
ಉಡುಪಿ : ‘ತಮಗೆ ಮಕ್ಕಳಿದ್ದಾರೆ’ ಎಂದು ಉಡುಪಿಯ ಶಿರೂರು ಮಠದ ಶ್ರೀಲಕ್ಷ್ಮೇವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ ಎನ್ನಲಾದ ವಿಡಿಯೋವೊಂದು ಖಾಸಗಿ ಟೀವಿ ಚಾನಲ್‌ವೊಂದರಲ್ಲಿ ಪ್ರಸಾರವಾಗಿದ್ದು, ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೆ ವಿಡಿಯೋದಲ್ಲಿ ಇರುವುದು ನನ್ನ ಧ್ವನಿಯಲ್ಲ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ಸಂಜೆ ಸುದ್ದಿ ವಾಹಿನಿಯಲ್ಲಿ ವಿಡಿಯೋ ಪ್ರಸಾರವಾಗಿದೆ. ವಿಡಿಯೋದಲ್ಲಿರುವ ಗಡ್ಡಧಾರಿ ಮತ್ತು ಕೆದರಿದ ತಲೆಗೂದಲಿನ ಶಿರೂರು ಸ್ವಾಮೀಜಿ ಅವರನ್ನು ನೋಡಿದಾಗ ಇದು 3-4 ತಿಂಗಳ ಹಿಂದೆಯಷ್ಟೇ, ಚಿತ್ರೀಕರಿಸಿದ ದೃಶ್ಯದಂತೆ ಕಂಡು ಬರುತ್ತಿದೆ. ರಹಸ್ಯವಾಗಿ ಕ್ಯಾಮರಾವನ್ನು ಬಳಸಿ, ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಇದರಲ್ಲಿ ಸ್ವಾಮೀಜಿ ಅವರು, ತಮಗೆ ಮಕ್ಕಳಿದ್ದಾರೆ, ಉಡುಪಿಯ ಎಲ್ಲಾ ಮಠಗಳ ಸ್ವಾಮೀಜಿ ಅವರಿಗೂ ಮಕ್ಕಳಿದ್ದಾರೆ ಎಂದು ಹೇಳಿದ್ದಾರೆಂದು ಪ್ರಸಾರ ಮಾಡಲಾಗಿದೆ. ಎಲ್ಲಾ ಮನುಷ್ಯರಿಗೆ ಆಸೆಗಳಿರುತ್ತವೆ, ತನಗೂ ಇದೆ, 7ನೇ ವಯಸ್ಸಿನಲ್ಲಿ ಸನ್ಯಾಸ ಕೊಡುತ್ತಾರೆ, ಆಗ ಇದೆಲ್ಲಾ ಯಾವುದೂ ಗೊತ್ತಿರುವುದಿಲ್ಲ, ಯೌವ್ವನ ಬಂದಾಗ ಆಸೆಗಳನ್ನು ಸಹಿಸಿಕೊಳ್ಳುವುದಕ್ಕಾಗುವುದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ ಎಂದು ಪ್ರಸಾರ ಮಾಡಲಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ, ಇದನ್ನು ತಾವು ಹೇಳಿಯೇ ಇಲ್ಲ, ತಮಗೆ ಗೊತ್ತೇ ಇಲ್ಲ, ತಮ್ಮ ಧ್ವನಿಯನ್ನು ಯಾರೋ ಮಿಮಿಕ್ರಿ ಮಾಡಿದ್ದಾರೆ. ತಾವು ಚುನಾವಣೆಗೆ ನಿಲ್ಲದಂತೆ ಮಾಡಲು ಈ ಕೃತ್ಯವನ್ನು ಮಾಡಿದ್ದಾರೆ, ಯಾರು ಮಾಡಿದ್ದಾರೆ ಎನ್ನುವುದು ತಮಗೆ ಗೊತ್ತಿದೆ ಎಂದವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
6-7 ತಿಂಗಳ ಹಿಂದೆಯೇ ನಾನು ಇದರ ವಿರುದ್ಧ ಕೋರ್ಟ್‌ಗೆ ಹೋಗಿದ್ದೇನೆ. ಇಂತಹ ಅಪಪ್ರಚಾರಗಳು ಸ್ವಾಭಾವಿಕ, ಮುಂದೆ ಇನ್ನಷ್ಟುಬರಬಹುದು. ಗುಂಡು ಹೊಡೆದರೂ ನಾನು ಸಾಯುವುದಿಲ್ಲ. ನನ್ನೊಂದಿಗೆ ಮುಖ್ಯಪ್ರಾಣ ಇದ್ದಾನೆ. ನಾನು ಎಲೆಕ್ಷನ್‌ಗೆ ನಿಂತೇ ನಿಲ್ಲುತ್ತೇನೆ. ವೃತ್ತಿ ವೈಷಮ್ಯದಿಂದಲೂ ಈ ರೀತಿ ಮಾಡಿರಬಹುದು, ಇದೆಲ್ಲಕ್ಕೂ ಕಾನೂನಿನ ಮೂಲಕ ಉತ್ತರಿಸುವೆ. ವೈಜ್ಞಾನಿಕ ಯುಗದಲ್ಲಿ ಏನನ್ನೂ ಮಾಡಲು ಸಾಧ್ಯವಿದೆ. ಈ ರೀತಿ ಮಾಡಿರುವುದು ಯಾರೆಂದು ಅಷ್ಟಮಠದ ಇತರೆ ಸ್ವಾಮೀಜಿಗಳಿಗೂ ಗೊತ್ತು ಎಂದು ಸ್ವಾಮೀಜಿಯವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.