಯರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಗೌರಿ ಪಾತ್ರ ವಹಿಸಿದ್ದರು. ಇದು ನಕ್ಸಲರ ಒಂದು ಬಣಕ್ಕೆ ಅಸಮಾಧಾನ ತಂದಿತ್ತು. ಇದೇ ಕೋಪವು ಅವರ ಹತ್ಯೆಗೂ ಕಾರಣವಾಗಿರಬಹುದೇ ಎಂಬುದು ಎಸ್ಐಟಿ ಶಂಕೆ. ಈ ಕಾರಣಕ್ಕೆ ಮಾಜಿ ನಕ್ಸಲರಾದ ನೂರ್ ಶ್ರೀಧರ್ ಹಾಗೂ ಸಿರಿಮನೆ ನಾಗರಾಜ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದಿದೆ.

ರಿಯಲ್ ಎಸ್ಟೇಟ್ ಲಾಬಿಗೆ ಬಲಿ? ತಮ್ಮ ಕುಟುಂಬಕ್ಕೆ ಸೇರಿದ ನೆಲಮಂಗಲದ ಫಾರ್ಮ್ ಹೌಸ್ ವಿಚಾರವಾಗಿ ಕೆಲವು ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆ ಗೌರಿಗೆ ಮನಸ್ತಾಪ ಉಂಟಾಗಿತ್ತು. ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದ ಅರುಣ್ ಕುಮಾರ್ ಜತೆ ವಿವಾದವಾಗಿತ್ತು. ಇದೇ ಕಾರಣಕ್ಕೆ ರಿಯಲ್ ಎಸ್ಟೇಟ್ ಉದ್ಯಮಿ ಅರುಣ್ ಕುಮಾರ್ ಅವರನ್ನು ಎಸ್‌ಐಟಿ ಸಮನ್ಸ್ ನೀಡಿ ವಿಚಾರಣೆ ನಡೆಸಿದೆ.

ಎಡಪಂಥೀಯರ ಮುಖವಾಣಿಯಂತಿದ್ದ ಪತ್ರಿಕೆ: ಗೌರಿ ಅವರು ತಮ್ಮ ಸಂಪಾದಕತ್ವದಲ್ಲಿ ‘ಗೌರಿ ಲಂಕೇಶ್ ಪತ್ರಿಕೆ’ ನಡೆಸುತ್ತಿದ್ದರು. ಈ ಪತ್ರಿಕೆಯಲ್ಲಿ ಬಲಪಂಥೀಯ ಹಾಗೂ ಬಿಜೆಪಿ ಮುಖಂಡರ ವಿರುದ್ಧ ಅವರು ವರದಿ ಪ್ರಕಟಿಸಿದ್ದರು. ಈ ಪತ್ರಿಕೆಯು ಎಡಪಂಥದ ಮುಖವಾಣಿ ಎಂದೇ ಬಿಂಬಿತವಾಗಿತ್ತು. ಈ ಬರಹಗಳೂ ಅವರ ಪ್ರಾಣಕ್ಕೆ ಕುತ್ತು ತಂದಿರಬಹುದೇ ಎಂಬ ಗುಮಾನಿಯಲ್ಲಿ ತನಿಖೆ ನಡೆದಿದೆ.

ಮಾನನಷ್ಟ ಮೊಕದ್ದಮೆಗಳು: ಗೌರಿ ಲಂಕೇಶ್ ಅವರ ಪತ್ರಿಕೆ ವಿರುದ್ಧ ಹಲವು ಮಾನನಷ್ಟ ಮೊಕದ್ದಮೆಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಅವರಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿತ್ತು. ಆಮೇಲೆ ಜಾಮೀನು ಪಡೆದು ಹೊರ ಬಂದ ಅವರು, ಮತ್ತೆ ಅಂಕಣ ಬರೆಯುತ್ತಿದ್ದರು. ಈ ಕೇಸ್‌ಗಳೂ ಅವರ ಕೊಲೆಗೆ ಕಾರಣವಾಗಿರಬಹುದೇ ಎಂದು ಎಸ್‌ಐಟಿ ತನಿಖೆ ನಡೆಸಿದೆ.

ಕೌಟುಂಬಿಕ ಮನಸ್ತಾಪ: ಗೌರಿ ಅವರ ಹತ್ಯೆಯಲ್ಲಿ ಅವರ ಕುಟುಂಬದ ಮೇಲೂ ಎಸ್‌ಐಟಿಯ ಅನುಮಾನದ ಕಣ್ಣು ಬಿದ್ದಿದೆ. ತಮ್ಮ ಕುಟುಂಬದ ಸದಸ್ಯರ ಜತೆ ಮನಸ್ತಾಪ ಹೊಂದಿದ್ದ ಗೌರಿ ಅವರು, ಮೊದಲಿನಿಂದಲೂ ಕುಟುಂಬದವರಿಂದ ದೂರವಾಗಿದ್ದರು. ಲಂಕೇಶ್ ಪತ್ರಿಕೆ ಒಡೆತನದ ವಿಚಾರದಲ್ಲಿ ಸೋದರ ಇಂದ್ರಜಿತ್ ಜತೆ ಮನಸ್ತಾಪವಾಗಿತ್ತು. ಆಸ್ತಿ ವಿಷಯಕ್ಕೂ ಸೋದರಿಯರಾದ ಗೌರಿ ಮತ್ತು ಕವಿತಾ ಅವರೊಂದಿಗೆ ಇಂದ್ರಜಿತ್ ಗಲಾಟೆ ಮಾಡಿದ್ದರು. ಈ ವಿವಾದ ಹಿನ್ನೆಲೆಯಲ್ಲಿ ಹಲವು ವರ್ಷಗಳ ಹಿಂದೆ ಇಂದ್ರಜಿತ್ ಅವರು ಕೋಪದಲ್ಲಿ ಗೌರಿ ಅವರ ಹಣೆಗೆ ಗನ್ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಕುಟುಂಬದ ಸದಸ್ಯರ ವಿಚಾರಣೆ ನಡೆದಿದೆ.

ಪಿಸ್ತೂಲ್‌ಗೆ ಭೀಮಾ ತೀರದ ಲಿಂಕ್?: ಗೌರಿ ಅವರ ಹತ್ಯೆಯಲ್ಲಿ 7.65 ಎಂಎಂ ಪಿಸ್ತೂಲ್ ಬಳಕೆಯಾಗಿದೆ. ಈ ಪಿಸ್ತೂಲನ್ನು ಭೀಮಾ ತೀರದ ಹಂತಕರು ಬಳಸುತ್ತಿದ್ದರು. ಹಾಗೆ ಡಾ.ಎಂ.ಎಂ. ಕಲ್ಬುರ್ಗಿ ಅವರ ಹತ್ಯೆಗೂ ಇದೇ ಪಿಸ್ತೂಲ್ ಬಳಸಲಾಗಿತ್ತು. ಹೀಗಾಗಿ ಕಲಬುರಗಿ, ವಿಜಯಪುರ ಕಡೆ ಹಂತಕರು ಪಿಸ್ತೂಲ್ ಖರೀದಿಸಿರಬಹುದೇ ಎಂದು ಪೊಲೀಸರು ಹುಡುಕಾಟ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ರಾಂಗ್‌ ಫ್ಲೈಟ್‌ ಹತ್ತಿದ್ದಾರೆ: ಸಿದ್ಧರಾಮಯ್ಯ ವಿರುದ್ಧ ಆರ್‌.ಅಶೋಕ್‌ ಗರಂ!
ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!