ರಾಯಚೂರಲ್ಲಿ 23 ವರ್ಷಗಳಲ್ಲೇ ಭೀಕರ ಬರ

Published : Dec 15, 2018, 11:46 AM IST
ರಾಯಚೂರಲ್ಲಿ 23 ವರ್ಷಗಳಲ್ಲೇ ಭೀಕರ ಬರ

ಸಾರಾಂಶ

ರಾಯಚೂರಿನಲ್ಲಿ ಅತ್ಯಂತ ಭೀಕರ ಬರಗಾಲ ಪರಿಸ್ಥಿತಿ ಎದುರಾಗಿದೆ. ನೀರಾವರಿ ಪ್ರದೇಶಕ್ಕೆ ಬಾರದ ನೀರು, ಜಾನುವಾರುಗಳಿಗೆ ಮೇವಿನ ಸಂಗ್ರಹದ ಪರದಾಟ, ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿಗೂ ಗೋಳಾಟ ಉಂಟಾಗಿದೆ. 

 ರಾಯಚೂರು : ಸತತ ಬರ, ನೀರಾವರಿ ಪ್ರದೇಶಕ್ಕೆ ಬಾರದ ನೀರು, ಜಾನುವಾರುಗಳಿಗೆ ಮೇವಿನ ಸಂಗ್ರಹದ ಪರದಾಟ, ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿಗೂ ಗೋಳಾಟ.  ಈ ರೀತಿ ಈಗಾಗಲೇ ಜಿಲ್ಲೆಯ ಜನರು ಭೀಕರ ಬರ ಸನ್ನಿವೇಶದಲ್ಲಿ ಬಳಲಿ ಬೆಂಡಾಗಿದ್ದಾರೆ. ಜಿಲ್ಲೆಯ ನಾಲ್ಕೂ ತಾಲೂಕುಗಳಾದ ಲಿಂಗಸ್ಗೂರು, ಸಿಂಧನೂರು, ಮಾನ್ವಿ, ದೇವದುರ್ಗ ವ್ಯಾಪ್ತಿಯ ಜನ ಮುಂದಿನ ದಿನಗಳು ಹೇಗೋ ಏನೋ ಎಂದು ಪರಿತಪಿಸುವಂತಾಗಿದೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಆರಂಭದಲ್ಲಿ ಮಳೆಯಾದರೂ ನಂತರ ವರುಣನ ಅವಕೃಪೆಯ ಫಲವಾಗಿ ಬಿತ್ತಿದ ಬೆಳೆಗಳು ಸಂಪೂರ್ಣವಾಗಿ ನಾಶಗೊಂಡಿವೆ. 1,25,547 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಗೀಡಾಗಿ ಸುಮಾರು 496.98 ಕೋಟಿ ರು. ಬೆಳೆ ನಷ್ಟಉಂಟಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆ ಮತ್ತು ಕೃಷ್ಣಾ-ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ಅಸಮರ್ಪಕ ನೀರು ಸರಬರಾಜಿನ ಪರಿಣಾಮ ಅಚ್ಚುಕಟ್ಟಿನ ರೈತರು ನೀರಿಗಾಗಿ ಹೋರಾಟಗಳನ್ನು ಮಾಡುತ್ತಿದ್ದು ಒಂದೇ ಬೆಳೆಗೆ ನೀರು ಉಣಿಸುವುದು ಕಷ್ಟಎನ್ನುವ ಸನ್ನಿವೇಶ ನಿರ್ಮಾಣಗೊಂಡಿದೆ. ಪಶುಸಂಗೋಪನೆ ಇಲಾಖೆಯಡಿ ಕೇವಲ ಏಳು ವಾರಗಳಿಗೆ ಆಗುವಷ್ಟುಮೇವು ಸಂಗ್ರಹವಿದ್ದು, ಹಿಂಗಾರು ಮಳೆ ತೀರಾ ಕಡಿಮೆಯಾಗಿದ್ದರಿಂದ ಮೇವು ಸಿಗದೇ ಜಾನುವಾರುಗಳು ತೀವ್ರ ಸಮಸ್ಯೆಯನ್ನು ಅನುಭವಿಸುತ್ತಿದೆ.

