ಅಶ್ರಫ್ ಕೊಲೆ ಪ್ರಕರಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಪಿತೂರಿ ಸಾಬೀತಾದರೆ ಕಾನೂನು ಕ್ರಮಕ್ಕೆ ರೈ ಆಗ್ರಹ

By Suvarna Web DeskFirst Published Jun 27, 2017, 6:27 PM IST
Highlights
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷಗಳು, ಕೊಲೆಗಳು ನಡೆಯಲು ಸಂಘ ಪರಿವಾರದವರ ಪ್ರಚೋದನಕಾರಿ ಭಾಷಣಗಳು, ಪಿತೂರಿಗಳೇ ಕಾರಣ. ಇತ್ತೀಚೆಗೆ ಬೆಂಜನಪದವಿನಲ್ಲಿ ಆಟೋ ಚಾಲಕ ಮಹಮ್ಮದ್ ಅಶ್ರಫ್ ಕೊಲೆ ಪ್ರಕರಣದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪಿತೂರಿ ಸಾಬೀತಾದರೆ ಕಾನೂನು ಕ್ರಮ ಆಗಲೇಬೇಕು ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತೊಮ್ಮೆ ಗುಡುಗಿದ್ದಾರೆ.
ಕಲ್ಲಡ್ಕದಲ್ಲಿ ನಡೆದ ಗಲಭೆಗಳು, ವಿವಾದಗಳ ಬಳಿಕ ಮಂಗಳವಾರ ಜಿಲ್ಲೆಯಲ್ಲಿ ಪ್ರಥಮ ಸುದ್ದಿಗೋಷ್ಠಿ ನಡೆಸಿದ ಅವರು, ಸಂಘ ಪರಿವಾರದ ನಡವಳಿಕೆಗಳ ಕುರಿತು ತೀವ್ರ ವಾಗ್ದಾಳಿ ನಡೆಸಿದರು.
ಮಂಗಳೂರು (ಜೂ.27):  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷಗಳು, ಕೊಲೆಗಳು ನಡೆಯಲು ಸಂಘ ಪರಿವಾರದವರ ಪ್ರಚೋದನಕಾರಿ ಭಾಷಣಗಳು, ಪಿತೂರಿಗಳೇ ಕಾರಣ. ಇತ್ತೀಚೆಗೆ ಬೆಂಜನಪದವಿನಲ್ಲಿ ಆಟೋ ಚಾಲಕ ಮಹಮ್ಮದ್ ಅಶ್ರಫ್ ಕೊಲೆ ಪ್ರಕರಣದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪಿತೂರಿ ಸಾಬೀತಾದರೆ ಕಾನೂನು ಕ್ರಮ ಆಗಲೇಬೇಕು ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತೊಮ್ಮೆ ಗುಡುಗಿದ್ದಾರೆ.
ಕಲ್ಲಡ್ಕದಲ್ಲಿ ನಡೆದ ಗಲಭೆಗಳು, ವಿವಾದಗಳ ಬಳಿಕ ಮಂಗಳವಾರ ಜಿಲ್ಲೆಯಲ್ಲಿ ಪ್ರಥಮ ಸುದ್ದಿಗೋಷ್ಠಿ ನಡೆಸಿದ ಅವರು, ಸಂಘ ಪರಿವಾರದ ನಡವಳಿಕೆಗಳ ಕುರಿತು ತೀವ್ರ ವಾಗ್ದಾಳಿ ನಡೆಸಿದರು.
 
ಅಶ್ರಫ್ ಕೊಲೆಯನ್ನು ಸಂಘ ಪರಿವಾರದವರೇ ಮಾಡಿದ್ದಾರೆ ಎನ್ನುವುದಕ್ಕೆ ದಾಖಲೆಗಳಿವೆ. ಈ ಕೊಲೆಯ ಪ್ರಮುಖ ಸೂತ್ರಧಾರಿ ಭರತ್ ಎಂಬಾತ ಕಲ್ಲಡ್ಕ ಗಲಭೆಗಳ ಕುರಿತಾಗಿಯೇ ಪ್ರಭಾಕರ ಭಟ್ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಅವರ ಪಕ್ಕದಲ್ಲೇ ಕೂತಿದ್ದ. ಆ ಕೊಲೆ ಮಾಡಿದವರು ಭಟ್ ಮತ್ತು ಹಿಂದೂ ಮುಖಂಡರೊಂದಿಗೆ ಗುರುತಿಸಿಕೊಂಡಿದ್ದರು ಎನ್ನುವುದಕ್ಕೆ ಇದೇ ಸಾಕ್ಷಿ. ಅವರಿಬ್ಬರ ನಡುವಿನ ಸಂಬಂಧದ ಕುರಿತು ತನಿಖೆ ನಡೆಯಲಿದ್ದು, ಪಿತೂರಿ ನಡೆಸಿದ್ದು ಸಾಬೀತಾದರೆ ಶಿಕ್ಷೆ ಆಗಲೇಬೇಕು. ನಾನು ಈ ಕುರಿತು ಸಿಎಂಗೂ ಹೇಳಿದ್ದೇನೆ. ಪೊಲೀಸರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.
 
