
ನವದೆಹಲಿ (ಫೆ.07): ರಾಜಸ್ಥಾನದ ಜೈಪುರದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್‌ನ ಖಜಾನೆಯಲ್ಲಿದ್ದ 925 ಕೋಟಿ ರು. ದರೋಡೆ ಮಾಡುವ ಆಗುಂತಕರ ಕೃತ್ಯವನ್ನು ಬ್ಯಾಂಕಿನ ಭದ್ರತಾ ಸಿಬ್ಬಂದಿ ವಿಫಲಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ಖಜಾನೆಯಲ್ಲಿರುವ ಕೋಟ್ಯಂತರ ರುಪಾಯಿ ದೋಚಿ ಪರಾರಿಯಾಗಲು ಹವಣಿಸಿದ್ದ 12 ಮಂದಿ ಮುಸುಕುಧಾರಿ ದುಷ್ಕರ್ಮಿಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತಾವು ಬಂದಿದ್ದ ಕಾರಿನಲ್ಲಿ ವಾಪಸ್ ತೆರಳಿದ್ದಾರೆ.
ಮಂಗಳವಾರ ನಸುಕಿನಲ್ಲಿ ಬ್ಯಾಂಕ್ ದರೋಡೆಗೆ ಆಗಮಿಸಿದ 12 ಮಂದಿ ಮುಸುಕುಧಾರಿಗಳು ನಗರದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್‌ನ ಭದ್ರತೆ ನಿಯೋಜನೆಯಾಗಿದ್ದ ಭದ್ರತಾ ಸಿಬ್ಬಂದಿಯನ್ನು ಕಟ್ಟಿಹಾಕಿ, ಬ್ಯಾಂಕಿನ ಕೀಲಿಕೈಗಳನ್ನು ನೀಡುವಂತೆ ಪೀಡಿಸಿದರು. ಆದರೆ, ಭದ್ರತಾ ಸಿಬ್ಬಂದಿ ಇದಕ್ಕೆ ಒಪ್ಪಲಿಲ್ಲ. ಈ ಎಲ್ಲ ಘಟನೆಗಳ ಬಗ್ಗೆ ಬ್ಯಾಂಕಿನ ಒಳಗಿಂದ ಕೇಳಿಸಿಕೊಂಡ ಭದ್ರತಾ ಸಿಬ್ಬಂದಿ, ಬ್ಯಾಂಕ್ ಲೂಟಿ ಯತ್ನದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು.
ಅಲ್ಲದೆ, ದುಷ್ಕರ್ಮಿಗಳು ತಮ್ಮ ಬ್ಯಾಂಕಿನೊಳಕ್ಕೆ ಬರದಂತೆ ಎದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು. ಇದರ ಹೊರತಾಗಿಯೂ, ದರೋಡೆಕೋರರು ಬ್ಯಾಂಕ್‌ನೊಳಕ್ಕೆ ನುಗ್ಗಲು ಮುಂದಾಗಿದ್ದರು. ಅಷ್ಟೊತ್ತಿಗಾಗಲೇ, ಪೊಲೀಸರ ಜೀಪಿನ ಸೈರನ್ ಕೇಳಿಸಿತು. ಇದರಿಂದ ತಾವು ಪೊಲೀಸರ ಅತಿಥಿಯಾಗುವುದು ಖಚಿತ ಎಂಬುದಾಗಿ ಗಾಬರಿಗೊಂಡ ಆರೋಪಿಗಳು ತಾವು ಬಂದ ಕಾರಿನಲ್ಲಿ ಎದ್ನೋ-ಬಿದ್ನೋ ಎಂಬಂತೆ ಪರಾರಿಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದರೆ, ಆರೋಪಿಗಳ ಚಲನವಲನಗಳು ಬ್ಯಾಂಕಿನ ಎದುರು ಅಳವಡಿಸಲಾಗಿರುವ ಸಿಸಿಟೀವಿಯಲ್ಲಿ ದಾಖಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಘಟನೆಯಲ್ಲಿ ಭಾಗಿಯಾದವರು ಯಾರು ಎಂಬುದರ ಪತ್ತೆಗಾಗಿ ವಿಡಿಯೋ ಫುಟೇಜ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಇಂಥ ಘಟನೆಗಳು ಮರುಕಳಿಸದಂತೆ ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.