ಇನ್ನೂ ನಿಂತಿಲ್ಲ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ

By Web DeskFirst Published Jun 23, 2019, 10:36 AM IST
Highlights

ಇನ್ನೂ ನಿಂತಿಲ್ಲ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ | ಮಾನ್ಯತೆ ಕೋರಿ ಶೀಘ್ರ ಹೈಕೋರ್ಟ್‌ಗೆ ರಿಟ್‌: ಲಿಂಗಾಯತ ಮಹಾಸಭೆ | ‘ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ’ ಸ್ಥಾಪನೆ ಮನವಿಗೆ ಆಕ್ಷೇಪ

ಬೆಂಗಳೂರು (ಜೂ. 23):  ಕಾಂಗ್ರೆಸ್‌ನ ಕೆಲವು ಲಿಂಗಾಯತ ಶಾಸಕರು ಹೇಳಿದ ಮಾತ್ರಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಅಪ್ರಸ್ತುತವೂ ಆಗಿಲ್ಲ ಮತ್ತು ಸ್ಥಗಿತಗೊಂಡಿಲ್ಲ. ಸಂವಿಧಾನಬದ್ಧವಾಗಿ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವವರೆಗೆ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಸ್ಪಷ್ಟವಾಗಿ ಹೇಳಿದೆ.

ಇತ್ತೀಚೆಗೆ ವೀರಶೈವ ಮಹಾಸಭಾ ಸರ್ಕಾರಕ್ಕೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ ಅರ್ಪಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಲಿಂಗಾಯತ ಮಹಾಸಭಾ ಮುಖಂಡರು, ಯಾವುದೇ ಕಾರಣಕ್ಕೂ ಸರ್ಕಾರ ವೀರಶೈವ ಹೆಸರು ಸೇರಿಸದೇ ಕೇವಲ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಶನಿವಾರ ಬೆಂಗಳೂರಿನಲ್ಲಿ ನಡೆದ ಮಹಾಸಭಾದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಮಠಾಧೀಶರು, ಪದಾಧಿಕಾರಿಗಳು, ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ಸಂಬಂಧ ಶೀಘ್ರ ಹೈಕೋರ್ಟ್‌ನಲ್ಲಿ ರಿಟ್‌ ದಾಖಲಿಸಲಾಗುವುದು.

ಇದೇ ವಿಷಯ ಕುರಿತು ಕೇಂದ್ರ ಅಲ್ಪಸಂಖ್ಯಾತ ನಿಗಮದಿಂದ ಮಾನ್ಯತೆ ಪಡೆಯಲು ಯತ್ನಿಸಲಾಗುವುದು. ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಸಂಬಂಧ ಕೇಂದ್ರ ಈ ಹಿಂದೆ ತೆಗೆದುಕೊಂಡ ನಿರ್ಧಾರವನ್ನು ಪುನರ್‌ ಪರಿಶೀಲಿಸಲು ವಿನಂತಿಸಲಾಗುವುದು ಎಂದು ತಿಳಿಸಿದರು.

ಮಹಾಸಭಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ್‌ ಮಾತನಾಡಿ, ಕೇಂದ್ರ ಸರ್ಕಾರದ ಮೀಸಲಾತಿ ಪಟ್ಟಿಯಲ್ಲಿ ಈಗಾಗಲೇ ಇರುವ ಲಿಂಗಾಯತರ 30 ಜಾತಿಗಳ ಜೊತೆಗೆ ಉಳಿದ 74 ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂದು ವೀರಶೈವ ಸಮುದಾಯ ಬೇಡಿಕೆ ಇಟ್ಟಿರುವುದಕ್ಕೆ ಮಹಾಸಭಾ ವಿರೋಧ ವ್ಯಕ್ತ ಮಾಡುವುದಿಲ್ಲ.

