
ಬೆಂಗಳೂರು [ಜು.07] : ಸಚಿವ ಸಂಪುಟ ಪುನಾರಚನೆ ಮಾಡಿ ಎಲ್ಲಾ ಅತೃಪ್ತರಿಗೂ ಸಚಿವ ಸ್ಥಾನ ನೀಡಬೇಕು ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನಕ್ಕೆ ಬೇರೊಬ್ಬರನ್ನು ತರಬೇಕು.
ಇದು ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಮುಂದಿಟ್ಟಿರುವ ಪ್ರಮುಖ ಷರತ್ತು.
ಮೈತ್ರಿ ಸರ್ಕಾರದ ಉಳಿವಿಗೆ ಇದೀಗ ರಾಮಲಿಂಗಾ ರೆಡ್ಡಿ ಅವರ ಮನವೊಲಿಕೆ ಅತ್ಯಂತ ಮುಖ್ಯ. ಇದಕ್ಕೆ ಕಾರಣ ರಾಮಲಿಂಗಾ ರೆಡ್ಡಿ ಅವರೊಂದಿಗೆ ನಾಲ್ಕು ಮಂದಿ ಅತೃಪ್ತ ಶಾಸಕರು ಇದ್ದಾರೆ. ಮನವೊಲಿಕೆ ನಡೆದರೆ ರಾಮಲಿಂಗಾರೆಡ್ಡಿ ಸೇರಿದಂತೆ ಈ ಐವರ ಗುಂಪು ಮೈತ್ರಿಕೂಟಕ್ಕೆ ಹಿಂತಿರುಗುವ ಸಾಧ್ಯತೆಯಿದೆ. ಇಷ್ಟಾದರೆ ಅತೃಪ್ತರ ಬಣದ ಸಂಖ್ಯೆ ಕುಸಿದು ಮೈತ್ರಿಕೂಟದ ಸರ್ಕಾರಕ್ಕೆ ಉಂಟಾಗಿರುವ ಆತಂಕ ತಾತ್ಕಾಲಿಕವಾಗಿಯಾದರೂ ದೂರ ಸರಿಯುತ್ತದೆ ಎಂಬ ಭಾವನೆ ಕಾಂಗ್ರೆಸ್ ನಾಯಕರಲ್ಲಿದೆ.
ಈ ಹಿನ್ನೆಲೆಯಲ್ಲಿ ಖುದ್ದು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ತೀವ್ರ ಪ್ರಯತ್ನ ನಡೆಸಿದರು. ಆದರೆ, ರಾಮಲಿಂಗಾರೆಡ್ಡಿ ಅವರು ಸಚಿವ ಸಂಪುಟವನ್ನು ಪುನಾರಚನೆ ಮಾಡಬೇಕು ಹಾಗೂ ಬೆಂಗಳೂರು ಉಸ್ತುವಾರಿ ಖಾತೆಯನ್ನು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರಿಂದ ಹಿಂಪಡೆಯಬೇಕು ಎಂಬ ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ.
ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ, ಕಸ ವಿಲೇವಾರಿ ಗುತ್ತಿಗೆ ಸೇರಿದಂತೆ ಬೆಂಗಳೂರು ನಗರದ ವಿಚಾರಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಪರಮೇಶ್ವರ್ ಧೋರಣೆ ಬಗ್ಗೆ ರಾಮಲಿಂಗಾರೆಡ್ಡಿ ಅವರಿಗೆ ತೀವ್ರ ಅಸಮಾಧಾನವಿದೆ. ಇದೇ ವೇಳೆ ಲೋಕಸಭಾ ಚುನಾವಣೆ ನಂತರ ತಮ್ಮನ್ನು ಸಚಿವರನ್ನಾಗಿಸುವ ಭರವಸೆಯನ್ನು ಈಡೇರಿಸದ ಸಿದ್ದರಾಮಯ್ಯ ಅವರ ಬಗ್ಗೆಯೂ ಬೇಸರವಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಭೇಟಿ ಮಾಡಿದ ವೇಣುಗೋಪಾಲ್ ಅವರ ಬಳಿ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಅವರ ಧೋರಣೆಯ ಬಗ್ಗೆ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಬೆಂಗಳೂರು ನಗರದ ವಿಚಾರದಲ್ಲಿ ನಗರದ ಯಾವ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದ ಪರಮೇಶ್ವರ್ ಅವರ ಧೋರಣೆಯಿಂದ ನಗರದ ಶಾಸಕರು ಕಂಗೆಟ್ಟಿದ್ದಾರೆ. ಹೀಗಾಗಿ ಅವರನ್ನು ಬೆಂಗಳೂರು ಉಸ್ತುವಾರಿ ಹೊಣೆಯಿಂದ ಮುಕ್ತಗೊಳಿಸಬೇಕು. ಅತೃಪ್ತ ಶಾಸಕರೆಲ್ಲರಿಗೂ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯಬೇಕು ಎಂದು ಸವಾಲು ವಿಧಿಸಿದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.