ಕುಡಿವ ನೀರಿನ ಸಮಸ್ಯೆ:

23 ವರ್ಷಗಳ ಬಳಿಕ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆ (ಶೇ.60 ಮಳೆ ಕೊರತೆ) ದಾಖಲಾಗಿರುವುದರಿಂದ ಅಂತರ್ಜಲ ಮಟ್ಟದ ಪಾತಾಳಕ್ಕಿಳಿದಿದ್ದು ಗ್ರಾಮೀಣ, ಪಟ್ಟಣ ಪ್ರದೇಶಗಳೆರಡರಲ್ಲೂ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ನೂರಾರು ಬೋರ್‌ವೆಲ್‌ಗಳು, ಹಳ್ಳ, ಕೊಳ್ಳಗಳು, ಕೆರೆಗಳು ಬತ್ತಿ ಹೋಗುತ್ತಿವೆ. ಜಿಲ್ಲೆಯ 35 ಹಳ್ಳಿಗಳಲ್ಲಿ 31ಕ್ಕೂ ಹೆಚ್ಚಿನ ಖಾಸಗಿ ಬೋರ್‌ವೆಲ್‌ಗಳನ್ನು ಬಳಸಿಕೊಂಡು ಜನರಿಗೆ ನೀರು ಒದಗಿಸಲಾಗುತ್ತಿದೆ. ಕುಡಿವ ನೀರಿನ ಸಮಸ್ಯೆ ಎದುರಾಗುವ ಸಂಭವನೀಯ 28 ಹಳ್ಳಿಗಳನ್ನು ಗುರುತಿಸಿದ್ದು, ಮುಂದಿನ ದಿನಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬರ ನಿರ್ವಹಣೆಗಾಗಿ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಿಗೆ ತಲಾ 50 ಲಕ್ಷ ರು. ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಮೊದಲ ಹಂತವಾಗಿ ತಲಾ 25 ಲಕ್ಷ ರು.ಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ.

ಮುಂಗಾರು ಬೆಳೆ ನಷ್ಟ:  ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 3,50,551 ಹೆಕ್ಟೇರ್‌ ಬಿತ್ತನೆ ಗುರಿಯನ್ನು ಹೊಂದಲಾಗಿತ್ತು. ಅದರಲ್ಲಿ 2,65,316 ಹೆಕ್ಟೇರ್‌ ಬಿತ್ತನೆ ಮಾಡಿದ್ದು, 1,25,547 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟಉಂಟಾಗಿದೆ. ಜಿಲ್ಲೆಯಲ್ಲಿ 25,161 ಹೆಕ್ಟೇರ್‌ ಪ್ರದೇಶದಲ್ಲಿ ಜೋಳದ ಬೆಳೆ, 55,629 ಹೆಕ್ಟೇರ್‌ನಲ್ಲಿ ತೊಗರಿ, 390 ಹೆಕ್ಟೇರ್‌ ಹೆಸರು, 78 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ, 37785 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ, 6116 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಸೇರಿ ಇತರೆ ಬೆಳೆಗಳು ನಷ್ಟಕ್ಕೀಡಾಗಿವೆ.

ಹಿಂಗಾರು ಸಹ ವಿಫಲ: 
ಘನಘೋರವಾಗಿ ಮುಂಗಾರು ವೈಫಲ್ಯತೆಯನ್ನು ಕಂಡಿರುವ ರೈತರು ಇದೀಗ ಹಿಂಗಾರು ಹಂಗಾಮಿನಲ್ಲಿ ಸಹ ವಿಫಲತೆಯ ಕಹಿ ಅನುಭವವನ್ನು ಕಾಣುತ್ತಿದ್ದಾರೆ. ಹಿಂಗಾರಿನಲ್ಲಿ ಸಹ ಮಳೆಯಾಗದ ಕಾರಣಕ್ಕೆ ಭತ್ತ, ಜೋಳ, ಕಡಲೆ, ಮೆಣಸಿನ ಕಾಯಿ, ಹತ್ತಿ ಬೆಳೆಗಳು ಇಳುವರಿ ಕಾಣದೇ ಒಣಗಿ ಹೋಗುತ್ತಿವೆ. ಸಾಲಮನ್ನಾ ಗೊಂದಲ ಬಗೆಹರಿಯದಿರುವುದು, ಬೆಳೆ ವಿಮೆ ಮೊತ್ತದ ಅಸಮರ್ಪಕ ಹಂಚಿಕೆಯ ಪರಿಣಾಮವಾಗಿ ಹಿಂಗಾರು ಬೆಳೆ ವಿಮೆ ನೋಂದಣಿಯಲ್ಲಿ ಸಹ ರೈತರು ನಿರಾಸಕ್ತಿ ತೋರುತ್ತಿದ್ದಾರೆ. ಬರ ಘೋಷಣೆಯಾಗಿ ಮೂರ್ನಾಲ್ಕು ತಿಂಗಳು ಕಳೆಯುತ್ತಿದ್ದರೂ ಮುಂಗಾರು ಬೆಳೆ ನಷ್ಟದ ಪರಿಹಾರ ಒದಗಿಸಲು ಸರ್ಕಾರ ಆಸಕ್ತಿ ತೋರುತ್ತಿಲ್ಲ. ಇದೀಗ ಹಿಂಗಾರು ಬೆಳೆಗಳು ಸಹ ನಷ್ಟದ ಹಾದಿಯನ್ನು ಹಿಡಿದಿದ್ದು ಇದರ ಸಮೀಕ್ಷೆ ನಡೆಸಿ ಮುಂಗಾರು ಮತ್ತು ಹಿಂಗಾರು ಬೆಳೆ ನಷ್ಟಪರಿಹಾರವನ್ನು ಕಲ್ಪಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

