
ಬೆಂಗಳೂರು(ಜ.27): ಪ್ಲಾಟ್ ಹಾಗೂ ಸೈಟ್ ನೀಡುವುದಾಗಿ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿ ವಂಚಿಸಿರುವ ಸಚಿನ್ ನಾಯಕ್ ಕೆಲ ಗ್ರಾಹಕರ ಮೇಲೆ ಹಲ್ಲೆ ಕೂಡ ಮಾಡಿಸಿದ್ದಾನೆ. ಇತ್ತ ಹಣವನ್ನೂ ಕಳೆದುಕೊಂಡು, ಸಚಿನ್ ನಾಯಕ್ ಚೇಲಾಗಳಿಂದ ಹಲ್ಲೆಗೊಳಗಾದರೂ, ಅಮಾಯಕರಿಗೆ ಹಣ ಮಾತ್ರ ಸಿಗುತ್ತಿಲ್ಲ. 420 ಸಚಿನ್ ನಾಯಕ್ನಿಂದ ನೊಂದ ಮತ್ತೊಂದು ಕುಟುಂಬದ ಸ್ಟೋರಿ ಇಲ್ಲಿದೆ.
ಟಿಜಿಎಸ್, ಡ್ರೀಮ್ಸ್ ಜಿಕೆ ಕಂಪನಿಗಳ ಮೂಲಕ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಸಚಿನ್ ನಾಯಕ್ ಪುಂಡಾಟಿಕೆಗೆ ಕೊನೆಯಿಲ್ಲದಂತಾಗಿದೆ. ಸಚಿನ್ ನಾಯಕ್ನ ಬಣ್ಣದ ಮಾತಿಗೆ ಬೆರಗಾಗಿ ಲಕ್ಷ ಲಕ್ಷ ರೂಪಾಯಿ ಕೊಟ್ಟು ಸಾವಿರಾರು ಮಂದಿ ಕೈಸುಟ್ಟುಕೊಂಡಿದ್ದಾರೆ. ಸೈಟ್ ಅಥವಾ ಮನೆ ಸಿಗಲ್ಲ ಅಂತ ಗೊತ್ತಾದ ಕೂಡಲೇ ಹಣ ಹಿಂದಿರುಗಿಸುವಂತೆ ಕೇಳಲು ಹೋದ ಜನರಿಗೆ ಸಚಿನ್ ನಾಯಕ್ ಗೂಂಡಾಗಳನ್ನು ಬಿಟ್ಟು ಹಲ್ಲೆ ನಡೆಸಿದ್ದಾನೆ.
ರಾಜಾಜಿನಗರ ನಿವಾಸಿಯಾಗಿರುವ ಇವರು ಕೆಂಗೇರಿ ಬಳಿ ಸೈಟ್ ಖರೀದಿಗಾಗಿ ನಾಗರತ್ಮಮ್ಮ ಎಂಬವರು ಡ್ರೀಮ್ಸ್ ಜಿ.ಕೆ ಕಂಪನಿಗೆ 5 ಲಕ್ಷ ರೂಪಾಯಿ ನೀಡಿದ್ದರು. ಹಣ ನೀಡಿದ ನಂತರ ಸಚಿನ್ ನಾಯಕ್ ಸರ್ಕಾರಿ ಭೂಮಿ ತೋರಿಸಿ ವಂಚಿಸುತ್ತಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ ಹಣ ಹಿಂದಿರುಗಿಸುವಂತೆ ಕಚೇರಿಗೆ ಅಲೆದಾಡಿದ್ದಾರೆ. ಇಂದು ಬಾ, ನಾಳೆ ಬಾ ಎಂದು ಅಲೆದಾಡಿಸಿದ ಸಿಬ್ಬಂದಿ , ಕೊನೆಗೆ ಎಲ್ಲರೂ ಸೇರಿ ನಾಗರತ್ನಮ್ಮ ಹಾಗೂ ಅವರ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ.
ಇನ್ನು ಈ ಬಗ್ಗೆ ದೂರು ನೀಡಲು ಠಾಣೆಗೆ ತೆರಳಿದರೆ ಪೊಲೀಸರು ದೂರು ಪಡೆಯದೇ ಹಲ್ಲೆಗೊಳಗಾದವರನ್ನೇ ಹೆದರಿಸಿ ಕಳುಹಿಸಿದ್ದಾರೆ ಎಂದು ನಾಗರತ್ನಮ್ಮ ಆರೋಪಿಸಿದ್ದಾರೆ. ಸಚಿನ್ ನಾಯ್ಕ್ ಕಚೇರಿಯಲ್ಲಿ ಹಲ್ಲೆ ನಡೆಸಿದ ದೃಶ್ಯಗಳು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದರೂ, ಅವುಗಳನ್ನು ಪೊಲೀಸರಿಗೆ ನೀಡದೇ ನಾಶ ಮಾಡಿದ್ದಾನೆ. ಅಲ್ಲದೆ, ನಾಗರತ್ನಮ್ಮ ಅವರ ಮಗನ ಮೊಬೈಲ್ ಕಿತ್ತುಕೊಂಡ ಸಿಬ್ಬಂದಿ ಫೂಟೇಜ್ ಡಿಲೀಟ್ ಮಾಡಿದ್ದಾರಂತೆ. ಹಣ ಕಳೆದುಕೊಂಡಿದ್ದಲ್ಲದೆ, ಆತನಿಂದ ಹಲ್ಲೆಗೆ ಒಳಗಾದರೂ ನ್ಯಾಯ ಸಿಗುತ್ತಿಲ್ಲ ಎನ್ನುವುದು ನಾಗರತ್ನಮ್ಮ ಕುಟುಂಬಸ್ಥರ ಅಳಲು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.