ಎಲ್ಲ ಉಪಜಾತಿಗಳು ಸಹ ಗಾಣಿಗ ಲಿಂಗಾಯತ, ಅಕ್ಕಸಾಲಿಗ ಲಿಂಗಾಯತ, ಬಣಜಿಗ ಲಿಂಗಾಯತ ಎಂದೇ ಹೇಳಿಕೊಳ್ಳುತ್ತಿವೆ. ಎಲ್ಲಿಯೂ ಕೂಡಾ ವೀರಶೈವ ಎಂದು ಎಂದು ದಾಖಲು ಮಾಡುತ್ತಿಲ್ಲ. ಹೀಗಿರುವಾಗ ಭೀಮಣ್ಣ ಖಂಡ್ರೆ ಅವರು ಅವರು ವೀರಶೈವ ಎಂಬ ಶಬ್ದ ಸೇರಿಸಿ ಒತ್ತಡ ಹೇರುವ ಕೆಲಸ ಮಾಡಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ಉಪ ಪಂಗಡವಾಗಿರಲು ತಮ್ಮ ಅಭ್ಯಂತರವಿಲ್ಲ ಎಂದರು.

ಗದಗ ಡಂಬಳ ಮಠದ ಶ್ರೀ ಸಿದ್ದರಾಮಸ್ವಾಮೀಜಿ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಕೆಲವು ಶಾಸಕರು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಅಪ್ರಸ್ತುತ ಎಂದು ಹೇಳಿರುವುದು ಆ ಪಕ್ಷದ ಅಭಿಪ್ರಾಯ ಅಷ್ಟೇ. ಲಿಂಗಾಯತ ಸಮುದಾಯ ಯಾವುದೇ ರಾಜಕೀಯ ಪಕ್ಷದ ಸ್ವತ್ತಲ್ಲ, ಲಕ್ಷಾಂತರ ಜನರು ಈ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಕೆಲವು ಜನರು ಅಪ್ರಸ್ತುತ ಎಂದ ಮಾತ್ರಕ್ಕೆ ಹೋರಾಟ ನಿಲ್ಲುವುದಿಲ್ಲ ಎಂದರು.

ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಬೌದ್ಧ, ಜೈನ, ಸಿಖ್‌ ಹಾಗೂ ಪಾರ್ಸಿ ಧರ್ಮವನ್ನು ಪ್ರತ್ಯೇಕ ಎಂದು ಪರಿಗಣಿಸುವಂತೆ ಲಿಂಗಾಯತವನ್ನು ಪ್ರತ್ಯೇಕ ಎಂಬ ಮಾನ್ಯತೆ ಸಿಗಬೇಕಿದೆ.

ಕೆಲವರು ವಿನಾಕಾರಣ ಕಾಂಗ್ರೆಸ್‌ನ ಕೆಲವು ಶಾಸಕರು ವಿನಾಕಾರಣ ಗೊಂದಲ ಸೃಷ್ಟಿಸುವ, ಹೋರಾಟ ಹತ್ತಿಕ್ಕುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಅಸಮಾಧಾನ ವ್ಯಕ್ತಪಡಿಸಿದರು. ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ ದೇವರು, ಈಗಾಗಲೇ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಗುರುತಿಸಲ್ಪಟ್ಟಿದೆ. ಆದರೆ ನ್ಯಾಯಾಲಯದ ಮೂಲಕ ಸ್ವತಂತ್ರ ಧರ್ಮ ಪಡೆಯಲು ಹೋರಾಟ ಮುಂದುವರೆಸಲಾಗುವುದು ಎಂದರು.

ಕೂಡಲ ಸಂಗಮದ ಬಸವಧರ್ಮ ಪೀಠದ ಪ್ರತಿನಿಧಿ ಚನ್ನಬಸವಾನಂದ ಸ್ವಾಮಿ, ಚಿತ್ತರಗಿ ಇಳಕಲ್‌ನ ವಿಜಯ ಮಹಾಂತೇಶ್ವರ ಮಠದ ಗುರು ಮಹಾಂತ ಸ್ವಾಮೀಜಿ ಮುಂತಾದವರು ಲಿಂಗಾಯತ ಧರ್ಮದ ಅಸ್ಮಿತೆಯಾಗಿರುವ ಪ್ರತ್ಯೇಕ ಧರ್ಮ ಹೋರಾಟವನ್ನು ಗುರಿ ಮುಟ್ಟುವವರೆಗೂ ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಹೇಳಿದರು.

click me!