ರೈಲು ಅಪಘಾತ: ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ - ಸಚಿವ ಸುರೇಶ್ ಪ್ರಭು ಹೇಳಿಕೆ

By Suvarna Web DeskFirst Published Nov 20, 2016, 5:57 AM IST
Highlights

ಈ ಘಟನೆಯಲ್ಲಿ 90ಕ್ಕೂ ಹೆಚ್ಚು ಜನರು ಮೃತ ಪಟ್ಟಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಪ್ರಮಾಣ ಇನ್ನೂ ಹೆಚ್ಚಾಗುವ ಅಪಾಯವಿದೆ ಎನ್ನಲಾಗಿದೆ.

ನವದೆಹಲಿ(ನ. 20): ಉತ್ತರಪ್ರದೇಶದ ಕಾನ್'ಪುರದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತ ಘಟನೆಯ ತನಿಖೆ ನಡೆಸಲು ರೈಲ್ವೆ ಸಚಿವ ಸುರೇಶ್ ಪ್ರಭು ಆದೇಶಿಸಿದ್ದಾರೆ. ಅಪಘಾತದ ಸ್ಥಳಕ್ಕೆ ಈಗಾಗಲೇ ರೈಲ್ವೆ ಸಂಚಾರಿ ವೈದ್ಯಕೀಯ ಘಟಕಗಳು ಧಾವಿಸಿದ್ದು, ಗಾಯಾಳುಗಳು ಹಾಗೂ ಸಂತ್ರಸ್ತರಿಗೆ ವೈದ್ಯಕೀಯ ನೆರವು ಒದಗಿಸಲಾಗುತ್ತಿದೆ. ಈ ವೇಳೆ, ಅಪಘಾತಕ್ಕೆ ಕಾರಣರಾದ ಯಾರನ್ನೂ ಸುಮ್ಮನೆ ಬಿಡುವುದಿಲ್ಲವೆಂದು ರೈಲ್ವೆ ಸಚಿವರು ಎಚ್ಚರಿಕೆ ನೀಡಿದ್ದಾರೆ. ಸುರೇಶ್ ಪ್ರಭು ಈಗಾಗಲೇ ಘಟನಾ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಇನ್ನು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೂಚನೆಯ ಮೇರೆಗೆ ವಾರಾಣಸಿ ಮತ್ತು ಲಕ್ನೋನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮೂರು ತಂಡಗಳು ಕಾನಪುರಕ್ಕೆ ಹೋಗಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಒಂದೊಂದು ತಂಡದಲ್ಲಿ 45 ಮಂದಿ ಸದಸ್ಯರಿದ್ದಾರೆನ್ನಲಾಗಿದೆ.

ಇದೇ ವೇಳೆ, ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಅಪಘಾತದಲ್ಲಿ ಮಡಿದವರ ಕುಟುಂಬಗಳಿಗೆ 8.5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಅಪಘಾತ ಹೇಗೆ?
ಇಂದೋರ್'ನಿಂದ ಪಾಟ್ನಾಗೆ ಹೊರಟಿದ್ದ ಎಕ್ಸ್'ಪ್ರೆಸ್ ರೈಲು ಭಾನುವಾರ ಬೆಳಗ್ಗೆ ಕಾನಪುರದ ಪುಖ್ರಯಾನ್ ಎಂಬಲ್ಲಿ ಹಳಿ ತಪ್ಪಿದೆ. ರೈಲಿನ 14 ಬೋಗಿಗಳು ಕೆಳಕ್ಕುರುಳಿವೆ. ಈ ಘಟನೆಯಲ್ಲಿ 90ಕ್ಕೂ ಹೆಚ್ಚು ಜನರು ಮೃತ ಪಟ್ಟಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಪ್ರಮಾಣ ಇನ್ನೂ ಹೆಚ್ಚಾಗುವ ಅಪಾಯವಿದೆ ಎನ್ನಲಾಗಿದೆ.

click me!