19 ರೈತರ ಆತ್ಮಹತ್ಯೆ

ಬರ, ಬೆಳೆ ನಷ್ಟ, ಸಾಲಬಾಧೆ ಮತ್ತಿತರ ಕಾರಣಗಳಾಗಿ ಈ ವರ್ಷ 8 ತಿಂಗಳಲ್ಲಿ ಒಟ್ಟು 19 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿಂಧನೂರಿನಲ್ಲಿಯೇ 9 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಳೆ ಪ್ರಮಾಣ ಹೆಚ್ಚಳ

ರಾಯಚೂರಿನಿಂದ ಪ್ರತಿ ವರ್ಷ ಸಹಜವಾಗಿಯೇ ಬೆಂಗಳೂರು, ಪುಣೆ, ಮುಂಬೈಗಳಿಗೆ ದುಡಿಯಲು ಹೋಗುತ್ತಾರೆ. ಈ ಬಾರಿ ಭೀಕರ ಬರಗಾಲದಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳ ಗೌಣಗೊಂಡಿದ್ದರಿಂದ ಗುಳೆ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ. ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಮತ್ತು ಮಾನ್ವಿ ತಾಲೂಕುಗಳ ವ್ಯಾಪ್ತಿಗೆ ಬರುವ ಗ್ರಾಮ, ತಾಂಡಾಗಳಲ್ಲಿನ ಜನ ಅತೀ ಸಂಖ್ಯೆಯಲ್ಲಿ ಮಹಾನಗರಗಳತ್ತ ಮುಖ ಮಾಡಿದ್ದಾರೆ.

ಜಿಲ್ಲೆಯಲ್ಲಿ ಬರ ನಿರ್ವಹಣೆ ಮಾಡುವುದಕ್ಕಾಗಿ ತಾಲೂಕುವಾರು ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಮುಂಗಾರು ಬೆಳೆ ನಷ್ಟದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಿಂಗಾರು ಬೆಳೆ ಸಮೀಕ್ಷೆಯನ್ನು ಇಷ್ಟರಲ್ಲಿಯೇ ಕೈಗೊಳ್ಳಲಾಗುವುದು.

-ಶರತ್‌.ಬಿ ಜಿಲ್ಲಾಧಿಕಾರಿ, ರಾಯಚೂರು

ಬರದ ಭೀಕರತೆಗೆ ರೈತರ ಬದುಕು ಬಾಡಿ ಹೋಗಿದೆ. ಹಿಂದೆ ಕಾಣದಂತಹ ಬರ ಸನ್ನಿವೇಶ ಎದುರಾಗಿದ್ದು, ಬರ ಪರಿಸ್ಥಿತಿಯ ಗಂಭೀರತೆಯನ್ನು ಸರ್ಕಾರ ಅರ್ಥ ಮಾಡಿಕೊಂಡಿಲ್ಲ. ಆದ್ದರಿಂದ ಪರಿಹಾರ ಕ್ರಮಗಳನ್ನು ಸಹ ಜರುಗಿಸುತ್ತಿಲ್ಲ.

-ಎನ್‌.ಲಕ್ಷ್ಮಣಗೌಡ ಕಡಗಂದೊಡ್ಡಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ


ವರದಿ :  ರಾಮಕೃಷ್ಣ ದಾಸರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿದ ಲಕ್ಷ್ಮೇಶ್ವರ ಪುರಸಭೆ!
ಪರಿಷತ್‌ನಲ್ಲಿ ಮಧುಗೆ ಮೆಚ್ಚುಗೆ: 'ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ?' ಕಾಲೆಳೆದ ಸಿಟಿ ರವಿ!