ಟ್ರಾಫಿಕ್ ಪೊಲೀಸ್ ಆದ್ರು ಯೋಗರಾಜ್ ಭಟ್ರು

By Web DeskFirst Published Dec 31, 2018, 11:19 AM IST
Highlights

ಹೊಸ ವರ್ಷದ ಈ ಸಂದರ್ಭದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಸಂಚಾರದ ಬಗ್ಗೆ, ವಾಹನ ಚಾಲನೆ ಬಗ್ಗೆ  ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ.  

ಬೆಂಗಳೂರು :  ಹೊಸ ವರ್ಷದ ರಾತ್ರಿ ಮದ್ಯ ಸೇವಿಸಿ ಕುಡಿದು ವಾಹನ ಚಾಲನೆ ಮಾಡುವುದನ್ನು ತಡೆಗಟ್ಟಲು ಮುಂದಾಗಿರುವ ನಗರ ಪೊಲೀಸರು ನಿರ್ದೇಶಕ, ಸಾಹಿತಿ ಹಾಗೂ ನಟಿಯೊಬ್ಬರ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ.

ಸಾಹಿತಿ ಬರಗೂರು ರಾಮಚಂದ್ರಪ್ಪ, ಚಿತ್ರ ನಿರ್ದೇಶಕ ಯೋಗರಾಜ್‌ ಭಟ್‌ ಹಾಗೂ ನಟಿ ತಾರಾ ಅವರು ತಮ್ಮ ಒಂದೊಂದು ನಿಮಿಷದ ವಿಡಿಯೋದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಬೇಡಿ ಎಂದು ಹೇಳಿದ್ದಾರೆ. ಇನ್ನು ಯೋಗರಾಜ್‌ ಭಟ್‌ ಅವರು ಸಂಚಾರ ಇನ್ಸ್‌ಪೆಕ್ಟರ್‌ ಸಮವಸ್ತ್ರ ಧರಿಸಿ ಮಾತನಾಡಿರುವುದು ಗಮನ ಸೆಳೆದಿದೆ.

‘ಹೊಸ ವರ್ಷದಲ್ಲಿ ಪ್ರತಿಯೊಬ್ಬರು ತಮ್ಮ ಬಾಡಿ ಹಾಗೂ ಗಾಡಿಯನ್ನು ಸೇಫ್‌ ಆಗಿ ಮನೆಗೆ ತೆಗೆದುಕೊಂಡು ಹೋಗಿ. ಪೊಲೀಸರಿಗೆ ಹೀಗಾಗಲೇ ಇರುವ ಕೆಲಸದ ಒತ್ತಡದ ಮಧ್ಯೆ ಮತ್ತಷ್ಟುಕೆಲಸ ಕೊಡುವುದು ಬೇಡ. ಎಲ್ಲರಿಗೂ ಒಳ್ಳೆಯದಾಗಲಿ. ಹೊಸ ವರ್ಷದ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿ ಎಂದು ಯೋಗರಾಜ್‌ ಭಟ್‌ ಅವರು ತಮ್ಮ ಎಂದಿನ ಹಾಸ್ಯದಾಟಿಯಲ್ಲಿ ಮನವಿ ಮಾಡಿದ್ದಾರೆ.

ಇನ್ನು ನಟಿ ತಾರಾ ಮಾತನಾಡಿ, ಪ್ರತಿ ವರ್ಷ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯಿತು ಎಂಬುದನ್ನು ಕೇಳುತ್ತಿದ್ದೇವೆ. ಈ ವಿಚಾರದಲ್ಲಿ ಎಲ್ಲರು ತಮ್ಮ ಸುರಕ್ಷತೆಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಭಾರತೀಯ ಸಂಸ್ಕೃತಿಯನ್ನು ಇಡೀ ಪ್ರಪಂಚವೇ ಕೈ ಎತ್ತಿ ಮುಗಿಯುವ ಈ ಸಂದರ್ಭದಲ್ಲಿ ನಾವು ಮತ್ತೊಬ್ಬರ ಬಳಿ ಕೈ ತೋರಿಸಿ ಕೊಳ್ಳುವಂತಗಬಾರದು. ಈ ಬಗ್ಗೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹೊಸ ವರ್ಷವನ್ನು ಸಂಭ್ರದಿಂದ ಆಚರಿಸೋಣ. ನಿಯಮದೊಂದಿಗೆ ನಮ್ಮ ಸಂಸ್ಕರ, ಸಂಸ್ಕೃತಿ ಜತೆ ಹೊಸ ವರ್ಷವನ್ನು ಬರಮಾಡಿಕೊಳ್ಳೋಣ ಎಂದು ಹೇಳಿದ್ದಾರೆ.

ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯಿಸಿ, ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಪೊಲೀಸರಿಗೆ ತೊಂದರೆ ಕೊಡುವುದು ಮಾತ್ರವಲ್ಲ, ನಮಗೆ ನಾವೇ ತೊಂದರೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳಬಾರದು. ಸಂಚಾರ ಪೊಲೀಸರ ಜತೆ ಸಹಕರಿಸುವ ಮೂಲಕ ಹೊಸ ವರ್ಷಾಚರಣೆ ನಡೆಯಲಿ. ಅದೇ ಹೊಸವರ್ಷ ನಿಜವಾದ ಹರ್ಷ ಎಂದಿದ್ದಾರೆ.

click me!