ಹುತಾತ್ಮ ಯೋಧನಿಗೆ ಹೆಗಲು ಕೊಟ್ಟ ರಾಜನಾಥ ಸಿಂಗ್‌

By Web DeskFirst Published Feb 16, 2019, 9:33 AM IST
Highlights

ಸಿಆರ್‌ಪಿಎಫ್‌ನ 40 ಯೋಧರಿಗೆ ಅಂತಿಮ ನಮನ ಸಲ್ಲಿಸಲು ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರಕ್ಕೆ ಶುಕ್ರವಾರ ಆಗಮಿಸಿದ್ದ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಸೈನಿಕನೊಬ್ಬನ ಮೃತದೇಹವಿದ್ದ ಶವಪೆಟ್ಟಿಗೆಗೆ ಹೆಗಲು ಕೊಟ್ಟು ಭಾವೋದ್ವೇಗದ ವಿದಾಯ ಹೇಳಿದರು

ಶ್ರೀನಗರ: ಭಯೋತ್ಪಾದಕ ದಾಳಿಯಲ್ಲಿ ಮಡಿದ ಸಿಆರ್‌ಪಿಎಫ್‌ನ 40 ಯೋಧರಿಗೆ ಅಂತಿಮ ನಮನ ಸಲ್ಲಿಸಲು ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರಕ್ಕೆ ಶುಕ್ರವಾರ ಆಗಮಿಸಿದ್ದ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಸೈನಿಕನೊಬ್ಬನ ಮೃತದೇಹವಿದ್ದ ಶವಪೆಟ್ಟಿಗೆಗೆ ಹೆಗಲು ಕೊಟ್ಟು ಭಾವೋದ್ವೇಗದ ವಿದಾಯ ಹೇಳಿದರು. ಭಾರತ ಸರ್ಕಾರದ ಪ್ರತಿಷ್ಠಿತ ಹುದ್ದೆಯಲ್ಲಿದ್ದವರು ಈ ರೀತಿ ಹೆಗಲು ಕೊಟ್ಟಿದ್ದು ಬಲು ಅಪರೂಪದ ಪ್ರಸಂಗ ಎನ್ನಿಸಿಕೊಂಡಿತು.

ಹುತಾತ್ಮರಾದ 40 ಯೋಧರ ಕಳೇಬರಗಳನ್ನು ಶವಪೆಟ್ಟಿಗೆಯಲ್ಲಿಟ್ಟು, ತ್ರಿವರ್ಣ ಧ್ವಜ ಹೊದಿಸಲಾಗಿತ್ತು. ಈ ಶವಪೆಟ್ಟಿಗೆಗಳಿಗೆ ರಾಜನಾಥ ಸಿಂಗ್‌ ಅವರು ಹೂಗುಚ್ಛ ಇಟ್ಟು ನಮನ ಸಲ್ಲಿಸಿದರು. ಬಳಿಕ ಶವಪೆಟ್ಟಿಗೆಯನ್ನು ಹೆಗಲ ಮೇಲೆ ಇಟ್ಟುಕೊಂಡು ಟ್ರಕ್‌ಗೆ ಸಾಗಿಸಲು ನೆರವಾದರು. ಅಲ್ಲಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಶವ ಪೆಟ್ಟಿಗೆಗಳನ್ನು ಒಯ್ದು, ವಿಶೇಷ ವಿಮಾನದ ಮೂಲಕ ಯೋಧರ ತವರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು.

ರಾಜನಾಥ ಸಿಂಗ್‌ ಅವರ ಜತೆಗೇ ಜಮ್ಮು-ಕಾಶ್ಮೀರದ ಡಿಜಿಪಿ ದಿಲ್‌ಬಾಘ್‌ ಸಿಂಗ್‌ ಕೂಡ ಹೆಗಲು ಕೊಟ್ಟರು. ಈ ವೇಳೆ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌, ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ಹಾಗೂ ಸಿಆರ್‌ಪಿಎಫ್‌ ಮಹಾನಿರ್ದೇಶಕ ಆರ್‌.ಆರ್‌. ಭಟ್ನಾಗರ್‌ ಅವರು ಇದ್ದರು. ಟ್ರಕ್‌ಗೆ ಶವಪೆಟ್ಟಿಗೆಗಳನ್ನು ತುಂಬುವವರೆಗೂ ಈ ಎಲ್ಲ ಗಣ್ಯರು ಮೌನದಿಂದ ನಿಂತಿದ್ದರು.

ಕೆಚ್ಚೆದೆಯ ಸಿಆರ್‌ಪಿಎಫ್‌ ಯೋಧರ ಮಹಾ ಬಲಿದಾನವನ್ನು ದೇಶ ಮರೆಯುವುದಿಲ್ಲ. ಪುಲ್ವಾಮಾ ಹುತಾತ್ಮರಿಗೆ ಅಂತಿಮ ನಮನ ಸಲ್ಲಿಸಿದ್ದೇನೆ. ಅವರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ರಾಜನಾಥ ಸಿಂಗ್‌ ಅವರು ಈ ವೇಳೆ ಆಕ್ರೋಶದಿಂದ ನುಡಿದರು.

click me!