ಚಿಂತಕಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಪೊಲೀಸ್ ಮಹಾ ನಿರೀಕ್ಷಕರ (ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್) ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ವಿಚಾರಣೆಗಾಗಿ ನೇಮಕ ಮಾಡಿದೆ. ಜತೆಗೆ, ಜೀವ ಬೆದರಿಕೆ ಎದುರಿಸುತ್ತಿರುವ ನಾಡಿನ ಎಲ್ಲಾ ಪ್ರಗತಿಪರ ಚಿಂತಕರು ಹಾಗೂ ಬುದ್ಧಿಜೀವಿಗಳಿಗೆ ಭದ್ರತೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಗೌರಿ ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ತಮ್ಮ ಕೇರಳದ ಪ್ರವಾಸವನ್ನು ರದ್ದುಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬೆಳಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಅನಂತರ ಸುದ್ದಿಗೋಷ್ಠಿ ನಡೆಸಿದ ಅವರು ಈ ವಿಷಯ ಪ್ರಕಟಿಸಿದರು.
ಬೆಂಗಳೂರು (ಸೆ.06): ಚಿಂತಕಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಪೊಲೀಸ್ ಮಹಾ ನಿರೀಕ್ಷಕರ (ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್) ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ವಿಚಾರಣೆಗಾಗಿ ನೇಮಕ ಮಾಡಿದೆ. ಜತೆಗೆ, ಜೀವ ಬೆದರಿಕೆ ಎದುರಿಸುತ್ತಿರುವ ನಾಡಿನ ಎಲ್ಲಾ ಪ್ರಗತಿಪರ ಚಿಂತಕರು ಹಾಗೂ ಬುದ್ಧಿಜೀವಿಗಳಿಗೆ ಭದ್ರತೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಗೌರಿ ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ತಮ್ಮ ಕೇರಳದ ಪ್ರವಾಸವನ್ನು ರದ್ದುಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬೆಳಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಅನಂತರ ಸುದ್ದಿಗೋಷ್ಠಿ ನಡೆಸಿದ ಅವರು ಈ ವಿಷಯ ಪ್ರಕಟಿಸಿದರು.
ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸುವುದು ಬೇಡ ಎಂಬ ಅಭಿಪ್ರಾಯ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ಎಸ್‌ಐಟಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಪ್ರಕರಣದ ತನಿಖೆಯನ್ನು ಯಾರ ನೇತೃತ್ವದಲ್ಲಿ ನಡೆಸಬೇಕು ಎಂಬ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ನಿರ್ಧರಿಸಲಿದ್ದಾರೆ. ತಂಡದ ಮುಖ್ಯಸ್ಥರಿಗೆ ತಮಗೆ ಬೇಕಾದ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದರು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ. ಹಂತಕರ ಪತ್ತೆಗೆ ತ್ವರಿತ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಕುಟುಂಬಸ್ಥರು ಬಯಸಿದರೆ, ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸುವ ಬಗ್ಗೆಯೂ ಸರ್ಕಾರ ಮುಕ್ತವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಗತಿಪರ ಚಿಂತಕರಿಗೆ ಭದ್ರತೆ:
