ಹುಲಿ ರಕ್ಷಣೆ ಕಾರ್ಯಾಚರಣೆಯಲ್ಲಿ ಮೈಸೂರಿನಲ್ಲಿ ಒಂದೇ ವಾರದಲ್ಲಿ ಎರಡನೇ ಹುಲಿ ಸಾವು

By Suvarna Web DeskFirst Published Jan 17, 2017, 7:31 AM IST
Highlights

ಜಿಲ್ಲೆಯಲ್ಲಿ ಒಂದು ವಾರದಲ್ಲಿ ಎರಡು ಹುಲಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಂದಲೇ ಸಾವನ್ನಪ್ಪಿರೋದು ವನ್ಯಜೀವಿ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

ಮೈಸೂರು(ಜ. 17): ಕಳೆದ ಒಂದು ವಾರದಲ್ಲಿ ಮೈಸೂರು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಹುಲಿ ಕಾರ್ಯಾಚರಣೆಯಲ್ಲಿ ಎರಡು ಹುಲಿಗಳು ಸಾವನ್ನಪಿರುವುದು ಆತಂಕಕ್ಕೆ ಕಾರಣವಾಗಿದೆ. ನಿನ್ನೆ ಸೋಮವಾರ ರಾತ್ರಿ ಹೆಚ್.ಡಿ.ಕೋಟೆ ತಾಲೂಕಿನ ಗುಂಡೆತ್ತೂರು ಗ್ರಾಮದಲ್ಲಿ ಅರವಳಿಕೆ ನೀಡಿ ಸೆರೆ ಹಿಡಿದಿದ್ದ ಹುಲಿ ಇಂದು ಬೆಳಗ್ಗೆ ಸಾವನ್ನಪ್ಪಿದೆ. ಇದರೊಂದಿಗೆ ತಾಯಿ ಹುಲಿಯಿಂದ ಬೇರ್ಪಟ್ಟ ಹುಲಿ ಮರಿಗಳು ಅನಾಥವಾದಂತಾಗಿದೆ.

ಮೃತಪಟ್ಟ ಹುಲಿ ಡಿಸೆಂಬರ್‌ 29 ರಂದು ಹೆ.ಡಿ.ಕೋಟೆ ತಾಲೂಕಿನ  ಮಗ್ಗೆ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಕಳೆದ ಒಂದು ತಿಂಗಳಿಂದ ಗ್ರಾಮದ ಸುತ್ತಮುತ್ತ ಹತ್ತಕ್ಕೂ ರಾಸುಗಳನ್ನು ಕೊಂದಿತ್ತು.  ಹುಲಿ ಹಿಡಿಯುವ ಯತ್ನದಲ್ಲಿ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿಗೆ ಮೂರ್ತಿ ಎಂಬ ವ್ಯಕ್ತಿ ಸಾವನ್ನಪ್ಪಿದ್ದರು. ನಿನ್ನೆ ಬಾಳೆ ತೋಟದಲ್ಲಿ ಹುಲಿ ಮತ್ತೆ ಪ್ರತ್ಯಕ್ಷವಾಗಿ ಹಸುವನ್ನು ಕೊಂದಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಬಂಡೀಪುರ ಅರಣ್ಯ ಅಧಿಕಾರಿಗಳು ಮದ್ಯರಾತ್ರಿ ಹುಲಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಹಿಡಿದಿದ್ದರು. ಆ ಹುಲಿ ಬೆಳಿಗ್ಗೆ ಮೃತಪಟ್ಟಿದೆ. ಮೂರು ಬಾರಿ ಅರವಳಿಕೆ ನೀಡಿದ್ದೇ ಹುಲಿ ಸಾವಿಗೆ ಕಾರಣವೆನ್ನಲಾಗಿದೆ. ಸದ್ಯ ಮೈಸೂರಿನಲ್ಲಿ ಬಳ್ಳೆ ಆಡಿಯಲ್ಲಿ ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಕಾರ್ಯಾಚರಣೆ ವಿಫಲವಾಗಿದೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜೆ.ಹೊಸ್ ಮಠ್ ಸುವರ್ಣ ನ್ಯೂಸ್'ಗೆ ತಿಳಿಸಿದ್ದಾರೆ.

ಇದೇ ರೀತಿ 5 ದಿನಗಳ ಹಿಂದೆ ಇದೇ ತಾಲೂಕಿನ ನುಗು ಜಲಾಶಯ ಬಳಿ ಆನೆ ಜೊತೆ ಕಾಳಗ ನಡೆಸಿ ಹುಲಿ ಸಾವನ್ನಪ್ಪಿತ್ತು. ಜಲಾಶಯದ ಹಿನ್ನೀರಿನಲ್ಲಿ ಹುಲಿ ಸಾಯುವುದಕ್ಕೂ ಮುನ್ನ ಒದ್ದಾಡುವ ದೃಶ್ಯ ಎಲ್ಲರ ಮನ ಕಲಕುವಂತಿತ್ತು. ಆದರೆ ಈ ಹುಲಿ ಕೂಡ ಅರವಳಿಕೆಯನ್ನು ಅಗತ್ಯಕ್ಕಿಂತ ಹೆಚ್ಚು ನೀಡಿದ ಹಿನ್ನೆಲೆಯಲ್ಲಿ ಸಾವನ್ನಪ್ಪಿದೆ ಎನ್ನಲಾಗಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಒಂದು ವಾರದಲ್ಲಿ ಎರಡು ಹುಲಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಂದಲೇ ಸಾವನ್ನಪ್ಪಿರೋದು ವನ್ಯಜೀವಿ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

- ಮಧು ಎಂ. ಚಿನಕುರಳಿ, ಸುವರ್ಣ ನ್ಯೂಸ್​, ಮೈಸೂರು

click me!