ಕಾನ್'ಪುರ್ ರೈಲು ದುರಂತಕ್ಕೆ ಕಾರಣವೇನು? ಇಲ್ಲಿದೆ ಪ್ರಾಥಮಿಕ ಮಾಹಿತಿ

By Suvarna Web DeskFirst Published Nov 20, 2016, 12:16 PM IST
Highlights

ಇಡೀ ರೈಲ್ವೆ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಹೊಸ ತಂತ್ರಜ್ಞಾನವನ್ನು ಅಳವಡಿಸಲು ಪ್ರಯತ್ನಿಸುತ್ತಿರುವ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಈ ಅವಘಡಗಳು ಹಿನ್ನಡೆ ತಂದಿವೆ.

ಲಕ್ನೋ(ನ. 20): ನೂರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಇಂದೋರ್-ಪಾಟ್ನಾ ಎಕ್ಸ್'ಪ್ರೆಸ್ ರೈಲು ದುರಂತಕ್ಕೆ ಹಳಿಯ ದೋಷವೇ ಕಾರಣ ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿದೆ. ರೈಲ್ವೆ ಹಳಿಯ ನಿರ್ವಹಣೆ ಸರಿಯಾಗಿ ಆಗದೇ ಅದು ಬಿರುಕುಬಿಟ್ಟಿದ್ದು ಭೀಕರ ರೈಲು ದುರಂತಕ್ಕೆ ಕಾರಣವಾಗಿರಬಹುದು ಎಂಬ ಪ್ರಾಥಮಿಕ ಮಾಹಿತಿಯು ಲಭ್ಯವಾಗಿದೆ.

ಎಲ್'ಎಚ್'ಬಿ ಬೋಗಿಗಳ ಕೊರತೆ:
ಹಳಿಯ ನಿರ್ವಹಣೆಯಲ್ಲಾದ ದೋಷವು ಅಪಘಾತಕ್ಕೆ ಕಾರಣವಾದರೆ, ಅಪಘಾತದಿಂದ ಹೆಚ್ಚು ಸಾವು-ನೋವು ಉಂಟಾಗಲು ಟ್ರೈನಿನಲ್ಲಿ ಎಲ್'ಎಚ್'ಬಿ ಬೋಗಿಗಳು ಇಲ್ಲದಿರುವುದು ಕಾರಣವೆನ್ನಲಾಗಿದೆ. ಲಿಂಕೆ ಹಾಫ್'ಮ್ಯಾನ್ ಬುಷ್(LHB) ಎಂಬ ಸಂಸ್ಥೆ ತಯಾರಿಸುವ ಸ್ಟೈನ್'ಲೆಸ್ ಸ್ಟೀಲ್'ನ ಬೋಗಿಗಳನ್ನು ಸಾಮಾನ್ಯವಾಗಿ ಅಳವಡಿಸಲಾಗುತ್ತದೆ. ಈ ಬೋಗಿಗಳಲ್ಲಿ ಹೆಚ್ಚು ಸುರಕ್ಷತಾ ವ್ಯವಸ್ಥೆ ಇರುತ್ತವೆ. ಹಳಿ ತಪ್ಪಿದಾಗ ಇವು ಉರುಳುರುಳಿ ಬೀಳುವುದಿಲ್ಲ. ಶಾಕ್ ತಡೆದುಕೊಳ್ಳುವಂಥ ಶಕ್ತಿ ಇದರಲ್ಲಿರುತ್ತದೆ. ಹೀಗಾಗಿ, ಕೆಳಗೆ ಬಿದ್ದರೂ ಹೆಚ್ಚು ಸಾವು-ನೋವು ಸಂಭವಿಸುವುದಿಲ್ಲ. ಆದರೆ, ಈ ಇಂದೋರ್-ಪಾಟ್ನಾ ಎಕ್ಸ್'ಪ್ರೆಸ್ ರೈಲಿನಲ್ಲಿ ಎಲ್'ಹೆಚ್'ಬಿ ಕೋಚ್'ಗಳಿರಲಿಲ್ಲ ಎಂದು ರೈಲ್ವೆ ಮೂಲಗಳು ತಿಳಿಸಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿನ್ನೆಯಷ್ಟೇ ಭಟಿಂಡಾ-ಜೋಧಪುರ ಪ್ಯಾಸೆಂಜರ್ ಟ್ರೈನು ಹಳಿ ತಪ್ಪಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿತ್ತು. ಎರಡು ದಿನಗಳಲ್ಲಿ ಎರಡು ದುರ್ಘಟನೆಗಳು ನಡೆದಿರುವುದು ರೈಲ್ವೆ ಇಲಾಖೆಯತ್ತ ಅನುಮಾನದ ದೃಷ್ಟಿ ನೆಡಲು ಕಾರಣವಾಗಿದೆ. ಇಡೀ ರೈಲ್ವೆ ವ್ಯವಸ್ಥೆಯಲ್ಲಿ ಬದಲಾವಣೆ ತಂದು ಹೊಸ ತಂತ್ರಜ್ಞಾನವನ್ನು ಅಳವಡಿಸಲು ಪ್ರಯತ್ನಿಸುತ್ತಿರುವ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಈ ಅವಘಡಗಳು ಹಿನ್ನಡೆ ತಂದಿವೆ. ಇತ್ತೀಚೆಗಷ್ಟೇ, ರೈಲ್ವೆ ಸಚಿವರು ಹಳಿಯ ನಿರ್ವಹಣೆಗೆ ಸಹಾಯವಾಗಲೆಂದು ಟ್ರ್ಯಾಕ್ ಮೇಂಟೆನೆನ್ಸ್ ಸರ್ವಿಸ್ ಎಂಬ ಹೊಸ ಸಾಫ್ಟ್'ವೇರನ್ನು ಅಳವಡಿಸಿದ್ದರು. ರೈಲ್ವೆ ಸುರಕ್ಷತೆ ಬಗ್ಗೆ ಹೆಚ್ಚು ಗಮನ ಕೊಡಲಾಗುವುದು ಎಂದು ಬಜೆಟ್'ನಲ್ಲೂ ವಿಶ್ವಾಸದಿಂದ ತಿಳಿಸಲಾಗಿತ್ತು.

ಇಂದೋರ್'ನಿಂದ ಪಾಟ್ನಾಗೆ ಹೋಗುತ್ತಿದ್ದ ಎಕ್ಸ್'ಪ್ರೆಸ್ ರೈಲು ಕಾನಪುರದ ಬಳಿ ಹಳಿ ತಪ್ಪಿ ಅಪಘಾತಕ್ಕೀಡಾಗಿತ್ತು. 14 ಬೋಗಿಗಳು ಉರುಳಿಬಿದ್ದಿದ್ದವು. ಈ ದುರ್ಘಟನೆಯಲ್ಲಿ 130ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹೆಚ್ಚು ಪ್ರಮಾಣದಲ್ಲಿ ಜನರು ಗಾಯಗೊಂಡಿದ್ದಾರೆನ್ನಲಾಗಿದೆ.

click me!