ಗೌರಿ ಹತ್ಯೆ ಹಿನ್ನೆಲೆಯಲ್ಲಿ ಜೀವ ಬೆದರಿಕೆ ಹೊಂದಿರುವ ಎಲ್ಲರಿಗೂ ಭದ್ರತೆ ನೀಡಲು ಸೂಚನೆ ನೀಡಲಾಗಿದೆ. ನಾಡಿನ ಎಲ್ಲಾ ಪ್ರಗತಿಪರ ಚಿಂತಕರ ಪಟ್ಟಿಯನ್ನು ಸಿದ್ಧಪಡಿಸಿ, ಬೆದರಿಕೆ ಹೊಂದಿರುವವರಿಗೆ ಶೀಘ್ರವೇ ಸೂಕ್ತ ಭದ್ರತೆ ನೀಡಲಾಗುವುದು ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಗೌರಿ ಲಂಕೇಶ್ ಅವರ ಹತ್ಯೆ ತನಿಖೆಯನ್ನು ಪೊಲೀಸರು ಈಗಾಗಲೇ ಆರಂಭಿಸಿದ್ದಾರೆ. ಗೌರಿ ಲಂಕೇಶ್ ಅವರು ತಮ್ಮ ಮನೆಯ ನಾಲ್ಕು ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರು. ಕಾರು ನಿಲ್ಲಿಸುವ ಜಾಗ, ಮನೆ ಬಾಗಿಲು, ಮನೆಯ ಹಿಂಭಾಗ ಮತ್ತು ಸೆಲ್ಲರ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.ಈ ಪೈಕಿ ಎರಡರಲ್ಲಿ ಹತ್ಯೆಗೆ ಸಂಬಂಧಪಟ್ಟಂತೆ ಕೆಲವು ದೃಶ್ಯ ದಾಖಲಾಗಿದೆ. ಹೆಲ್ಮೆಟ್ ಧರಿಸಿದ್ದ ಹಂತಕ ತುಂಬಾ ಹತ್ತಿರದಿಂದ ಗುಂಡು ಹಾರಿಸಿದ್ದಾನೆ. ಗುಂಡು ಬಿದ್ದನಂತರ ಗೌರಿ ಲಂಕೇಶ್ ನಾಲ್ಕೈದು ಹೆಜ್ಜೆ ಇಟ್ಟು ಕೆಳಗೆ ಬಿದ್ದು ಕೊನೆಯುಸಿರೆಳೆದಿದ್ದಾರೆ. ಹತ್ಯೆಯಲ್ಲಿ ಎಷ್ಟು ಜನ ಭಾಗಿಯಾಗಿದ್ದಾರೆ, ವಾಹನಗಳ ಬಳಕೆ ಇತ್ಯಾದಿಗಳ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ . ಆದರೆ ಈ ಹತ್ಯೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು. ತಮ್ಮನ್ನು ಹಲವಾರು ಬಾರಿ ಭೇಟಿ ಮಾಡಿದ್ದರು ಸಹ ಎಂದೂ ತಮಗೆ ಜೀವ ಬೆದರಿಕೆ ಇದೆಯೆಂದು ಯಾವತ್ತೂ ಹೇಳಿಕೊಂಡಿರಲಿಲ್ಲ. ಪಿ. ಲಂಕೇಶ್ ಕಾಲದಿಂದಲೂ ಗೌರಿ ಪರಿಚಿತರಾಗಿದ್ದರು. ಅವರ ಹತ್ಯೆ ನನಗೆ ತುಂಬಾ ಆಘಾತ ತಂದಿದೆ. ಈ ಪ್ರಕರಣದಲ್ಲಿ ಗುಪ್ತದಳ ವಿಫಲವಾಗಿದೆ ಎಂದು ಹೇಳಲು ಆಗುವುದಿಲ್ಲ ಎಂದರು.
ಸಾಮ್ಯತೆ ಹೇಳಲು ತಕ್ಷಣ ಅಸಾಧ್ಯ:
ದಾಬೋಲ್ಕರ್, ಪಾನ್ಸರೆ, ಕಲಬುರಗಿ ಹತ್ಯೆಗೆ ಬಳಸಲಾದ ಶಸ್ತ್ರ ಹಾಗೂ ಹತ್ಯೆ ಮಾಡಿದ ರೀತಿಯಲ್ಲಿ ಕೆಲವು ಸಾಮ್ಯತೆಗಳಿವೆ. ಆದರೆ ಗೌರಿ ಲಂಕೇಶ್ ಹತ್ಯೆಗೂ ಕಲಬುರಗಿ ಮತ್ತಿತರರ ಹತ್ಯೆಗೂ ಸಾಮ್ಯತೆ ಇರುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ, ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂದು ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಹಾರಾಷ್ಟ್ರದ ವಿಚಾರವಾದಿ ದಾಬೋಲ್ಕರ್ ಹತ್ಯೆಯನ್ನು ಸಿಬಿಐ, ಎಡಪಂಥೀಯ ಪಾನ್ಸರೆ ಹತ್ಯೆ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಹಾಗೂ ಡಾ. ಎಂ.ಎಂ. ಕಲಬುರಗಿ ಹತ್ಯೆಯನ್ನು ರಾಜ್ಯದ ಸಿಐಡಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಹಾಗಾಗಿ ಈ ಮೂರು ಸಂಸ್ಥೆಗಳ ಜೊತೆ ಸಮನ್ವಯ ಸಾಧಿಸುವಂತೆ ರಾಜ್ಯದ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಒಬ್ಬನನ್ನು ವಿಚಾರಣೆಗೆ ವಶಪಡಿಸಿಕೊಂಡಿದ್ದು, ಆತನ ವಿಚಾರಣೆ ಸಂದರ್ಭದಲ್ಲಿ ರಾಜ್ಯದ ಪೊಲೀಸರು ಹಾಜರಿದ್ದರು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಡಾ. ಎಂ.ಎಂ.ಕಲಬುರಗಿ ಹತ್ಯೆ ಪ್ರಕರಣದಲ್ಲಿ ಹಂತಕರನ್ನು ಪತ್ತೆ ಮಾಡುವಲ್ಲಿ ವಿಳಂಬವಾಗಿರುವುದು ನಿಜ, ಆದರೆ ವೈಫಲ್ಯವಾಗಿದೆ ಎಂದು ನಾನು ಹೇಳುವುದಿಲ್ಲ ಎಂದು ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದರು.
ಗೌರಿ ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾನೂನು ಮತ್ತು ವ್ಯವಸ್ಥೆ ಉತ್ತಮವಾಗಿದೆ ಎಂದರು.
ಗೃಹ ಸಚಿವ ರಾಮಲಿಂಗಾರೆಡ್ಡಿ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.