
ಬೆಂಗಳೂರು : ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತದಿಂದ 11 ಮಂದಿ ಸಾವಿಗೀಡಾದ ಪ್ರಕರಣ ಸಂಬಂಧ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಅರ್ಜಿ ಸಂಬಂಧ ನ್ಯಾಯಾಲಯಕ್ಕೆ ಅಗತ್ಯ ಸಲಹೆ ಹಾಗೂ ನೆರವು ನೀಡಲು ಹಿರಿಯ ವಕೀಲೆ ಸುಶೀಲಾ ಅವರನ್ನು ಎಮಿಕಸ್ ಕ್ಯೂರಿಯಾಗಿ (ಕೋರ್ಟ್ ಸಹಾಯಕರು) ಹೈಕೋರ್ಟ್ ನೇಮಿಸಿದೆ.
ಕಾಲ್ತುಳಿತ ಘಟನೆ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೋಮವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಹಿರಿಯ ವಕೀಲೆ ಸುಶೀಲಾ ಅವರನ್ನು ಎಮಿಕಸ್ ಕ್ಯೂರಿಯಾಗಿ ನೇಮಿಸಿದ ನ್ಯಾಯಪೀಠ, ಅವರಿಗೆ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳ ಪ್ರತಿ ಹಾಗೂ ಅದರ ದಾಖಲೆಗಳು, ಸರ್ಕಾರ ಸಲ್ಲಿಸಿರುವ ವಸ್ತುಸ್ಥಿತಿ ವರದಿ ಮಾಹಿತಿ ಒದಗಿಸುವಂತೆ ರಿಜಿಸ್ಟ್ರಾರ್‌ಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ವಕೀಲ ರಮೇಶ್ ನಾಯ್ಕ್ ಮಧ್ಯಂತರ ಅರ್ಜಿ ಸಲ್ಲಿಸಿ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ ಮೃತಪಟ್ಟವರಿಗೆ ಸರ್ಕಾರ 25 ಲಕ್ಷ ರು. ಪರಿಹಾರ ನೀಡಿದೆ. ಆದರೆ, ರಾಜ್ಯದ ವಿವಿಧೆಡೆ ಸಿಡಿಲು ಬಡಿದು ಮೃತಪಟ್ಟವರಿಗೆ ಇಷ್ಟೊಂದು ಪರಿಹಾರ ನೀಡಿಲ್ಲ. ತುಮಕೂರಿನಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟವರಿಗೂ ಪರಿಹಾರ ನೀಡಿಲ್ಲ. ಹಾಗಾಗಿ, ಎಲ್ಲಾ ಘಟನೆಗಳ ಸಂಬಂಧ ಏಕರೂಪದ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಮನವಿ ಕುರಿತು ಸದ್ಯ ನ್ಯಾಯಾಲಯವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಇದೀಗ ಎಮಿಕಸ್ ಕ್ಯೂರಿ ನೇಮಕ ಮಾಡಲಾಗಿದೆ. ಮೊದಲಿಗೆ ಅವರ ಹಾಗೂ ಇತರೆ ಎಲ್ಲ ಅರ್ಜಿದಾರರ ವಾದ ಆಲಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಜು.1ಕ್ಕೆ ಮುಂದೂಡಿತು.
ಕಳೆದ ಜು.4ರಂದು ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟು, 56 ಜನ ಗಾಯಗೊಂಡಿದ್ದರು. ಈ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.