ಪೆಟ್ರೋಲಿಯಮ್ ಸಚಿವರ ಸೋದರನ ಕಂಪನಿ ಮೇಲೆ ರೇಡ್

By Suvarna Web DeskFirst Published Jan 15, 2017, 2:24 PM IST
Highlights

ಒಡಿಶಾದ ಬಿಜೆಡಿ ಸರಕಾರವು ವಿಚಕ್ಷಣಾ ದಳದ ಅಧಿಕಾರವನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದೆ.

ಭುವನೇಶ್ವರ್(ಜ. 15): ಕಲಬೆರಕೆ ಹಾಗೂ ಕಾಳಸಂತೆ ಮಾರಾಟದ ಆರೋಪ ಎದುರಾದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ವಿಚಕ್ಷಣಾ ದಳವು ಒಡಿಶಾ ರಾಜ್ಯಾದ್ಯಂತ ಹಲವಾರು ಪೆಟ್ರೋಲ್ ಪಂಪ್'ಗಳು ಹಾಗೂ ಗ್ಯಾಸ್ ಏಜೆನ್ಸಿಗಳ ಮೇಲೆ ರೇಡ್ ಮಾಡಿದೆ. ಕೋರಾಪುಟ್, ನವರಂಗಪುರ್, ಪುರಿ, ಭುವನೇಶ್ವರ್, ಬೆರ್ಹಾಂಪುರ್, ಬಲಸೋರ್, ಸಂಬಾಲ್'ಪುರ್, ಬರಗಢ್, ಅಂಗುಲ್ ಮತ್ತು ಕಟಕ್'ನಲ್ಲಿ ದಾಳಿಯಾಗಿದೆ. ಅಂಗುಲ್ ಜಿಲ್ಲೆಯ ತಲಚೇರ್'ನಲ್ಲಿರುವ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸೋದರರೊಬ್ಬರಿಗೆ ಸೇರಿದ ಗ್ಯಾಸ್ ಏಜೆನ್ಸಿ ಮೇಲೂ ರೇಡ್ ಆಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕೆಲ ಸ್ಥಳಗಳಲ್ಲಿ ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ ಎಂದು ವಿಚಕ್ಷಣ ಅಧಿಕಾರಿಗಳು ತಿಳಿಸಿದ್ದಾರೆನ್ನಲಾಗಿದೆ. ಅಕ್ರಮ ಎಸಗಿರುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಡಳಿತಕ್ಕೆ ಒಡಿಶಾದ ವಿಚಕ್ಷಣಾ ಅಧಿಕಾರಿಗಳು ದೂರು ಸಲ್ಲಿಸುವ ಸಾಧ್ಯತೆ ಇದೆ.

ಇದೇ ವೇಳೆ, ಧರ್ಮೇಂದ್ರ ಪ್ರಧಾನ್ ಅವರ ಸೋದರನ ಗ್ಯಾಸ್ ಏಜೆನ್ಸಿ ಮೇಲೆ ನಡೆದಿರುವ ರೇಡ್ ಘಟನೆಯನ್ನು ರಾಜಕೀಯ ಪ್ರೇರಿತ ಎಂದು ಬಿಜೆಪಿ ಬಣ್ಣಿಸಿದೆ. ಒಡಿಶಾದ ಬಿಜೆಡಿ ಸರಕಾರವು ವಿಚಕ್ಷಣಾ ದಳದ ಅಧಿಕಾರವನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದೆ.

click me!