ವೇಮುಲ ಕುಟುಂಬಕ್ಕೆ ಕೈ ಕೊಟ್ಟ ಮುಸ್ಲೀಂ ಲೀಗ್

First Published Jun 19, 2018, 11:50 AM IST
Highlights

 ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ ಅವರಿಗೆ ಮುಸ್ಲಿಂ ಲೀಗ್ ಸೇರಿದಂತೆ ಕೆಲವು ಪಕ್ಷಗಳು ಹಣ ನೀಡುವುದಾಗಿ ಹೇಳಿ ವಂಚಿಸಿದ ಆರೋಪ ಕೇಳಿಬಂದಿದೆ. 

ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ ಅವರಿಗೆ ಮುಸ್ಲಿಂ ಲೀಗ್ ಸೇರಿದಂತೆ ಕೆಲವು ಪಕ್ಷಗಳು ಹಣ ನೀಡುವುದಾಗಿ ಹೇಳಿ ವಂಚಿಸಿದ ಆರೋಪ ಕೇಳಿಬಂದಿದೆ. ಸ್ವಂತದ್ದೊಂದು ಮನೆ ಕಟ್ಟಿಸಲು ಹಾಗೂ ಬಡ ದಲಿತ ವಿದ್ಯಾರ್ಥಿಗಳಿಗೆ ಸಹಾಯ ಮಾಡ ಬಯಸಿರುವ ತಮಗೆ 20 ಲಕ್ಷ ರು. ನೀಡುವುದಾಗಿ ಹೇಳಿ ಮುಸ್ಲಿಂ ಲೀಗ್‌ನವರು ಈಗ ಸುಮ್ಮನಾಗಿದ್ದಾರೆ ಎಂದು ಖುದ್ದು ರಾಧಿಕಾ ಆರೋಪಿಸಿದ್ದಾರೆ.

ಮುಸ್ಲಿಂ ಲೀಗ್‌ನವರು ರೋಹಿತ್ ಸಾವನ್ನಪ್ಪಿದ ನಂತರ ನನ್ನನ್ನು ಕೇರಳದಲ್ಲಿ ಪಕ್ಷದ ಪ್ರಚಾರಕ್ಕೆ ವ್ಯಾಪಕವಾಗಿ ಬಳಸಿಕೊಂಡರು. ನಾನು, ನನ್ನ ಸೊಸೆ ಮಗು ಹೆತ್ತ ಸಂದರ್ಭದಲ್ಲಿ ಊರಿಗೆ ಹೋಗಲು ಇಚ್ಛಿಸಿದರೂ ನನ್ನನ್ನು  ಬಿಡದೇ ತಮ್ಮ ಪ್ರಚಾರ ಕಾರ್ಯಗಳಲ್ಲಿ ಭಾಷಣ ಮಾಡಿಸಿದರು. 20  ಲಕ್ಷ ರು. ಮೌಲ್ಯದ ಚೆಕ್ ನೀಡುವುದಾಗಿ ಅನೇಕ ದಿನಗಳಿಂದ ಸತಾಯಿಸಿದರು. ಆದರೆ ಆ ಪಕ್ಷದ ಮುಖಂಡ ಸಿ.ಕೆ. ಸುಬೈರ್ ಅವರು ಹಣ ಕೊಡುವುದಾಗಿ ನೀಡಿದ ಭರವಸೆಯನ್ನು ಈಡೇರಿಸದೇ ಸುಮ್ಮನಾಗಿಬಿಟ್ಟಿದ್ದಾರೆ. 

ಫೋನ್ ಕರೆಗಳನ್ನೂ ಸ್ವೀಕರಿಸುತ್ತಿಲ್ಲ ಎಂದು ರಾಧಿಕಾ ಅವರು ಮಾಧ್ಯಮಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮಹಿಳಾ ಸಂಘಟನೆಗಳು ಹಾಗೂ ಕಾರ್ಯಕರ್ತರ ಒತ್ತಡದಿಂದ ಮುಸ್ಲಿಂ ಲೀಗ್ 2.5 ಲಕ್ಷ ರು.ನ 2 ಚೆಕ್ ನೀಡಿತಾದರೂ ಒಂದು ಬೌನ್ಸ್ ಆಯಿತು ಎಂದೂ ಆವರು ಆಪಾದಿಸಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸುಬೈರ್, 2.5 ಲಕ್ಷ ರು. ಮೌಲ್ಯದ 2 ಚೆಕ್‌ಗಳನ್ನು ನೀಡಿದ್ದು ಮುಂಗಡ ಮಾತ್ರ. ಈ ಪೈಕಿ 1 ಚೆಕ್ಕನ್ನು ರಾಧಿಕಾ ನಗದೀಕರಿಸಿಕೊಂಡಿದ್ದಾರೆ. ಉಳಿದ 2.5 ಲಕ್ಷ ರು.

ಚೆಕ್ಕು, ಬರವಣಿಗೆಯಲ್ಲಿನ ಕೆಲವು ವ್ಯತ್ಯಾಸಗಳ ಕಾರಣ ಬೌನ್ಸ್ ಆಗಿತ್ತು. ಇದಕ್ಕಾಗಿ ವಿಷಾದವಿದೆ. ಹೊಸ ಚೆಕ್ಕನ್ನು ಅವರಿಗೆ ಕಳಿಸುತ್ತೇವೆ. ಅವರು ಮನೆ ಕೊಳ್ಳುವ ಕೆಲವು ಪ್ರಕ್ರಿಯೆ ಪೂರ್ಣಗೊಂಡ ನಂತರ 10 ಲಕ್ಷ ಹಣ ಕೊಡುತ್ತೇವೆ. ಒಟ್ಟು ೧೫ ಲಕ್ಷ ರು.ಗಳನ್ನು ರಾಧಿಕಾ ಅವರಿಗೆ ತೆಗೆದಿರಿಸಿದ್ದು ಮಾತಿನಿಂದ ಹಿಂದೆ ಸರಿಯಲ್ಲ ಎಂದಿದ್ದಾರೆ.

click me!