ಲಂಡನ್‌ನ ‘ಅಕ್ರಮ ಫ್ಲ್ಯಾಟ್‌’ಗೆ ವಾದ್ರಾ ಮಾಲೀಕ!

By Web DeskFirst Published Jan 7, 2019, 8:27 AM IST
Highlights

ಇ.ಡಿ. ಸ್ಫೋಟಕ ಆರೋಪ| ಅಕ್ರಮ ಹಣದಿಂದ ಖರೀದಿಯಾದ ಫ್ಲ್ಯಾಟ್‌ ಇದು| ಈ ಪ್ರಕರಣದಲ್ಲಿ ವಾದ್ರಾ ಆಪ್ತ ಅರೋರಾ ಪ್ರಮುಖ ಸಾಕ್ಷಿ| ಅರೋರಾ ವಿರುದ್ಧ ಜಾಮೀನುರಹಿತ ವಾರಂಟ್‌ ಹೊರಡಿಸಿ| ದಿಲ್ಲಿ ಕೋರ್ಟ್‌ಗೆ ಇ.ಡಿ. ಕೋರಿಕೆ

ನವದೆಹಲಿ[ಜ.07]: ಉದ್ಯಮಿ ರಾಬರ್ಟ್‌ ವಾದ್ರಾ ವಿರುದ್ಧ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮಹತ್ವದ ತಿರುವು ಲಭಿಸಿದ್ದು, ವಾದ್ರಾ ಅವರು ಲಂಡನ್‌ನಲ್ಲಿ ಫ್ಲ್ಯಾಟ್‌ ಒಂದರ ಫಲಾನುಭವಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಆರೋಪಿಸಿದೆ. ಇದು ವಾದ್ರಾ ಅವರನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆ ಇದೆ.

ಶನಿವಾರ ಈ ಸಂಬಂಧ ದಿಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ನಿರ್ದೇಶನಾಲಯ, ‘ಲಂಡನ್‌ನ ಬ್ರ್ಯಾನ್‌ಸ್ಟನ್‌ ಚೌಕದಲ್ಲಿ 1.9 ದಶಲಕ್ಷ ಪೌಂಡ್‌ ಮೌಲ್ಯದ ಫ್ಲ್ಯಾಟ್‌ಗೆ ವಾದ್ರಾ ಅವರು ಅಕ್ಷರಶಃ ಒಡೆಯರಾಗಿದ್ದಾರೆ. ಈ ಪ್ರಕರಣ ಸಂಬಂಧ ವಾದ್ರಾ ಅವರ ಆಪ್ತ ಮನೋಜ್‌ ಅರೋರಾ ವಿರುದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಬೇಕು’ ಎಂದು ಕೋರಿದೆ. ಈಗಾಗಲೇ ಆರೋರಾ, ದಿಲ್ಲಿಯಲ್ಲಿ ಅವರ ನಿವಾಸದ ಮೇಲೆ ಇ.ಡಿ. ದಾಳಿ ನಡೆಸಿದಾಗಿನಿಂದ ನಾಪತ್ತೆಯಾಗಿದ್ದಾರೆ.

ದುಬೈ ಮೂಲಕ ಹರಿಸಲಾದ ಅಕ್ರಮ ಹಣದ ಮೂಲಕ ಲಂಡನ್‌ನಲ್ಲಿಯ ಈ ಫ್ಲ್ಯಾಟ್‌ ಖರೀದಿಸಲಾಗಿದೆ. ಈ ವ್ಯವಹಾರದಲ್ಲಿ ಅರೋರಾ ಪಾತ್ರ ಹಿರಿದಾಗಿದ್ದು, ಅವರು ಈ ಪ್ರಕರಣದ ಮಹತ್ವದ ಸಾಕ್ಷಿ ಎಂದು ಇ.ಡಿ. ವಾದಿಸಿದೆ.

‘ಮೊದಲು ಈ ಫ್ಲ್ಯಾಟನ್ನು ಪರಾರಿಯಾರುವ ರಕ್ಷಣಾ ಡೀಲರ್‌ ಸಂಜಯ ಭಂಡಾರಿ 1.9 ದಶಲಕ್ಷ ಪೌಂಡ್‌ಗೆ ಖರೀದಿ ಮಾಡಿದ್ದ. ನಂತರ ಇದನ್ನು ವಾದ್ರಾ ನಿಯಂತ್ರಣದ ಕಂಪನಿಗೆ ಇದೇ ಮೊತ್ತಕ್ಕೆ ಮಾರಾಟ ಮಾಡಲಾಯಿತು. 65,900 ಪೌಂಡ್‌ ತೆತ್ತು ಬಂಗಲೆಯ ಜೀರ್ಣೋದ್ಧಾರ ಮಾಡಿದ್ದರೂ, ಅದೇ ಮೊತ್ತಕ್ಕೆ ವಾದ್ರಾ ಕಂಪನಿಗೆ ಫ್ಲ್ಯಾಟನ್ನು ಭಂಡಾರಿ ಮಾರಾಟ ಮಾಡಿದ’ ಎಂದು ಇಡೀ ವಹಿವಾಟಿನ ಬಗ್ಗೆ ಇ.ಡಿ. ಸಂದೇಹ ವ್ಯಕ್ತಪಡಿಸಿದೆ.

click me!