
ಶಿವಮೊಗ್ಗ : ‘ಸಿದ್ದರಾಮಯ್ಯ ಮಗನ ಸಾವು ದೇವರು ಕೊಟ್ಟಶಿಕ್ಷೆ’ ಎಂಬ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಬಳ್ಳಾರಿಯ ಜನಾರ್ದನ ರೆಡ್ಡಿ ಮನುಷ್ಯತ್ವ ಇಲ್ಲದ, ಕ್ರಿಮಿನಲ್ ಬ್ರೈನ್ ಇರುವ ವ್ಯಕ್ತಿ. ಆತ ಕ್ಷಮೆಗೂ ಅರ್ಹನಲ್ಲ’ ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷಮಿಸುವುದು ಮನುಷ್ಯನ ದೊಡ್ಡ ಗುಣ. ಆದರೆ, ಆತ ಕ್ಷಮೆಗೂ ಅರ್ಹನಲ್ಲ. ಸಂಸ್ಕೃತಿಯೇ ಗೊತ್ತಿಲ್ಲದ ವ್ಯಕ್ತಿ ಆತ. ಇಂತಹ ವ್ಯಕ್ತಿಯ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದರು.
ಜನಾರ್ದನ ರೆಡ್ಡಿಯನ್ನು ಜೈಲಿಗೆ ಕಳುಹಿಸಿದ್ದು ನಾನಲ್ಲ. ನಾನು ಹೇಳಿದಾಕ್ಷಣ ಯಾರನ್ನಾದರೂ ಜೈಲಿಗೆ ಕಳುಹಿಸಲು ಸಾಧ್ಯವೇ? ಈ ಬಗ್ಗೆ ತೀರ್ಮಾನ ಕೈಗೊಂಡಿದ್ದು ಗೌರವಾನ್ವಿತ ನ್ಯಾಯಾಧೀಶರು. ಹಾಗೆ ತೆಗೆದುಕೊಳ್ಳಲು ಬೇಕಾದ ಸಾಕ್ಷ್ಯಗಳು ಅವರ ಎದುರು ಇರುತ್ತವೆ ಎಂದು ತಿಳಿಸಿದರು.
ಮಂಗಳವಾರ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದ ಜನಾರ್ದನರೆಡ್ಡಿ, ‘ನಾಲ್ಕು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ನನ್ನನ್ನು ನನ್ನ ಮಕ್ಕಳಿಂದ ದೂರ ಇರುವಂತೆ ಮಾಡಿದರು. ಅವರ ಹಿರಿಯ ಮಗನ ಸಾವು ಸಿದ್ದರಾಮಯ್ಯಗೆ ದೇವರು ಕೊಟ್ಟಶಿಕ್ಷೆ. ಅವರಿಗೆ ತಕ್ಕ ಶಿಕ್ಷೆಯನ್ನೇ ದೇವರು ಕೊಟ್ಟಿದ್ದಾರೆ’ ಎಂದು ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ರೆಡ್ಡಿ ಹೇಳಿಕೆಗೆ ಬಿಜೆಪಿಯಲ್ಲೂ ಆಕ್ಷೇಪ ವ್ಯಕ್ತವಾಗಿತ್ತು. ಈ ಕುರಿತು ಮಂಗಳವಾರವೇ ಭಾವನಾತ್ಮಕ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ‘ನನ್ನ ಮಗನ ಸಾವು ನನಗೆ ದೇವರು ಕೊಟ್ಟಶಿಕ್ಷೆ ಎಂದು ಜನಾರ್ದನರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ’ ಎಂದಿದ್ದರು. ಅದು ವೈರಲ್ ಆಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.