ಕೆಲ ಸಮಯದ ಹಿಂದೆ ಕರೋಪಾಡಿ ಗ್ರಾ.ಪಂ. ಉಪಾಧ್ಯಕ್ಷ ಜಲೀಲ್ ಕೊಲೆಯಲ್ಲೂ ಸಂಘ ಪರಿವಾರ ಭಾಗಿಯಾಗಿದೆ. ನಂತರ ಕಲ್ಲಡ್ಕದಲ್ಲಿ ಚೂರಿ ಇರಿತ ಮತ್ತಿತರ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಪದೇ ಪದೇ ಅಹಿತಕರ ಘಟನೆಗಳು ನಡೆಯುತ್ತಿವೆ. ಇವುಗಳ ಹಿಂದಿನ ಪಿತೂರಿದಾರರು ಎಷ್ಟೋ ದೊಡ್ಡ ವ್ಯಕ್ತಿಯಾಗಿದ್ದರೂ ಅವರನ್ನು ಬಂಧಿಸಿದರೆ ಮಾತ್ರ ಖಡಾಖಂಡಿತವಾಗಿಯೂ ಜಿಲ್ಲೆಯಲ್ಲಿ ಸಾಮರಸ್ಯ ನೆಲೆಸುತ್ತದೆ. ಪಿತೂರಿದಾರರು ತುಂಬ ಮಂದಿ ಇದ್ದಾರೆ. ಅಂಥವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸೂಚನೆ ನೀಡುತ್ತೇನೆ ಎಂದು ಸಚಿವ ರೈ ತಿಳಿಸಿದರು.
 
ನನ್ನೊಂದಿಗೆ ಕೊಲೆಗಡುಕರಿಲ್ಲ: ನಾನು ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಜಿಲ್ಲೆಯ ಮತೀಯ ಸಾಮರಸ್ಯಕ್ಕೆ ಒತ್ತು ನೀಡಿದ್ದೇನೆಯೇ ವಿನಾ ಒಂದೇ ಒಂದು ಬಾರಿಯೂ ಪ್ರಚೋದನಕಾರಿ ಭಾಷಣ ಮಾಡಿಲ್ಲ. ನನ್ನ ಸುತ್ತಮುತ್ತ ಕೊಲೆಗಡುಕರನ್ನು ಇಟ್ಟುಕೊಂಡಿಲ್ಲ. ನನ್ನ ಜತೆ ಕೊಲೆಗಾರರು ಇದ್ದದ್ದೇ ಆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
 
ನಾನೇ ಟಾರ್ಗೆಟ್: ಜಿಲ್ಲೆಯ ಬಹುಸಂಖ್ಯಾತ ಮತೀಯವಾದಿಗಳು ಮಾತ್ರವಲ್ಲದೆ ಅಲ್ಪಸಂಖ್ಯಾತ ಮತೀಯವಾದಿಗಳು ಕೂಡ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಅಪ್ಪಟ ಜಾತ್ಯತೀತವಾದಿ ಎನ್ನುವುದಕ್ಕೆ ಇದೇ ಸಾಕ್ಷಿ. ಕಲ್ಲಡ್ಕ ಗಲಭೆಗಳ ನಂತರ ಭೂಗತ ಜಗತ್ತಿನಿಂದ ಬೆದರಿಕೆ ಕರೆಗಳು ಬಂದಿದ್ದರೂ ಯಾರಿಗೂ ಹೇಳದೆ ನನ್ನಲ್ಲೇ ಇಟ್ಟುಕೊಂಡಿದ್ದೆ. ನನ್ನ ಜೀವ ಅಪಾಯದಲ್ಲಿದ್ದರೂ ಜಿಲ್ಲೆಯ ಸಾಮರಸ್ಯ ಉಳಿಸಲು ಯಾವತ್ತಿಗೂ ಬದ್ಧನಿದ್ದೇನೆ. ಯಾರು ಏನೇ ಹೇಳಲಿ. ನನ್ನಪ್ಪನೇ ಜಾತ್ಯತೀತ ನಿಲುವಿಗೆ ವಿರುದ್ಧವಿದ್ದರೆ ಅವರಿಗೂ ನಾನು ವಿರುದ್ಧವಾಗಿಯೇ ನಿಲ್ಲುತ್ತೇನೆ ಎಂದರು.
 
