ಶಶಿ ತರೂರ್ ಬರೆದಿರುವ "ಆ್ಯನ್ ಎರಾ ಆಫ್ ಡಾರ್ಕ್'ನೆಸ್: ದ ಬ್ರಿಟಿಷ್ ಎಂಪೈರ್ ಇನ್ ಇಂಡಿಯಾ" ಎಂಬ ಪುಸ್ತಕವು ಭಾರತೀಯ ಸಾಹಿತ್ಯ ಲೋಕದಲ್ಲಿ ಗಮನ ಸೆಳೆಯುತ್ತಿದೆ.
ಜೈಪುರ್(ಜ. 22): ಹಾವಾಡಿಗರ ನಾಡಾಗಿದ್ದ ಭಾರತಕ್ಕೆ ಬ್ರಿಟಿಷರು ನಾಗರಿಕತೆ ಕಲಿಸಿಕೊಟ್ಟರು ಎಂದು ನಾವು ಇತಿಹಾಸದ ಪಾಠಗಳಲ್ಲಿ ಕೇಳಿರುತ್ತೇವೆ. ಆದರೆ, ಇದು ಶುದ್ಧಸುಳ್ಳು ಎಂಬ ವಾದವನ್ನು ಅನೇಕ ಭಾರತೀಯ ಇತಿಹಾಸಕಾರರು ಹೇಳುತ್ತಾರೆ. ಕಾಂಗ್ರೆಸ್ ಮುಖಂಡ ಶಶಿ ತರೂರ್ ಕೂಡ ಈ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. ಬ್ರಿಟಿಷರು ಭಾರತೀಯರಿಗೆ ನಾಗರಿಕತೆ ಕಲಿಸುವ ಉದ್ದೇಶವಿರಲಿಲ್ಲ. ಇಲ್ಲಿರುವ ಅಪಾಯ ಸಂಪತ್ತನ್ನು ಲೂಟಿ ಮಾಡುವ ಗುರಿ ಅವರದ್ದಾಗಿತ್ತು ಎಂದು ಶಶಿ ತರೂರ್ ಹೇಳಿದ್ದಾರೆ.
ಜೈಪುರ್ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ತಿರುವನಂತಪುರಂ ಕ್ಷೇತ್ರದ ಸಂಸದ ಶಶಿ ತರೂರ್, ಭಾರತದ ಬಗ್ಗೆ ಬ್ರಿಟಿಷರಿಗೆ ಕೇವಲ ವ್ಯಾಪಾರೀ ಮನೋಭಾವ ಇತ್ತು ಎಂದು ಟೀಕಿಸಿದ್ದಾರೆ. ಬ್ರಿಟಿಷರು ಬರುವುದಕ್ಕೆ ಮುನ್ನ ಭಾರತವು ಬ್ರಿಟನ್'ಗಿಂತ ತುಂಬಾ ಸಮೃದ್ಧ ಮತ್ತು ನಾಗರಿಕ ನಾಡಾಗಿತ್ತು. ಬ್ರಿಟಿಷರು ಇಲ್ಲಿ ಕಾಲಿರಿಸಿ ಇಡೀ ದೇಶವನ್ನು ಕೊಳ್ಳೆ ಹೊಡದರು ಎಂದು ಶಶಿ ತರೂರ್ ಹೇಳಿದ್ದಾರೆ.
ಬ್ರಿಟಿಷರ ಧೋರಣೆ ತರೂರ್ ಅವರು ಬಂಗಾಳ ಕ್ಷಾಮದ ಉದಾಹರಣೆ ನೀಡಿದರು. "1770 ಮತ್ತು 1943ರ ಸಂದರ್ಭದಲ್ಲಿ ಬಂಗಾಳವು ಭಾರೀ ಕ್ಷಾಮಕ್ಕೆ ತುತ್ತಾಗಿತ್ತು. ಆದರೆ, ಬ್ರಿಟನ್ನರಿಗೆ ಇವು ದೊಡ್ಡ ವಿಷಯವೇ ಆಗಿರಲಿಲ್ಲ. 1943ರ ಕ್ಷಾಮದ ವೇಳೆ ಬ್ರಿಟನ್ ಪ್ರಧಾನಿಯಾಗಿದ್ದ ವಿನ್'ಸ್ಟನ್ ಚರ್ಚಿಲ್ ಅವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಬಂಗಾಳಕ್ಕೆ ಆಹಾರ ಕಳುಹಿಸುವಷ್ಟರಲ್ಲಿ ಕಾಲ ಮೀರಿಹೋಗಿತ್ತು. ಜರ್ಮಿನಿಯಲ್ಲಿ ನಾಜಿಗಳು ಕೈದಿಗಳಿಗೆ ನೀಡಿದ್ದಕ್ಕಿಂತಲೂ ತೀರಾ ಕಡಿಮೆ ಆಹಾರವನ್ನು ಬಂಗಾಳದ ಕ್ಷಾಮ ಸಂತ್ರಸ್ತರಿಗೆ ನೀಡಲಾಗಿತ್ತು," ಎಂದು ತರೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬ್ರಿಟನ್ ಕಾಲಾವಧಿಯಲ್ಲಿ ಸ್ಥಾಪನೆಯಾದ ಬ್ಯಾಂಕ್'ಗಳು ಹಾಗೂ ವಿವಿಧ ಸಂಸ್ಥೆಗಳು ಮತ್ತು ಸಾಮಾಜಿಕ ಸುಧಾರಣೆಗಳ ಬಗ್ಗೆಯೂ ಶಶಿ ತರೂರ್ ತಮ್ಮದೇ ವಿಶ್ಲೇಷಣೆ ನೀಡಿದ್ದಾರೆ. "ಭಾರತದಲ್ಲಿ ಬ್ರಿಟಿಷರು ಮಾಡುತ್ತಿದ್ದ ತಾರತಮ್ಯಕ್ಕೆ ಪ್ರತಿಯಾಗಿ ಇಲ್ಲಿ ಬ್ಯಾಂಕ್'ಗಳು ತಲೆ ಎತ್ತಿದವು. ಸತಿಯಂತಹ ಅನಿಷ್ಟ ಪದ್ಧತಿಗಳ ವಿರುದ್ಧ ರಾಜಾ ರಾಮ್ ಮೋಹನ್ ರಾಯ್'ರಂತಹ ಅಪ್ರತಿಮ ಸಾಮಾಜಿಕ ಸುಧಾರಕರು ಧ್ವನಿ ಎತ್ತಿದ್ದರಿಂದ ಬ್ರಿಟಿಷರು ಅವುಗಳನ್ನು ನಿಷೇಧಿಸಿದ್ದರಷ್ಟೇ," ಎಂದು ಕಾಂಗ್ರೆಸ್ ಮುಖಂಡ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಶಿಕ್ಷಣ ಪದ್ಧತಿ ಬಗ್ಗೆ ಮಾತನಾಡಿದ ಶಶಿ ತರೂರ್, "ಭಾರತದಲ್ಲಿ ಇನ್ನೂ ಕೂಡ ಬ್ರಿಟಿಷ್ ಶಿಕ್ಷಣ ಪದ್ಧತಿಯನ್ನು ಅನುಸರಿಸುತ್ತಿರುವುದು ದುರದೃಷ್ಟಕರ. ಶಾಲೆಯಲ್ಲಿ ಕಾಳಿದಾಸನ ಸಾಹಿತ್ಯದ ಬಗ್ಗೆ ಹೇಳಿಕೊಡುವುದಕ್ಕಿಂತ ಹೆಚ್ಚಾಗಿ ಶೇಕ್ಸ್'ಪಿಯರ್ ಕುರಿತ ವಿಷಯಗಳೇ ಪಠ್ಯಪುಸ್ತಕ ತುಂಬಿಹೋಗಿರುತ್ತವೆ. ಇದು ನಾಚಿಕೆಗೇಡಿನ ವಿಚಾರ," ಎಂದು ತಿಳಿಸಿದ್ದಾರೆ.
ಇದೇ ವೇಳೆ, ಅಂತಾರಾಷ್ಟ್ರೀಯ ಮಟ್ಟದ ಇತಿಹಾಸಕಾರ ಜಾನ್ ವಿಲ್ಸನ್ ಕೂಡ ಶಶಿ ತರೂರ್ ವಾದವನ್ನು ಪುರಸ್ಕರಿಸಿದ್ದಾರೆ. ಭಾರತದಲ್ಲಿ ಬ್ರಿಟಿಷರು ಯಾವುದೇ ಸಕರಾತ್ಮಕ ಬದಲಾವಣೆ ತರಲಿಲ್ಲ ಎಂದು ವಿಲ್ಸನ್ ಹೇಳಿದ್ದಾರೆ. ಬ್ರಿಟಿಷರ ವಸಾಹತು ಬಗ್ಗೆ ವಿಲ್ಸನ್ ಬಹಳಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಶಶಿ ತರೂರ್ ಬರೆದಿರುವ "ಆ್ಯನ್ ಎರಾ ಆಫ್ ಡಾರ್ಕ್'ನೆಸ್: ದ ಬ್ರಿಟಿಷ್ ಎಂಪೈರ್ ಇನ್ ಇಂಡಿಯಾ" ಎಂಬ ಪುಸ್ತಕವು ಭಾರತೀಯ ಸಾಹಿತ್ಯ ಲೋಕದಲ್ಲಿ ಗಮನ ಸೆಳೆಯುತ್ತಿದೆ.