ಲಾಲು ಪುತ್ರರ ಜಗಳ ಹಾಗೂ ಮಾತು ಕೇಳದ ಅಖಿಲೇಶ

By Web DeskFirst Published Jul 31, 2018, 5:52 PM IST
Highlights
  • ಆರ್ ಜೆಡಿಯಲ್ಲಿ ಶುರುವಾಗಿದೆ  ತೇಜಸ್ವಿ ಮತ್ತು ತೇಜಪ್ರತಾಪ್ ಜಗಳ
  • ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಪಕ್ಷ ಕೂಡ ಇಕ್ಕಟ್ಟಿನಲ್ಲಿ 

ಯಾದವ ಕುಟುಂಬದಲ್ಲಿ ಕಲಹ ಎನ್ನುವುದು ಕೃಷ್ಣನ ಕಾಲದಿಂದಲೂ ಇದ್ದದ್ದೇ. ಈಗ ಲಾಲು ಯಾದವ್ ಪುತ್ರರಾದ ತೇಜಸ್ವಿ ಮತ್ತು ತೇಜಪ್ರತಾಪ್ ಯಾದವ್ ನಡುವೆ ಸಣ್ಣದಾಗಿ ಕಿಡಿ ಹೊತ್ತಿಕೊಂಡಿದೆ ಎನ್ನುವ ಸುದ್ದಿಗಳಿವೆ. ಅದನ್ನು ಕೇಳಿ, ಜೈಲಿನಲ್ಲಿರುವ ಲಾಲು ಕೂಡ ಆತಂಕಿತರಾಗಿದ್ದಾರೆ. ತಮ್ಮ ತೇಜಸ್ವಿಗೆ ಪಕ್ಷದ ಚುಕ್ಕಾಣಿ ಕೊಟ್ಟು ತನ್ನನ್ನು ಅವಮಾನಿಸಲಾಗಿದೆ ಎಂದು ತೇಜಪ್ರತಾಪ್ ತಾಯಿ ರಾಬಡಿ ದೇವಿ ಬಳಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇಬ್ಬರು ಅಣ್ಣ ತಮ್ಮಂದಿರ ನಡುವೆ ಬಹಿರಂಗ ವೇದಿಕೆ ಮೇಲೆ ಒಂದೆರಡು ಜಗಳಗಳು ಆಗಿರುವುದು ತಂದೆ ಲಾಲು ಚಿಂತೆಗೆ ಮುಖ್ಯ ಕಾರಣ.

ಮಾತು ಕೇಳದ ಅಖಿಲೇಶ
ಒಂದು ಕಾಲದಲ್ಲಿ ತಂದೆ ಮುಲಾಯಂರನ್ನು ಎದುರು ಹಾಕಿ ಕೊಂಡಾಗ ಚಿಕ್ಕಪ್ಪ ರಾಮಗೋಪಾಲ್ ಯಾದವ್ ಹೇಳಿದ್ದಕ್ಕೆಲ್ಲ ಹೂಂಗುಟ್ಟುತ್ತಿದ್ದ ಅಖಿಲೇಶ ಯಾದವ್ ಈಗ ಅವರನ್ನು ಪಕ್ಕಕ್ಕೆ ಇಟ್ಟಿದ್ದಾರೆ. ಅಖಿಲೇಶ್‌ಗೋಸ್ಕರ ಮುಲಾಯಂರಿಂದ ದೂರಹೋದ ಪ್ರೊಫೆಸರ್ ರಾಮಗೋಪಾಲ್ ಈಗ ಖುದ್ದು ಅಖಿಲೇಶ್ ತನ್ನ ಮಾತು ಕೇಳುತ್ತಿಲ್ಲ ಎಂದು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ನಾನು ಏನೇ ಹೇಳಿದರೂ ಐಸೆ ನಹೀ ಹೋಗಾ ಚಾಚಾಜಿ ಎನ್ನುತ್ತಾರೆ ಎಂದು ಪ್ರೊಫೆಸರ್ ಬಹಳವೇ ಬೇಸರಗೊಂಡಿದ್ದಾರೆ. ಅಪ್ಪ ಮಕ್ಕಳ, ಗಂಡ ಹೆಂಡತಿಯರ ಜಗಳದಲ್ಲಿ ಮಧ್ಯೆ ಹೋಗಬಾರದು ಎಂಬುದು ಸುಮ್ಮನೇ ಅಲ್ಲ.

[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]

click me!