ರಾಜಕೀಯ ಹುಟ್ಟು ನೀಡಿದ ಪುತ್ತೂರು ಕೊಂಡಿ ಕಳೆದುಕೊಂಡರೆ ಸದಾನಂದ ಗೌಡ?

By Web DeskFirst Published Oct 22, 2018, 9:58 AM IST
Highlights

ಹಾಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ತಮಗೆ ರಾಜಕೀಯ ಹುಟ್ಟು ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ಪುತ್ತೂರು :  ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದ ಹಾಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ತಮಗೆ ರಾಜಕೀಯ ಹುಟ್ಟು ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನೊಂದಿಗಿನ ಕೊಂಡಿಯನ್ನು ಕಡಿದುಕೊಂಡರೇ? ಹೀಗೊಂದು ಪ್ರಶ್ನೆ ಇದೀಗ ಕೇಳಿ ಬಂದಿದೆ. 

ಇದಕ್ಕೆ ಮುಖ್ಯ ಕಾರಣ, ನಗರದ ಹೊರವಲಯದಲ್ಲಿದ್ದ ತನ್ನ ಮನೆಯನ್ನು ಡೀವಿ ಮಾರಾಟ ಮಾಡಿರುವುದು. ಪುತ್ತೂರಿನ ಶಾಸಕರಾಗಿ, ದಕ್ಷಿಣ ಕನ್ನಡ ಮತ್ತು ಉಡುಪಿ-ಚಿಕ್ಕಮಗಳೂರು ಸಂಸದರಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ, ಪ್ರಸ್ತುತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಕೇಂದ್ರ ಸರ್ಕಾರದ ಪ್ರಭಾವಿ ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದ ಕೀರ್ತಿ ಇವರದು. ಈ ಎಲ್ಲಾ ಅವಧಿಗಳಲ್ಲೂ ಪುತ್ತೂರಿನ ಮತದಾರರಾಗಿಯೇ ಉಳಿದಿದ್ದ ಅವರು ಇದೀಗ ತಮ್ಮ ಮನೆಯನ್ನು ಮಾರಾಟ ಮಾಡಿರುವುದು ಸಾರ್ವಜನಿಕರಲ್ಲಿ ಬಹಳಷ್ಟುಚರ್ಚೆಗೆ ಗ್ರಾಸವಾಗಿದೆ.

ಮೂಲತಃ ಸುಳ್ಯದವರಾದ ಸದಾನಂದ ಗೌಡರು ಪುತ್ತೂರು ಕ್ಷೇತ್ರದಲ್ಲಿ ಎರಡನೇ ಬಾರಿ ಶಾಸಕರಾದ ಬಳಿಕ ನಗರದ ಹಾರಾಡಿಯಲ್ಲಿರುವ 13 ಸೆಂಟ್ಸ್‌ ನಿವೇಶನ ಖರೀದಿಸಿ ಮನೆ ನಿರ್ಮಿಸಿದ್ದರು. ಮನೆಗೆ ತನ್ನ ತಾಯಿ ‘ಕಮಲ’ ಅವರ ಹೆಸರಿಟ್ಟಿದ್ದರು. ಬಿಜೆಪಿ ಚಿಹ್ನೆಯೂ ಕಮಲವೇ ಆಗಿರುವುದರಿಂದ ರಾಜಕೀಯವಾಗಿ ಬೆಳೆಸಿದ ಪಕ್ಷವನ್ನೂ ಮನೆ ಹೆಸರು ನೆನಪಿಸುತ್ತಿತ್ತು. ಪುತ್ತೂರಿನಲ್ಲಿ ಅವರು ಎರಡನೇ ಅವಧಿಯ ಶಾಸಕರಾಗಿದ್ದ ವೇಳೆ ಜಾಗ ಖರೀದಿಸಿ ಈ ನೂತನ ಮನೆಯನ್ನು ನಿರ್ಮಿಸಿದ್ದರು. ಅದನ್ನೀಗ ಉಪ್ಪಿನಂಗಡಿಯ ವ್ಯಕ್ತಿಯೊಬ್ಬರಿಗೆ 1.25 ಕೋಟಿ ರು.ಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.

click me!