
ಗೋಕಾಕ : ಸಚಿವ ಸಂಪುಟದಿಂದ ಕೈಬಿಟ್ಟಹಿನ್ನೆಲೆಯಲ್ಲಿ ಮುನಿಸಿಕೊಂಡು, ಕಾಂಗ್ರೆಸ್ ಹೈಕಮಾಂಡ್ ಸಂಪರ್ಕಕ್ಕೂ ಸಿಗದೇ ಒಂಭತ್ತು ದಿನಗಳಿಂದ ಕಣ್ಮರೆಯಾಗಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಮಂಗಳವಾರ ರಾತ್ರಿ ಗೋಕಾಕ ಪಟ್ಟಣದಲ್ಲಿ ಏಕಾಏಕಿ ಪ್ರತ್ಯಕ್ಷವಾಗಿದ್ದರು. ಆದರೆ ಬುಧವಾರ ಬೆಳಗ್ಗೆ ಮತ್ತೆ ಕಣ್ಮರೆಯಾಗಿದ್ದಾರೆ. ಈ ಮೂಲಕ ಅವರ ರಾಜಕೀಯ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಕಾರಿನಲ್ಲಿ ಬುಧವಾರ ಬೆಳಗ್ಗೆ ಮನೆಯಿಂದ ಹೊರಗೆ ಹೋಗಿದ್ದನ್ನು ಕೆಲವರು ನೋಡಿದ್ದಾರೆ. ಆದರೆ ಅವರು ಈಗ ಎಲ್ಲಿದ್ದಾರೆ ಎನ್ನುವುದು ಅವರ ಸಹೋದರರು ಸೇರಿದಂತೆ ಯಾರಿಗೂ ಗೊತ್ತಿಲ್ಲ. ಎರಡು ದಿನಗಳ ಹಿಂದೆಯಷ್ಟೇ ಅವರು ದೆಹಲಿಯ ಹೋಟೆಲ್‌ವೊಂದರಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿತ್ತು. ಈಗ ಗೋಕಾಕದ ತಮ್ಮ ನಿವಾಸದಲ್ಲಿ ದಿಢೀರ್ ಪ್ರತ್ಯಕ್ಷವಾಗಿ ಕಣ್ಮರೆಯಾಗಿದ್ದಾರೆ.
ಸಹೋದರರ ಗುಪ್ತಸಭೆ?: ಹೊಸ ವರ್ಷ ಪ್ರಯುಕ್ತ ಸಚಿವ ಸತೀಶ ಜಾರಕಿಹೊಳಿ ನಗರದ ಹಿಲ್ ಗಾರ್ಡನ್‌ನಲ್ಲಿ ಮಂಗಳವಾರ ರಾತ್ರಿ ತಮ್ಮ ಗೆಳೆಯರಿಗಾಗಿ ಔತಣಕೂಟ ಆಯೋಜಿಸಿದ್ದರು. ಔತಣಕೂಟದ ಬಳಿಕ ಜಾರಕಿಹೊಳಿ ಸಹೋದರರು ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಇಲ್ಲಿ ಕೈಗೊಂಡ ತೀರ್ಮಾನಗಳ ಬಗ್ಗೆ ಅವರ ಅತಿ ಆಪ್ತವಲಯ ಹಾಗೂ ಯಾವುದೇ ಮಾಧ್ಯಮಕ್ಕೂ ನಿಖರ ಮಾಹಿತಿ ಸಿಕ್ಕಿಲ್ಲ.
ಇದೇ ವೇಳೆ ರಮೇಶ ಜಾರಕಿಹೊಳಿ ಶಾಸಕತ್ವಕ್ಕೆ ರಾಜೀನಾಮೆ ನೀಡಿದಲ್ಲಿ ಕ್ಷೇತ್ರದಲ್ಲಿ ಬರುವ ಹಲವು ಸಂಘ ಸಂಸ್ಥೆಗಳ ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.