‘ನಿಖಿಲ್ ವಿರುದ್ಧ ಸುಮಲತಾ ಕಣಕ್ಕಿಳಿಸಿದ್ದೇ ಸಿದ್ದರಾಮಯ್ಯ’

By Web DeskFirst Published May 15, 2019, 7:35 AM IST
Highlights

ಮಂಡ್ಯದಲ್ಲಿ  ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕೆ ಇಳಿಸಿದ್ದು ಸಿದ್ದರಾಮಯ್ಯ ಎಂದು ಭಾರೀ ಆರೋಪ ಒಂದು ಕೇಳಿ ಬಂದಿದೆ. 

ಹುಬ್ಬಳ್ಳಿ :  ರಾಜ್ಯ ಮೈತ್ರಿ ಸರ್ಕಾರದಲ್ಲಿನ ಎಲ್ಲ ಗೊಂದಲಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣಕರ್ತರಾಗಿದ್ದು ಅವರೇ ಈ ಸರ್ಕಾರಕ್ಕೆ ಟೈಂ ಬಾಂಬ್‌ ಫಿಕ್ಸ್‌ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೊಸ ಬಾಂಬ್‌ ಸಿಡಿಸಿದ್ದಾರೆ. ಮಂಡ್ಯದ ಗೊಂದಲ ಸೇರಿದಂತೆ ಸದ್ಯದ ಮೈತ್ರಿ ಸರ್ಕಾರದ ಎಲ್ಲ ಗೊಂದಲಗಳ ಕೇಂದ್ರ ಬಿಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಆರೋಪಿಸಿರುವ ಅವರು, ಮೇ 23ರ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಟೈಂ ಬಾಂಬ್‌ನ ಬಟನ್‌ ಒತ್ತಿ ಸಮ್ಮಿಶ್ರ ಸರ್ಕಾರ ಪತನಗೊಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಸುಮಲತಾ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದು ಇದೇ ಸಿದ್ದರಾಮಯ್ಯ. ನಿಖಿಲ್‌ ಆಯ್ಕೆ ಸಿದ್ದರಾಮಯ್ಯ ಅವರಿಗೆ ಬೇಕಾಗಿಲ್ಲ ಎಂಬುದು ಸ್ಪಷ್ಟ. ಹೀಗಾಗಿಯೇ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಆಶೀರ್ವಾದ ಇರುವವರೆಗೆ ಸರ್ಕಾರ ಸ್ಥಿರವಾಗಿ ಉಳಿಯುತ್ತದೆ ಎಂದು ಕುಂದಗೋಳದಲ್ಲಿ ಹೇಳಿಕೆ ನೀಡಿದ್ದಾರೆ ಎಂದರು.

ಹಾಗೆಂದು ಕುಮಾರಸ್ವಾಮಿ ಸಹ ಸುಮ್ಮನಿಲ್ಲ. ತಮಗಾಗುತ್ತಿರುವ ಅನ್ಯಾಯಕ್ಕಾಗಿ ಅವರು ಸಹ ಎಚ್‌. ವಿಶ್ವನಾಥ ಅವರ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡಿದ್ದಾರೆ. ತಮ್ಮಲ್ಲಿರುವ ಒಳಬೇಗುದಿಯನ್ನು ಅವರ ಮುಖಾಂತರ ಹೇಳಿಸಿದ್ದಾರೆ. ಹೀಗಾಗಿ ಇಷ್ಟುದಿನಗಳ ಕಾಲ ಮೈತ್ರಿ ಸರ್ಕಾರದ ಮುಸುಕಿನ ಗುದ್ದಾಟ ಇದೀಗ ಹೊರ ಬರುತ್ತಿವೆ. ಯಾವುದೇ ಸಂದರ್ಭದಲ್ಲೂ ಸರ್ಕಾರ ಬೀಳುವ ಸಾಧ್ಯತೆ ಇದೆ ಎಂದರು.

ಸಿದ್ದುಗೆ ಸಿಎಂ ಆಗುವಾಸೆ: ನಾಲ್ಕು ವರ್ಷಗಳ ನಂತರ ಖಾಲಿ ಆಗುವ ಮುಖ್ಯಮಂತ್ರಿ ಹುದ್ದೆಗೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ತಮ್ಮವರ ಕಡೆಯಿಂದ ಸಿದ್ದರಾಮಯ್ಯನವರು ಹೇಳಿಸಿಕೊಳ್ಳುತ್ತಿದ್ದಾರೆ. ಮೈತ್ರಿ ಸರ್ಕಾರ ಗಟ್ಟಿಯಾಗಿಟ್ಟುಕೊಳ್ಳಬೇಕು ಎಂಬ ಮನಸ್ಸಿದ್ದವರು ಈ ರೀತಿ ಹೇಳಬೇಡಿ ಎಂದು ಎಚ್ಚರಿಕೆ ನೀಡಬೇಕಿತ್ತು. ಆದರೆ, ಸಿದ್ದರಾಮಯ್ಯನವರಿಗೆ ಮತ್ತೂ ತಾವೇ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ ಎಂಬುದನ್ನು ಈ ರೀತಿ ತೋರಿಸಿಕೊಂಡಿದ್ದಾರೆ ಎಂದರು.

click me!