
ಬೆಂಗಳೂರು(ಮಾ.07): ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಅಕಾಲಿಕ ಮಳೆಯಾಗಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದೆ. ವರುಣನ ಆಗಮನದಿಂದ ಚಾಮರಾಜನಗರದ ಹಲವು ಕಡೆ ಹೊತ್ತಿ ಉರೀತಿದ್ದ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಂದಿದ್ರೆ ಸಿಡಿಲಿಗೆ ಇಬ್ಬರು ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಬಿಸಿಲಿ ತಾಪಕ್ಕೆ ತತ್ತರಿಸಿದ್ದ ಹೋಗಿದ್ದ ರಾಜ್ಯದಲ್ಲಿ ಮಳೆ ಸಿಂಚನವಾಗಿದೆ. ವರ್ಷದ ಮೊದಲ ಮಳೆ ತುಮಕೂರಲ್ಲಿ ಇಬ್ಬರನ್ನ ಬಲಿ ಪಡೆದಿದೆ. ಸಂಜೆ ಸುಮಾರು 5 ಗಂಟೆಗೆ ಶುರುವಾದ ಮಳೆ ಅರ್ಧ ಗಂಟೆಗಳ ಕಾಲ ಭರ್ಜರಿಯಾಗಿ ಸುರಿದಿದೆ. ಗುಬ್ಬಿ ತಾಲೂಕಿನ ಪೆಮ್ಮನಹಳ್ಳಿ ಗೇಟ್ ಬಳಿ ಆಲದ ಮರದ ಕೆಳಗೆ ನಿಂತಿದ್ದ ನಾಲ್ವರಿಗೆ ಸಿಡಿಲು ಬಡಿದಿದೆ. ಇದ್ರಿಂದ ಸ್ಥಳದಲ್ಲೇ 43 ವರ್ಷದ ಮಂಜುಳ, 13 ವರ್ಷದ ಭಾರತಿ ಸಾವಿಗೀಡಾಗಿದ್ದಾರೆ. ಮೃತ ಮಂಜುಮ್ಮ ತನ್ನ ಮೂವರು ಮಕ್ಕಳೊಂದಿಗೆ ಜಮೀನಿಗೆ ತೆರಳಿದ್ದ ಟೈಮ್ನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮತ್ತೊಂದೆಡೆ ಗುಬ್ಬಿಯ ಅನುಸುನಕುಂಟೆಯಲ್ಲಿ ಸಿಡಿಲಿನ ಅಬ್ಬರಕ್ಕೆ 9 ಮೇಕೆಗಳು ಸಾವಿಗೀಡಾಗಿವೆ. ಉಳಿದಂತೆ ಮಧುಗಿರಿ, ತಿಪಟೂರು, ಕುಣಿಗಲ್ ಭಾಗದಲ್ಲಿ ಮಳೆಯಾಗಿದ್ದು ಬಿಸಿಲನ ಝಳದಿಂದ ತತ್ತರಿಸಿದ ಜನ ಕೊಂಚ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದೆ. ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮೆಜೆಸ್ಟಿಕ್, ಮಲ್ಲೇಶ್ವರಂ, ಹೆಬ್ಬಾಳ, ರಾಜಾಜಿನಗರ, ಯಶವಂತಪುರ, ಸುಂಕದಕಟ್ಟೆ, ಜೆಪಿ ನಗರ, ಜಯನಗರ, ಯಲಹಂಕ ಸೇರಿ ಹಲವೆಡೆ ಸಾಧಾರಣ ಮಳೆಯಾಗಿದೆ. ಚಾಮರಾಜನಗರದ 3ನೇ ಕ್ರಾಸ್ ಹಾಗೂ ಸದಾಶಿವನಗರದಲ್ಲಿ ಮರಗಳು ನೆಲಕ್ಕೆ ಇರುಳಿವೆ. ಇದ್ರಿಂದಾಗಿ ಕೆಲ ಬೈಕ್ ಸೇರಿ ಕಾರುಗಳು ಜಖಂ ಆಗಿವೆ. ಬೆಂಗಳೂರು ಸೇರಿದಂತೆ ಕೋಲಾರ, ಮೈಸೂರು ಪ್ರದೇಶಗಳಲ್ಲಿ ಇವತ್ತೂ ತುಂತುರು ಮಳೆಯಾಗಲಿದೆ ಅಂತ ಹವಮಾನ ಇಲಾಖೆ ತಿಳಿಸಿದೆ.
ಈ ಮಧ್ಯೆ ಬಿರು ಬಿಸಿಲಿನಿಂದ ಬೇಸತ್ತಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಅಕಾಲಿಕ ಮಳೆ ಭಾರೀ ಖುಷಿ ತಂದಿದೆ. ಕೊಳ್ಳೇಗಾಲದ ಕುರಟ್ಟಿ ಹೊಸೂರು, ಕೌದಳ್ಳಿ, ರಾಮಾಪುರ, ಸಂತೇಮರಳ್ಳಿ, ಗುಂಡ್ಲುಪೇಟೆ ತಾಲೂಕಿನ ಬೇಗೂರು ಹಾಗೂ ಯಳಂದೂರು ಸುತ್ತಲಿನ ವಿವಿಧ ಗ್ರಾಮಗಳಲ್ಲಿ ಮಳೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ರಾತ್ರಿ ಜಿಟಿಜಿಟಿ ಮಳೆಯಾಗಿದೆ. ಇದ್ರಿಂದ ರಾತ್ರಿ ಬೈಕ್ ಸವಾರರು ಪರದಾಡುವಂತಾಯ್ತು ಉಳಿದಂತೆ ಮಂಡ್ಯ ಹಾಗೂ ರಾಮನಗರ ಜಿಲ್ಲೆಯಲ್ಲೂ ಸಣ್ಣದಾಗಿ ಮಳೆಯಾಗಿದೆ. ಒಟ್ನಲ್ಲಿ ವರ್ಷದ ಮೊದಲ ಮಳೆ ಚಾಮರಾಜನಗರ ಜಿಲ್ಲೆಯಲ್ಲಿ ಖುಷಿ ತಂದಿದ್ರೆ.. ತುಮಕೂರಲ್ಲಿ ಸೂತಕ ತರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.