ರಾತ್ರೋರಾತ್ರಿ ನಾಯಕರಾದರು: ಕೋಮು ಪ್ರಚೋದನಕಾರಿ ಭಾಷಣ ಮಾಡಿ ರಾತ್ರೋರಾತ್ರಿ ನಾಯಕರಾದವರು ತುಂಬ ಮಂದಿ ಇದ್ದಾರೆ. ಆದರೆ ಅಭಿವೃದ್ಧಿ ಸಾಧಿಸಿ ನಾಯಕನಾಗಲು ವರ್ಷಾನುಗಟ್ಟಲೆ ಬೇಕು. ಸಂಘ ಪರಿವಾರಕ್ಕೆ ಅಭಿವೃದ್ಧಿ ಬೇಕಾಗಿಲ್ಲ. ಈಗ ಬಂಟ್ವಾಳ ಕ್ಷೇತ್ರವೊಂದರಲ್ಲೇ ದಾಖಲೆಯ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕೆಲಸ ಚಾಲ್ತಿಯಲ್ಲಿದ್ದು, ಕಾಮಗಾರಿಗಳು ಪೂರ್ತಿಯಾದರೆ ಇಡೀ ಕ್ಷೇತ್ರಕ್ಕೆ ನೀರಿನ ಸಮಸ್ಯೆಯೇ ಬಾರದು. ಅಭಿವೃದ್ಧಿಯ ಪಥದಲ್ಲಿ ನಾನು ಮುಂಚೂಣಿಯಲ್ಲಿರಬೇಕಾದರೆ ಇದನ್ನು ಸಹಿಸದ ಸಂಘ ಪರಿವಾರ ಜನರಲ್ಲಿ ಸಾಮರಸ್ಯ ಕದಡಿಸಿ ದಿಢೀರ್ ಪ್ರಚಾರ ಪಡೆಯಲು ಮುಂದಾಗಿದ್ದಾರೆ ಎಂದು ರಮಾನಾಥ ರೈ ಆರೋಪಿಸಿದರು.
ನಾನು ಇದೇ ಧರ್ಮ, ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ. ಧರ್ಮ ನನಗೆ ಹುಟ್ಟಿನಿಂದ ಸಿಕ್ಕಿದೆ. ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡೇ ಬಂದಿದ್ದೇನೆ. ಸಂಘ ಪರಿವಾರದ ಸರ್ಟಿಫಿಕೆಟ್ ಬೇಕಾಗಿಲ್ಲ ಎಂದರು.
 
ವದಂತಿ ನಂಬಬೇಡಿ: ಕಲ್ಲಡ್ಕ ಗಲಭೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಜನತೆ ಅವುಗಳನ್ನು ನಂಬದೆ ಸಂಯಮದಿಂದ ವರ್ತಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ವದಂತಿಗಳನ್ನು ಹರಡುವವರ ವಿರುದ್ಧ ಕ್ರಮ ಆಗಲೇಬೇಕಿದೆ. ಇಲ್ಲದಿದ್ದರೆ ಪ್ರಾಮಾಣಿಕರಿಗೆ ತೊಂದರೆ ತಪ್ಪಿದ್ದಲ್ಲ ಎಂದು ಸಚಿವರು ಹೇಳಿದರು.
ಸಚಿವರೊಂದಿಗೆ ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಮುಖಂಡರು ಇದ್ದರು.
 
ಎಸ್ಪಿ ಜತೆ ಮಾತನಾಡಿದ್ದಕ್ಕೆ ಬದ್ಧ
 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತುಕತೆ ನಡೆಸಿದ ವಿಡಿಯೊ ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ರೈ, ಕಲ್ಲಡ್ಕದಲ್ಲಿ ಗಲಭೆ ನಡೆದ ಬಳಿಕ ನಾನು ಬಂಟ್ವಾಳ ಪ್ರವಾಸಿ ಮಂದಿರದಲ್ಲಿದ್ದಾಗ ಕೆಲವು ಮಂದಿ ನಿಯೋಗ ಬಂದಿದ್ದರು. ಈ ಸಂದರ್ಭದಲ್ಲಿ ಎಸ್ಪಿಗೆ ಕರೆ ಮಾಡಿದ್ದೆ. ಆಗ ಕಲ್ಲಡ್ಕದಲ್ಲೇ ಇದ್ದ ಅವರು ನಾನೇ ಅಲ್ಲಿಗೆ ಬರುತ್ತೇನೆ ಎಂದಿದ್ದರು. ಆರಂಭದಲ್ಲಿ ಅವರೊಂದಿಗೆ ಏಕಾಂತದಲ್ಲಿ ಜಿಲ್ಲೆಯ ಸಾಮರಸ್ಯ ಕಾಪಾಡುವ ಕುರಿತು ಚರ್ಚೆ ನಡೆಸಿದ್ದೆ. ಬಳಿಕ ನಿಯೋಗದವರೊಂದಿಗೆ ಹಲವು ವಿಚಾರಗಳ ಕುರಿತು ಮಾತನಾಡಿದ್ದೆ. ಆದರೆ ಒಂದೇ ವಿಚಾರ ಮುಂದಿಟ್ಟುಕೊಂಡು ಚರ್ಚೆ ನಡೆಯಿತು. ಅಧಿಕಾರಿಯೊಂದಿಗೆ ನಡೆಸಿದ ಮಾತುಕತೆಗೆ ಬದ್ಧನೇ ಆಗಿದ್ದೇನೆ ಎಂದರು.
 
 

 

click me!